ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿ ಗೂಟ ಹೊಡೆದಿರುವ ಪೊಲೀಸರ ಮಾಹಿತಿ ನೀಡಿ; ತಪ್ಪು ಮಾಹಿತಿ ನೀಡಿದರೆ ಶಿಸ್ತು ಕ್ರಮದ ಎಚ್ಚರಿಕೆ
ಈ ಹಿಂದೆ ಉಡುಪಿ ಎಸ್ಪಿಯಾಗಿ ದಕ್ಷ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದ ಡಾ. ಅರುಣ್ ನಿನ್ನೆ ಸಂಜೆ ದಕ್ಷಿಣ ಕನ್ನಡ ನೂತನ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳಿಗೆ ವಿಶೇಷ ಟಾಸ್ಕ್ ವೊಂದನ್ನು ನೀಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಒಂದೇ ಠಾಣೆಗಳಲ್ಲಿ ಝಂಡಾ ಹೂಡಿರುವ ಎಎಸ್ಐ, ಎಚ್ ಸಿ ಮತ್ತು ಪಿಸಿ ಗಳ ಮಾಹಿತಿಗಳನ್ನು ಇಂದು ಸಂಜೆ (ಮೇ 31) 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆ ಆದೇಶಿಸಿದ್ದಾರೆ.
ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಸಂಬಂಧಿಸಿದ ಠಾಣಾಧಿಕಾರಿ ಅಥವಾ ಠಾಣಾ ಬರಹಗಾರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪದೋನ್ನತಿ ಅಥವಾ ವರ್ಗಾವಣೆಗೊಂಡು ಬಳಿಕ ಆರು ತಿಂಗಳೊಳಗೆ ಮತ್ತದೇ ಠಾಣೆಯಲ್ಲಿ ಮುಂದುವರಿದಿರುವ, ಕೋರಿಕೆ ಮೇರೆಗೆ ಅದೇ ಠಾಣೆಯಲ್ಲಿ ಕರ್ತವ್ಯ ಮುಂದುವರಿಸುತ್ತಿರುವವರ ವಿವರಗಳನ್ನು ಕೂಡಾ ನೀಡುವಂತೆ ಸೂಚಿಸಿದ್ದಾರೆ. ಇದರ ಜೊತೆಗೆ ಎರಡು ವರ್ಷದೊಳಗೆ ನಿವೃತ್ತಿ ಹೊಂದಲಿರುವ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಹಾಗೂ ಪತಿ- ಪತ್ನಿ ಸರಕಾರಿ ನೌಕರರಾಗಿದ್ದಲ್ಲಿ ಆ ಬಗ್ಗೆಯೂ ಮಾಹಿತಿಗಳನ್ನು ನಮೂದಿಸಬೇಕು ಎಂದು ತಿಳಿಸಲಾಗಿದೆ.

ಸದಾ ಕೋಮು ದಳ್ಳುರಿಯಲ್ಲಿ ನಲಕಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಮೇಜರ್ ಸರ್ಜರಿ ಅನ್ನುವಂತೆ ಖಡಕ್ ಆಫೀಸರ್ ಎಂದು ಕರೆಸಿಕೊಂಡಿರುವ ಅರುಣ್ ಅವರನ್ನು ಜಿಲ್ಲಾ ಎಸ್ಪಿ ಯಾಗಿ ಸರಕಾರ ನೇಮಿಸಿತ್ತು. ಪೊಲೀಸ್ ಉನ್ನತ ಅಧಿಕಾರಿಗಳ ಬದಲಾವಣೆ ಆದರೆ ಸಾಲದು ಠಾಣಾ ಮಟ್ಟದ ಪೊಲೀಸ್ ವಿಭಾಗದಲ್ಲೂ ಬದಲಾವಣೆ ಆಗಬೇಕು ಅನ್ನುವ ಕೂಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು. ಇದೀಗ ಜಿಲ್ಲಾ ಎಸ್ಪಿ ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿರುವ ಸಿಬ್ಬಂದಿಗಳ ಮಾಹಿತಿಗಳನ್ನು ಕಲೆ ಹಾಕಲು ಆದೇಶಿಸಿರುವುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
