ಸುಹಾಸ್ ಶೆಟ್ಟಿ ಹತ್ಯೆ ಕೇಸ್: ಆರೋಪಿಗಳಿಗೆ ಆಶ್ರಯ ನೀಡಿದ ಮುಝಮ್ಮಿಲ್ ತಂದೆಯ ಬಂಧನ
ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ತೆಂಕಬೆಳ್ಳೂರು ನಿವಾಸಿ ಅಭಿನ್ ರೈ, ಬಡಗಬೆಳ್ಳೂರು ನಿವಾಸಿ ತೇಜಾಕ್ಷ ಎಂಬಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಾಗಿರುವ ಅಭಿನ್ ರೈ 2017 ಜೂನ್ 21 ರಂದು ನಡೆದ ಕಲಾಯಿ ಅಶ್ರಫ್ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತ ಭರತ್ ಕುಮ್ದೇಲ್ ಪ್ರಮುಖ ಸಹಚರನಾಗಿದ್ದಾನೆ. ರಹಿಮಾನ್ ಹತ್ಯೆ ಅಶ್ರಫ್ ಕಲಾಯಿ ಹತ್ಯೆಯ ಮಾದರಿಯಲ್ಲೇ ನಡೆದಿತ್ತು. ಅಬ್ದುಲ್ ರಹಿಮಾನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಏಳಕ್ಕೇರಿದೆ.

ಈ ಮಧ್ಯೆಯೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಬಜಪೆಯಲ್ಲಿ ಮೇ 1 ರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಜಪೆ ಶಾಂತಿ ಗುಡ್ಡೆ ನಿವಾಸಿ ಅಬ್ದುಲ್ ರಝಾಕ್ ಎಂಬವರನ್ನು ಬಂಧಿಸಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಮುಝಮ್ಮಿಲ್ ತಂದೆಯಾಗಿದ್ದಾರೆ ಬಂಧಿತ ರಝಾಕ್. ಮುಝಮ್ಮಿಲ್, ಚೊಟ್ಟೆ ನೌಶಾದ್ ತಲೆಮರೆಸಿಕೊಳ್ಳಲು ನೆರವು ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಮಂಗಳೂರು ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸುಧೀರ್ ರೆಡ್ಡಿ ಹಂತಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರನ್ನೆಲ್ಲ ಆರೋಪಿಗಳನ್ನಾಗಿ ಮಾಡುವುದಾಗಿ ಹೇಳಿದ್ದರು. ಇದೀಗ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡಿದವರ ಬೇಟೆಗೆ ಪೊಲೀಸರು ಇಳಿದಿದ್ದಾರೆ.
