ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಇರಾ ಕಾಂಬೋಡಿ ಎಂಬಲ್ಲಿ ಮೇ 27 ರಂದು ಮರಳು ಆರ್ಡರ್ ಹೆಸರಿನಲ್ಲಿ ಮೋಸದಿಂದ ಕರೆಸಿ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಖಲಂದರ್ ಶಾಫಿ ಎಂಬಾತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕಾಗಿ ಈ ಹತ್ಯೆ ನಡೆದಿತ್ತು.
ಘಟನೆಯ ಸಂಬಂಧ ಪೊಲೀಸರು ಐದು ತಂಡಗಳನ್ನು ರಚಿಸಿ ಹಂತಕರ ಪತ್ತೆಗೆ ಇಳಿದಿತ್ತು. ಹತ್ಯೆಯಾದ ಎರಡೇ ದಿನದಲ್ಲಿ ಮೂವರು ಆರೋಪಿಗಳಾದ ದೀಪಕ್ ಪೂಜಾರಿ, ಪೃಥ್ವಿರಾಜ್ ಜೋಗಿ, ಚಿಂತನ್ ಬೆಳ್ಚಡ ಎಂಬವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣಾ ಸಂದರ್ಭದಲ್ಲಿ ಆರೋಪಿಗಳು ಅಬ್ದುಲ್ ರಹಿಮಾನ್ ಚಲಾಯಿಸುತ್ತಿದ್ದ ಪಿಕಪ್ ವಾಹನದ ಕೀಯನ್ನು ಮೂಡಬಿದ್ರೆ ಗಂಟಾಲ್ ಕಟ್ಟೆ ಬಳಿ ಬಿಸಾಕಿರುವುದಾಗಿ ಬಾಯ್ಬಿಟ್ಟಿದ್ದರು. ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ನಿನ್ನೆ ಮಧ್ಯಾಹ್ನ ಗಂಟಾಲ್ ಕಟ್ಟೆ ಬಳಿ ಶೋಧ ಕಾರ್ಯ ನಡೆಸಿದ್ದು, ಆದರೆ ಕೀ ದೊರೆತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೂ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
