ಎದೆಗುಂದದ ದಿಟ್ಟ ಹೋರಾಟಗಾರ್ತಿ.. ಕುಪ್ಪೆಪದವಿನ ‘ರಾಣಿ ಅಬ್ಬಕ್ಕ’.!

Uncategorized

ಜನಪರ ಹೋರಾಟಗಳಲ್ಲಿ ಸೈ..ಆಡಳಿತಾರೂಢರಿಗೆ ಸಿಂಹಸ್ವಪ್ನೆ ‘ಕಾಮ್ರೇಡ್ ವಸಂತಿ’

ಆಕೆ ಶಾಲೆಯ ಮೆಟ್ಟಿಲು ಹತ್ತಿದ್ದು ಬರೀ ಏಳನೇ ಕ್ಲಾಸು.. ಆದರೂ ಆಕೆ ತಾನು ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಹಠ, ಛಲವಿತ್ತು. ಕೇವಲ ವಿದ್ಯೆವೊಂದಿದ್ದರೆ ಸಾಲದು. ಸಾಧಿಸಬೇಕೆನ್ನುವ ಹಠ, ಛಲವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಈ ಹಳ್ಳಿಯ ಮಹಿಳೆಯೇ ಸಾಕ್ಷಿ. ಆಕೆ ಬೇರಾರೂ ಅಲ್ಲ. ಕುಪ್ಪೆಪದವಿನಲ್ಲಿ ಕಮ್ಯುನಿಸ್ಟ್ ಧ್ವಜ ಹಾರಿಸಿದ ಹೋರಾಟಗಾರ್ತಿ ಕಾಮ್ರೇಡ್ ವಸಂತಿ. ಎಲ್ಲರ ಪ್ರೀತಿಯ ವಸಂತಿ ಅಕ್ಕ,

ಹೋರಾಟಗಾರರು, ಸಾಧಕರು ಹುಟ್ಟುವುದೇ ಗ್ರಾಮೀಣ ಪ್ರದೇಶಗಳಲ್ಲಿ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ವಿದ್ಯೆ ಇಲ್ಲದಿದ್ದರೂ ತಾವು ಸಾಧಿಸಬೇಕೆನ್ನುವ ಹಠ, ಛಲ, ಆತ್ಮವಿಶ್ವಾಸ ಇದ್ದರೆ ಅದುವೇ ಸಾಧನೆಗೆ ದಾರಿಯಾಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಕುಪ್ಪೆಪದವಿನ ವಸಂತಿ.

ವಸಂತಿ ಸಿಪಿಐಎಂ ದ.ಕ ಜಿಲ್ಲಾ ಸಮಿತಿ ಸದಸ್ಯೆ. ಹೋರಾಟವನ್ನೇ ಉಸಿರಾಗಿಸಿಕೊಂಡ ಕಾಮ್ರೇಡ್ ಸದಾಶಿವ ದಾಸ್ ರವರ ಧರ್ಮಪತ್ನಿ. ಕುಪ್ಪೆಪದವು ಪ್ರದೇಶ ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ, ಕುಪ್ಪೆಪದವು ವಲಯ ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ, ಇತ್ತೀಚೆಗೆ ರಚನೆಗೊಂಡ ಕುಪ್ಪೆಪದವು ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕರಾಗಿ ಜನಪರ ಹೋರಾಟಗಳಲ್ಲಿ ಸೈ ಅನ್ನಿಸಿಕೊಂಡಿದ್ದಾರೆ ವಸಂತಿ ಅಕ್ಕ.

ವಸಂತಿ ದಿಟ್ಟೆ ಹೋರಾಟಗಾರ್ತಿ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಈಕೆಯ ಜನಪರ ಹೋರಾಟಕ್ಕೆ ಗುರುಪುರ ವಲಯದ ನಾಗರಿಕರೆ ಫಿದಾ ಆಗಿದ್ದಾರೆ. ಇದೇ ಕಾರಣದಿಂದ ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯೆಯಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ಬಡ ಕುಟುಂಬದಲ್ಲಿ ಹುಟ್ಟಿ ಬೀಡಿ ಕಾರ್ಮಿಕೆಯಾಗಿ, ಬಡವರ ನೋವು ನಲಿವುಗಳ ಬಗ್ಗೆ ಅವರ ಕಷ್ಟದ ಬಗ್ಗೆ ಸಂಪೂರ್ಣ ಅರಿವಿರುವ ವಸಂತಿ ಬೀಡಿ ಕಾರ್ಮಿಕ ಸಂಘಟನೆಯ ಪೂರ್ಣಾವಧಿ ಸದಸ್ಯೆಯಾಗಿ ಬೀಡಿ ಕಾರ್ಮಿಕರಿಗೆ ಧ್ವನಿಯಾಗಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ಅವಧಿಯಲ್ಲಿ ಈಕೆ ಮಾಡಿದ ಕೆಲಸ ಕಾರ್ಯಗಳು ಕುಪ್ಪೆಪದವಿನ ಜನತೆ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಒಬ್ಬಳು ಮಹಿಳೆಯಾಗಿ ಪುರುಷ ಸದಸ್ಯರೇ ನಾಚುವಂತೆ ತನ್ನ ಕೆಲಸ ಕಾರ್ಯಗಳನ್ನು ಮಾಡಿ, ಹೋರಾಟ ಅಭಿವೃದ್ಧಿ ಎರಡರಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಪಂಚಾಯತ್ ಸದಸ್ಯೆಯಾಗಿದ್ದ ಅವಧಿಯಲ್ಲಿ 94C ಯಲ್ಲಿ 30 ಹಕ್ಕುಪತ್ರಗಳನ್ನು ವಿತರಿಸಿದ ಕೀರ್ತಿ ಹೊಂದಿದ್ದಾರೆ. ರಸ್ತೆ, ಕುಡಿಯುವ ನೀರು, ಚರಂಡಿ ಕಾಮಗಾರಿ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ಒತ್ತು ಕೊಟ್ಟು ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದಾರೆ. ಎನ್ ಆರ್ ಜಿ ಕಾಮಗಾರಿಗೆ ತನ್ನ ಊರಿನ ಅರವತ್ತು ಜನರ ತಂಡವನ್ನು ಕಟ್ಟಿಕೊಂಡು ಬಾವಿ, ತೋಡು, ಚರಂಡಿ ನಿರ್ಮಿಸಿ ಊರಿನವರ ಪ್ರೀತಿಗೆ ಪಾತ್ರರಾಗಿದ್ದರು. ಕುಪ್ಪೆಪದವು ಸಮುದಾಯ ಆರೋಗ್ಯ ಕೇಂದ್ರ ಉನ್ನತಿಗಾಗಿ ಹೋರಾಟ ನಡೆಸಿದ್ದರು. ಗಂಜಿಮಠ ಪ್ಲಾಸ್ಟಿಕ್ ಪಾರ್ಕ್, ಸರಕಾರಿ ಬಸ್ಸಿಗಾಗಿ ಹೋರಾಟ ನಡೆಸಿದ ಹೆಜ್ಜೆ ಗುರುತುಗಳಿವೆ. ಕುಪ್ಪೆಪದವು ಬಡ ಸಮುದಾಯದ ಜನರ ಕಣ್ಣೀರಿಗೆ ಸ್ಪಂದಿಸಿ 90 ಹಕ್ಕುಪತ್ರ ನೀಡಿದ್ದರೂ ನಿವೇಶನ ನೀಡದೆ ಸರಕಾರಿ ಅಧಿಕಾರಿಗಳು ಅಲೆದಾಡಿಸುತ್ತಿದ್ದಾಗ ಇದರ ಬಗ್ಗೆ ಧ್ವನಿ ಎತ್ತಿ ನಾಡ ಕಛೇರಿ ಚಲೋ ದ ಮುಂದಾಳತ್ವ ವಹಿಸಿ ಎಲ್ಲರಿಗೂ ಮಾದರಿಯಾಗಿದ್ದರು.

ಕಾಮ್ರೇಡ್ ವಸಂತಿ ಕುಪ್ಪೆಪದವಿನ ರಾಣಿ ಅಬ್ಬಕ್ಕ ಅನ್ವರ್ಥನಾಮಕ್ಕೆ ಸೂಕ್ತ. ಏಕೆಂದರೆ ರಾಣಿ ಅಬ್ಬಕ್ಕಳಂತೆ ಈಕೆ ಧೈರ್ಯಶಾಲಿ, ಛಲಗಾರ್ತಿ. ಎದೆಗುಂದದೆ ಯಾವುದೇ ಒತ್ತಡಕ್ಕೂ ಮಣಿಯದೆ ಹಲವಾರು ಹೋರಾಟಗಳನ್ನು ಸಂಘಟಿಸಿ ಆಡಳಿತಾರೂಢರಿಗೆ ಸಿಂಹಸ್ವಪ್ನೆಯಾಗಿದ್ದರು. ತನ್ನ ಪತಿ ಸದಾಶಿವ ದಾಸ್ ಈಕೆಯ ಎಲ್ಲಾ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ ಪರಿಣಾಮ ಹಳ್ಳಿ ಪ್ರದೇಶದ, ಆರ್ಥಿಕ ಸಂಕಷ್ಟದ ಬಡ ಕುಟುಂಬದ ನಾರಿ ಇಂದು ಗುರುಪುರ ವಲಯ ಪ್ರದೇಶಗಳಲ್ಲಿ ಅಪ್ರತಿಮ ಹೋರಾಟಗಾರರಾಗಿ ಮಿಂಚುತ್ತಿದ್ದಾರೆ. ಇತಿಹಾಸದ ದಾಖಲೆ ಪುಟಗಳಲ್ಲಿ ಸೇರಿದ ಸುರತ್ಕಲ್ ಟೋಲ್ ಗೇಟ್ ಹೋರಾಟದಲ್ಲಿ ಹಗಲು ರಾತ್ರಿ ಧರಣಿಯಲ್ಲಿ ಭಾಗವಹಿಸಿ ಹೋರಾಟದ ಹೊಸ ಶಕೆಗೂ ಕಾರಣರಾಗಿದ್ದರು. ಗುರುಪುರ ದಂತಹ ಭಾಗದಲ್ಲಿ ಜನಸಾಮಾನ್ಯರ ಸಂಕಷ್ಟ, ಆಡಳಿತಾರೂಢರ ವೈಫಲ್ಯದ ವಿರುದ್ಧ, ಈ ಭಾಗದಲ್ಲಿ ಜನಸಾಮಾನ್ಯರ ಧ್ವನಿಯಾಗಿ ನಿತ್ಯ ನಿರಂತರವಾಗಿ ಹೋರಾಟದ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಕುಪ್ಪೆಪದವು ನಿವೇಶನ ರಹಿತ ಹೋರಾಟ ಸಮಿತಿ ಸಂಚಾಲಕರಾಗಿ ಮನೆ, ನಿವೇಶನ ವಂಚಿತರ ಪರ ಹೋರಾಟ ಸಂಘಟಿಸಿ ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಹನ್ನೊಂದು ದಿನಗಳ ಕಾಲ ಹಗಲು ರಾತ್ರಿ ಧರಣಿ ನಡೆಸಿದ್ದರು. ಧರಣಿಯ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ವಿ ಪಾಟೀಲ್ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ನಂತರವೇ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಇನಾಯತ್ ಆಲಿ ಸರಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಸ್ಪಂದನೆ ಸಿಗದೆ ಹೋದರೆ ನಿಮ್ಮ ಜತೆ ಧರಣಿಯಲ್ಲಿ ಕುಳಿತುಕೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ.

ಅನಿರ್ಧಿಷ್ಟಾವಧಿ ಧರಣಿ ಮಂಟಪದಲ್ಲಿ ದಿನ ನಿತ್ಯ ಹಗಲು ರಾತ್ರಿ ಧರಣಿಗೆ ನೂರಾರು ಜನರನ್ನು ಸೇರಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಮುಸ್ಲಿಂ ಮಹಿಳೆಯರು ಧರಣಿ ಮಂಟಪದಲ್ಲಿ ಕೂತು ನ್ಯಾಯಕ್ಕಾಗಿ ಕೈ ಜೋಡಿಸಿದ್ದಾರೆ. ಇದರ ಹಿಂದೆ ವಸಂತಿ ಅನ್ನುವ ಕಮ್ಯುನಿಸ್ಟ್ ನಾರಿಯ ಹೋರಾಟದ ಬಗೆಗಿನ ವಿಶ್ವಾಸವೇ ಕಾರಣವಾಗಿತ್ತು. ಧರಣಿ ಮಂಟಪದಲ್ಲೇ ಬೀಡಿ ಕಟ್ಟುವ ಮೂಲಕ ತಳ ಸಮುದಾಯಗಳ ಕಷ್ಟದ ಅನಾವರಣವನ್ನು ಆಡಳಿತಾರೂಢರಿಗೆ ತೆರೆದಿಟ್ಟಿತ್ತು. ಒಟ್ಟಾರೆ ಗುರುಪುರ ಭಾಗದ ವಸಂತಿ ಅನ್ನುವ ದಿಟ್ಟ ಹೋರಾಟಗಾರ್ತಿ ಜಿಲ್ಲೆಯಾದ್ಯಂತ ಛಾಪು ಮೂಡಿಸಿದ್ದಾರೆ.