2021 ಜನವರಿ ತಿಂಗಳಲ್ಲಿ ಯುವತಿಯೊಬ್ಬಳು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಲಿವರ್ ನ ಸಮಸ್ಯೆಯಿಂದಾಗಿ ಒಳ ರೋಗಿಯಾಗಿ ದಾಖಲಾಗಿ ಸುಮಾರು ಹತ್ತು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಆ ಯುವತಿಯು ಮರಣ ಹೊಂದಿದ್ದು, ಯುವತಿಯ ಚಿಕಿತ್ಸೆಗೆ ತಗಲಿರುವ ವೆಚ್ಚ ಸರಿ ಸುಮಾರು 1,25,000 ರೂಪಾಯಿ ಸದ್ರಿ ಚಿಕಿತ್ಸಾ ವೆಚ್ಚವನ್ನು ನಾನು ಪಾವತಿಸುತ್ತೇನೆ ಎಂದು ಹಕೀಂ ಕೂರ್ನಡ್ಕ ಮೃತ ಯುವತಿಯ ಕುಟುಂಬದ ಪರವಾಗಿ ಖಾಸಗಿ ಆಸ್ಪತ್ರೆಗೆ ತನ್ನ ಚೆಕ್ಕನ್ನು ನೀಡಿರುತ್ತಾರೆ ಎಂದು ಆರೋಪಿಸಿ ಮಾನ್ಯ 9ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ಆಸ್ಪತ್ರೆಯವರು ಹಕೀಂ ಕೂರ್ನಡ್ಕ ವಿರುದ್ಧ ಪ್ರಕರಣವನ್ನು ದಾಖಲಿಸಿರುತ್ತಾರೆ.
ಸದ್ರಿ ಪ್ರಕರಣಕ್ಕೆ ಸಂಬಂಧಪಟ್ಟ ಸಾಮಾಜಿಕ ಕಾರ್ಯಕರ್ತರಾದ ಹಕೀಂ ಕೂರ್ನಡ್ಕ ಅವರನ್ನು ಮಾನ್ಯ 9ನೇ JMFC ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ ಹೊರಡಿಸಿರುತ್ತದೆ. ನ್ಯಾಯಾಲಯಕ್ಕೆ ಹಾಜರಾದ ಹಕೀಂ ಕೂರ್ನಡ್ಕರವರು ನಾನು ಯಾವುದೇ ಹಣವನ್ನು ಆಸ್ಪತ್ರೆಗೆ ಕೊಡಲು ಬಾಕಿ ಇರುವುದಿಲ್ಲ ಮತ್ತು ನಾನು ಯುವತಿಯ ಪರವಾಗಿ ಯಾವುದೇ ಚೆಕ್ಕನ್ನು ಖಾಸಗಿ ಆಸ್ಪತ್ರೆಗೆ ನೀಡಿರುವುದಿಲ್ಲ ಎಂದು ತನ್ನ ವಾದವನ್ನು ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಮಂಡಿಸಿರುತ್ತಾರೆ.
ಸದರಿ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಖಾಸಗಿ ಆಸ್ಪತ್ರೆಯವರು ದಾಖಲಿಸಿರುವ ಪ್ರಕರಣಕ್ಕೆ ಯಾವುದೇ ಹುರುಳಿಲ್ಲ ಮತ್ತು ಹಕೀಂ ಕೂರ್ನಡ್ಕರವರು ಖಾಸಗಿ ಆಸ್ಪತ್ರೆಗೆ ಹಣಕೊಡಲು ಬಾಕಿ ಇದೆ ಎಂದು ಸಾಧಿಸಲು ವಿಫಲರಾಗಿದ್ದಾರೆ ಎಂದು ಮಾನ್ಯ ನ್ಯಾಯಾಧೀಶರಾದ ಶಿಲ್ಪ ಬ್ಯಾಡಗಿರವರು ಅಭಿಪ್ರಾಯವನ್ನು ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯವರು ದಾಖಲಿಸಿರುವ ಪ್ರಕರಣವನ್ನು ತಿರಸ್ಕರಿಸಿ ಹಕೀಂ ಕೂರ್ನಡ್ಕ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿರುತ್ತಾರೆ.
ಈ ಪ್ರಕರಣದಲ್ಲಿ ಹಕೀಮ್ ಕೂರ್ನಡ್ಕರವರ ಪರವಾಗಿ ‘ಲೆಕ್ಸ್ ಜೂರಿಸ್ ಲಾ ಚೇಂಬರ್’ ಮಂಗಳೂರು ಇದರ ವಕೀಲರುಗಳಾದ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್, ಮುಡಿಪು, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಜ್ ಚಾರ್ಮಾಡಿ ವಾದಿಸಿದ್ದರು.
