ಫರಂಗಿಪೇಟೆ ಯಲ್ಲಿ ‘ಟೆರರಿಸ್ಟ್’ ಗಳಿದ್ದಾರೆ ಎಂದ ಸಂಘಿ ಮುಖಂಡರು ಮೌನ.. ಕೋಮು ಕಿಚ್ಚು ಪ್ಲ್ಯಾನ್ ಫೇಲ್.!

ಕರಾವಳಿ

ಸಹಜ ಪ್ರಕರಣಕ್ಕೆ ಧರ್ಮದ ಲೇಪನ..ಹುಡುಗಾಟಿಕೆಯ ದಿಗಂತ್, ಬೆತ್ತಲಾದ ನಾಯಕರು.!

ಕರಾವಳಿಯ ಸರ್ವಧರ್ಮೀಯರು ದಿಗಂತ್ ಜೀವಂತ ಮನೆ ಸೇರಲಿ ಎಂದು ಪ್ರಾರ್ಥಿಸಿದ್ದರು. ಕೊನೆಗೂ ಪ್ರಾರ್ಥನೆಗೆ ಫಲ ಸಿಕ್ಕಿದೆ. ದಿಗಂತ್ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ವಾರಕ್ಕೊಂದರಂತೆ ಕರಾವಳಿಯಲ್ಲಿ ಸಹಜ ನಾಪತ್ತೆ ಪ್ರಕರಣ ಮಾಮೂಲಿಯಾಗಿ ನಡೆಯುತ್ತಲೇ ಇದೆ. ನಾಪತ್ತೆ ಯಾದ ರೀತಿಯಲ್ಲೇ ಮನೆ ಸೇರುತ್ತಾರೆ. ಅದು ದೊಡ್ಡ ಸುದ್ಧಿಯಾಗುವುದಿಲ್ಲ. ಆದರೆ ಫರಂಗಿಪೇಟೆಯಲ್ಲಿ ನಡೆದ ಸಹಜ ನಾಪತ್ತೆ ಪ್ರಕರಣಕ್ಕೆ ಧರ್ಮದ ಲೇಪನ ಹಚ್ಚಲು ಹೊರಟ ಪರಿವಾರದ ಮುಖಂಡರು ಇದೀಗ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ದಿಗಂತ್ ಮಿಸ್ಸಿಂಗ್ ಹೆಸರಿನಲ್ಲಿ ಕರಾವಳಿಯಲ್ಲಿ ಕೋಮು ಕಿಚ್ಚು ಹರಡುವ ಪ್ಲ್ಯಾನ್ ರೂಪಿಸಿದ್ದ ಮುಖಂಡರ ಯೋಜನೆಗಳೆಲ್ಲ ಪಕ್ಕಾ ಫೇಲ್ ಆಗಿದೆ.

ಫೆಬ್ರವರಿ 25 ರಂದು ದಿಗಂತ್ ನಾಪತ್ತೆ ಪ್ರಕರಣ, ಆ ನಂತರ ಅಲ್ಪಸಂಖ್ಯಾತ ಸಮುದಾಯವೇ ಹೆಚ್ಚಿರುವ ಫರಂಗಿಪೇಟೆಯಲ್ಲಿ ಕೋಮು ಕಿಚ್ಚು ಹರಡಲು ಪ್ರಯತ್ನಿಸಿದ ಘಟನಾವಳಿಗಳು ಇದೀಗ ಬಟಾಬಯಲಾಗಿದೆ. ಮನೆ ಮಗ ನಾಪತ್ತೆಯಾದ ಸುದ್ದಿ ಕೇಳಿ ಕುಟುಂಬ ಆತಂಕಗೊಳ್ಳುವುದು ಸಹಜ. ಆದರೆ ಇದರ ಹಿಂದಿನ ಪೂರ್ವಾಪರ ತಿಳಿಯದೇ ಅದನ್ನೇ ರಾಜಕಾರಣದ ಮೆಟ್ಟಿಲಾಗಿಸಲು ಧರ್ಮ ಧರ್ಮ ಗಳ ಮಧ್ಯೆ ಕಲಹ ತಂದಿಡುವುದು ಅಕ್ಷಮ್ಯ ಅಪರಾಧ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಬಗ್ಗೆ ಒತ್ತಡ ಹೇರುವುದು ತಪ್ಪಲ್ಲ. ಆದರೆ ಈ ವಿಚಾರವನ್ನೇ ಮುಂದಿಟ್ಟುಕೊಂಡು ಧರ್ಮದ ಲೇಪನ ಹಚ್ಚಿ ಸಮಾಜವನ್ನು ಭಯಭೀತಗೊಳಿಸುವುದು ನಾಯಕರೆನಿಸಿಕೊಂಡವರ ಕೆಲಸವಲ್ಲ. ಆದರೆ ಫರಂಗಿಪೇಟೆಯಲ್ಲಿ ಜನಪ್ರತಿನಿಧಿಗಳು ಎಂದೆನಿಸಿಕೊಂಡವರು ಮಾಡಿದ ಕೆಲಸವಾದರೂ ಏನು..? ಫರಂಗಿಪೇಟೆಯಲ್ಲಿ ಅನ್ಯಮತೀಯರು ನಡೆದಾಡಲು ಹೆದರುತ್ತಿದ್ದಾರೆ. ಒಂದು ಧರ್ಮವನ್ನು ಗುರಿಯಾಗಿಸಿ ಪ್ರಚೋದನಕಾರಿ ಭಾಷಣಗಳು ಮೊಳಗಿದ್ದವು. ಸಂಘಪರಿವಾರದ ಮುಖಂಡನೊಬ್ಬನಂತೂ ಫರಂಗಿಪೇಟೆಯಲ್ಲಿ ಟೆರರಿಸ್ಟ್ ಗಳಿದ್ದಾರೆ ಎಂದು ಭಾಷಣ ಮಾಡಿದ್ದರು. ಆದರೆ ಫರಂಗಿಪೇಟೆಯ ಮುಸ್ಲಿಂ ಸಮುದಾಯ ಮಾತ್ರ ಕೋಮು ಹೇಳಿಕೆಗೆ ತಲೆಕೆಡಿಸಿಕೊಳ್ಳದೆ ಸಂಯಮ ಪಾಲಿಸಿದ್ದರು. ವ್ಯಾಪಾರ, ವಹಿವಾಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸಿದ್ದರು. ಮಸೀದಿ ಆಡಳಿತ ಸಮಿತಿ ಪೊಲೀಸ್ ಠಾಣೆಗೆ ನಿಯೋಗ ತೆರಳಿ ದಿಗಂತ್ ಪತ್ತೆ ಹಚ್ಚಲು ಮನವಿ ಮಾಡಿದ್ದರು. ದಿಗಂತ್ ಸೇಫಾಗಿ ಸಿಕ್ಕಿದ್ದಾನೆ. ಒಂದು ವೇಳೆ ಹುಡುಗಾಟಿಕೆಯ ಹುಡುಗ ಸ್ವಲ್ಪ ಹೆಚ್ಚು ಕಮ್ಮಿ ಮಾಡಿದ್ದರೆ ಫರಂಗಿಪೇಟೆಯ ಪರಿಸ್ಥಿತಿ ಏನಾಗುತ್ತಿತ್ತು. ಪ್ರಚೋದನಕಾರಿ ಭಾಷಣ ಮಾಡಿದವರ ರಿಯಾಕ್ಷನ್ ಹೇಗಿರುತ್ತಿತ್ತು..? ಇದೀಗ ದಿಗಂತ್ ಪತ್ತೆಯಾಗಿದ್ದಾನೆ. ಆದರೆ ಆತನ ಹೆಸರಿನಲ್ಲಿ ಕೋಮು ಕಿಚ್ಚು ಹರಡಲು ಪ್ರಯತ್ನಿಸಿದವರು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿಯ ಜನಪ್ರತಿನಿಧಿಗಳೆನಿಸಿಕೊಂಡವರೇ ಬೆಂಕಿ ಹಚ್ಚುವ ಹೇಳಿಕೆ ಕೊಟ್ಟರೆ ಮಂಗಳೂರು ಏಳು ಗಂಟೆಗೆ ಡೆಡ್ ಆಗದೆ ಇನ್ನೇನೂ ಆಗಬೇಕು.

ಫೆಬ್ರವರಿ 25 ರಂದು ದಿಗಂತ್ ನಾಪತ್ತೆ ಪ್ರಕರಣ, ಸಹಜ ನಾಪತ್ತೆ ಪ್ರಕರಣವನ್ನು ದೊಡ್ಡ ಇಶ್ಯೂ ಆಗಿ ಪರಿವರ್ತಿಸಿದ ರೀತಿ, ಸಂಘಟನೆ ಮುಖಂಡರು ಉಪ್ಪು, ಖಾರ ಸೇರಿಸಿ ಪ್ರಸ್ತುತ ಪಡಿಸಿದ ರೀತಿ ಎಲ್ಲದಕ್ಕೂ ದಿಗಂತ್ ಸುರಕ್ಷಿತವಾಗಿ ಸಿಗುವ ಮೂಲಕ ಮಣ್ಣುಪಾಲು ಹಾಕಿದ್ದಾನೆ. ಪರೀಕ್ಷೆಯ ಭಯ, ಹುಡುಗಾಟಿಕೆಯ ಬುದ್ಧಿ ತೋರಿಸಿ ಎಲ್ಲರನ್ನೂ ಯಾಮಾರಿಸಿದ್ದಾನೆ. ಅದೇ ರೀತಿ ಮಾರ್ಚ್ 6 ರಂದು ಬೆಂಗರೆಯಲ್ಲಿ ಮುಝೈನ್ ಅನ್ನುವ ಯುವಕ ನಾಪತ್ತೆ ಆಗಿದ್ದ. ಆದರೆ ಮುಝೈನ್ ಸಮುದಾಯ ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ದೊಡ್ಡದೊಂದು ಇಶ್ಯೂ ಮಾಡಲಿಲ್ಲ. ಆತ ನಾಪತ್ತೆ ಆಗಿ ಆತನೇ ಮನೆಗೆ ಬಂದಿದ್ದಾನೆ. ದಿಗಂತ್ ಕೇಸಲ್ಲೂ ಆತನೇ ಸ್ವಯಂ ಪ್ರೇರಣೆಯಿಂದ ನಾಪತ್ತೆಯಾಗಿ ಕೊನೆಗೆ ಆತನೇ ಇರುವಿಕೆಯ ಬಗ್ಗೆ ಹೇಳಿದ್ದಾನೆ. ಪೊಲೀಸರು ಮಿಡ್ಲ್ ಮ್ಯಾನ್ ತರಹ ಕೆಲಸ ಮಾಡಿದ್ದಾರೆ ಅಷ್ಟೇ. ಕರಾವಳಿಯಲ್ಲಿ ವಾರಕ್ಕೊಂದರಂತೆ ಇಂತಹ ಸಹಜ ಮಿಸ್ಸಿಂಗ್ ಪ್ರಕರಣ ನಡೆಯುತ್ತಲೇ ಇರುತ್ತದೆ. ಮಕ್ಕಳ ಮೇಲೆ ಪೋಷಕರು ಹೆಚ್ಚಿನ ನಿಗಾ ವಹಿಸುವುದು, ಹುಡುಗಾಟಿಕೆಯ ಹುಡುಗರು ಅಪ್ಪ -ಅಮ್ಮಂದಿರ ತೋರುವ ನಿಗಾ ವನ್ನೇ ಬಂಧನ ಅನ್ನುವುದೆಂದು ನಂಬಿ ನಾಪತ್ತೆ ಆಗುವುದೆಲ್ಲ ಮಾಮೂಲಿನಂತೆ ನಡೆಯುತ್ತಿರುತ್ತದೆ. ಆದರೆ ಪೂರ್ವಾಪರ ತಿಳಿಯದೆ ಧರ್ಮದ ಲೇಪನ ಹಚ್ಚಿ ಕೋಮು ಸ್ವಾಸ್ಥ್ಯ ಹದೆಗೆಡಲು ಪ್ರಯತ್ನಿಸುವುದು, ಜನಪ್ರತಿನಿಧಿಗಳೇ ಅದಕ್ಕೆ ನಾಯಕತ್ವ ನೀಡುವುದು ಇವರೆಲ್ಲರ ಬುದ್ಧಿ ಹುಡುಗಾಟಿಕೆಯ ವಯಸ್ಸಿನ ಹುಡುಗರಂತಹದ್ದು.! ಎಲ್ಲದಕ್ಕೂ ಧರ್ಮ ಧರ್ಮ ಎಂದೇಳಿ ರಣಹದ್ದುಗಳಂತೆ ಕಾಯುವವರಿಗೆ ದಿಗಂತ್ ಮಿಸ್ಸಿಂಗ್ ಪ್ರಕರಣ ಪಾಠವಾಗಬೇಕು. ಇನ್ನೂ ಪಾಠ ಕಲಿಯದೇ ಇದ್ದರೆ ಕರಾವಳಿ ಸಂಜೆ ಏಳು ಗಂಟೆಯ ನಂತರವಲ್ಲ ಬೆಳಿಗ್ಗೆಯಿಂದಲೇ ಡೆಡ್ ಆಗಬಹುದು.