ಉಡುಪಿಯನ್ನೇ ಅಡ್ಡೆ ಮಾಡಿಕೊಂಡಿದ್ದ ಡ್ರಗ್ಸ್ ಪೆಡ್ಲರ್ ಗಳು.! ಅಂತರಾಜ್ಯ ಡ್ರಗ್ಸ್ ದಂಧೆಕೋರರ ಮಟ್ಟ ಹಾಕಿದ ಕೇಂದ್ರ NCB: ಅಮಿತ್ ಶಾ ಶ್ಲಾಘನೆ

ಕರಾವಳಿ

ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಬಯಲಿಗೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಎಂಟು ಮಂದಿಯನ್ನು ಬಂಧಿಸಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಡ್ರಗ್ಸ್ ಗ್ಯಾಂಗ್ ಉಡುಪಿಯನ್ನೇ ಅಡ್ಡೆ ಮಾಡಿಕೊಂಡು ಕಾಲ್ ಸೆಂಟರ್ ಸ್ಥಾಪಿಸಿ ಆ ಮೂಲಕ ಡ್ರಗ್ಸ್ ವ್ಯವಹಾರದ ಕಾರ್ಯಾಚರಣೆ ನಡೆಸುತ್ತಿತ್ತು. ಉಡುಪಿ, ದಿಲ್ಲಿ, ಜೈಪುರ, ರೂರ್ಕಿಯಲ್ಲಿ ಕಾಲ್ ಸೆಂಟರ್ ಗಳನ್ನು ನಿರ್ವಹಿಸುತ್ತಿತ್ತು. ಉಡುಪಿ ಕಾಲ್ ಸೆಂಟರ್ ನಲ್ಲಿ 10 ಮಂದಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ವಿವಿಧ ದೇಶಗಳಿಂದ ಮಾದಕ ದ್ರವ್ಯಗಳ ಆರ್ಡರ್ ಪಡೆಯುವುದು ಸೇರಿ ವಿವಿಧ ವ್ಯವಹಾರಗಳನ್ನು ಗ್ಯಾಂಗ್ ನಡೆಸುತ್ತಿತ್ತು. ಈ ಗ್ಯಾಂಗ್ ಕ್ರಿಪ್ಟೋ ಕರೆನ್ಸಿ ಪಾವತಿ ಮತ್ತು ಅನಾಮಧೇಯ ಡ್ರಾಫ್ ಶಿಫ್ ಮೆನ್ ನಂತಹ ಅತ್ಯಾಧುನಿಕ ವಿಧಾನಗಳನ್ನು ಬಳಸುತ್ತಿದ್ದವು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಜಾಗತಿಕ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ NCB ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಮೆಚ್ಚಿ ಟ್ವೀಟ್ ಮಾಡಿದ್ದು, ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿದಂತೆ ನಾಲ್ಕು ಖಂಡಗಳ ಹತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾಲವನ್ನು ಮಟ್ಟ ಹಾಕಿದ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.