KIADB ಅಧಿಸೂಚಿತ ಮತ್ತು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕಾ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಅಧಿಕಾರವಿಲ್ಲ: ಹೈಕೋರ್ಟ್

ರಾಜ್ಯ

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಸೂಚಿತ ಮತ್ತು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕಾ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಿಗೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ನೆಲಮಂಗಲದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಹಲವಾರು ಇತರ ಕೈಗಾರಿಕಾ ಸಂಸ್ಥೆಗಳಿಗೆ ಸೋಂಪುರ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್ ಗಳನ್ನು ಪ್ರಶ್ನಿಸಿ ಕಲ್ಪತರು ಬ್ರಿವರೀಸ್ ಮತ್ತು ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಅರ್ಜಿಗಳನ್ನು ಮಾನ್ಯ ಮಾಡಿ, ಸೋಂಪುರ ಗ್ರಾಮ ಪಂಚಾಯತಿ ಕೈಗಾರಿಕಾ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಪಾವತಿಸುವಂತೆ ನೀಡಿದ್ದ ನೋಟಿಸ್ ಗಳನ್ನು ರದ್ದುಗೊಳಿಸಿದೆ.

“ಕೆಐಎಡಿಬಿ ಕಾಯಿದೆ -1996 ರ ನಿಬಂಧನೆಗಳಡಿ ಕೈಗಾರಿಕಾ ಪ್ರದೇಶಗಳಲ್ಲಿ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಹಕ್ಕು ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಅನುಮೋದಿಸುವ ಅಧಿಕಾರವು ಕೆಐಎಡಿಬಿ ಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಶಾಸನಬದ್ಧ ಸಮ್ಮತಿಯ ಅನುಪಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅಂತಹ ಅಧಿಕಾರವಿಲ್ಲ ಮತ್ತು ಅಂತಹ ಅಧಿಕಾರವನ್ನು ಕೆಐಎಡಿಬಿ ಯಿಂದ ಕಸಿದುಕೊಳ್ಳಲು ಸಾದ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ರಾಜ್ಯ ಸರಕಾರವು ಕೆಐಎಡಿಬಿ ಕಾಯಿದೆಯ ಸೆಕ್ಷನ್ 37ರಡಿ ಕೈಗಾರಿಕಾ ಪ್ರದೇಶಗಳನ್ನು ಕೆಐಎಡಿಬಿ ನಿಯಂತ್ರಣದಿಂದ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ವರ್ಗಾಯಿಸಿ ಅಧಿಸೂಚನೆ ವರ್ಗಾಯಿಸಿದ್ದಾಗ ಮಾತ್ರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೈಗಾರಿಕಾ ಪ್ರದೇಶಗಳ ಮೇಲೆ ನ್ಯಾಯವ್ಯಾಪ್ತಿ ಹೊಂದಲಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

“ರಾಜ್ಯ ಸರಕಾರ ಅಂತಹ ಅಧಿಸೂಚನೆ ಹೊರಡಿಸುವವರೆಗೆ ಕೆಐಎಡಿಬಿ ಅಧಿಕಾರ ವ್ಯಾಪ್ತಿ ಪ್ರತ್ಯೇಕವಾಗಿರಲಿದೆ. ಅಲ್ಲದೆ ಕೆಐಎಡಿಬಿ ಕಾಯಿದೆಯ ಸೆಕ್ಷನ್ 47 ಮತ್ತು ಅದರ ನಿಬಂಧನೆಗಳಿಗೆ ಹೊಂದಿಕೆಯಾಗದ ಯಾವುದೇ ಇತರ ಕಾನೂನಿನ ಮೇಲೆ ಕಾಯಿದೆಯ ನಿಬಂಧನೆಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಆದ್ದರಿಂದ ಶಾಸನಬದ್ಧ ಯೋಜನೆಯು ಗ್ರಾಮ ಪಂಚಾಯಿತಿಗಳೂ ಸೇರಿದಂತೆ ಯಾವುದೇ ಸ್ಥಳೀಯ ಪ್ರಾಧಿಕಾರವು ಪರೋಕ್ಷವಾಗಿ ಅಥವಾ ಆಕಸ್ಮಿಕವಾಗಿ ಅಧಿಕಾರ ವ್ಯಾಪ್ತಿ ಚಲಾಯಿಸಲು ಯಾವುದೇ ಅವಕಾಶವಿರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.