ಮಂಗಳೂರು ತಾಲೂಕಿನ ನೀರುಮಾರ್ಗ ಬಳಿಯ ಜಿ.ಆರ್. ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಎಂಟು ಲಕ್ಷ ರೂಪಾಯಿ ಡೊನೇಷನ್ ವಸೂಲಿ ಮಾಡಿಕೊಂಡಿದ್ದ ಕಾಲೇಜು ಆಡಳಿತ ಮಂಡಳಿ, ಆ ಹಣವನ್ನು ಮರಳಿ ವಿದ್ಯಾರ್ಥಿಗೆ ಹಿಂದಿರುಗಿಸುವಂತೆ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ. ಶ್ರೀನಿವಾಸ ಗೌಡರು ಸೂಚನೆ ನೀಡಿದ್ದಾರೆ.
ಜಿ.ಆರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿ ಆರ್ ಕೆ ಆದಿತ್ಯ ಎಂಬುವವರಿಂದ ಹೆಚ್ಚುವರಿ ಹಣ ಪಾವತಿಸಿಕೊಂಡಿದ್ದರು. ಈ ಕುರಿತು ವಿದ್ಯಾರ್ಥಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಶುಲ್ಕ ನಿಯಂತ್ರಣ ಸಮಿತಿಗೆ ದೂರು ನೀಡಿದ್ದರು. ಇದೀಗ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿದ ಶುಲ್ಕ ನಿಯಂತ್ರಣ ಮಂಡಳಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವುದನ್ನು ಹಿಂತಿರುಗಿಸುವಂತೆ ಸೂಚನೆ ಕೊಟ್ಟಿದೆ.
ವರ್ಷಗಳ ಹಿಂದೆ ಜಿ.ಆರ್ ಮೆಡಿಕಲ್ ಕಾಲೇಜು ಕಾನೂನು ಬಾಹಿರವಾಗಿ ಸೀಟು ಹಂಚಿಕೆ ಮಾಡಿರುವ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂ ಸಿ) ಕಾನೂನು ಕ್ರಮ ಜರುಗಿಸಲು ಮುಂದಾಗಿತ್ತು. ವಿದ್ಯಾರ್ಥಿಗಳು ಕಾಲೇಜಿನ ವಿರುದ್ಧವೇ ಪ್ರತಿಭಟಿಸಿದ್ದರು.
