ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಹಿಡಿದ ಶನಿ ಬಿಡುವಂತೆ ಕಾಣುತ್ತಿಲ್ಲ. ಯಾರೇ ಮುಖ್ಯಾಧಿಕಾರಿಗಳು ಬಂದರೂ ಪಟ್ಟಣ ಪಂಚಾಯತ್ ದುರವಸ್ಥೆ ಅದೇ ತರಹ ಇರುತ್ತದೆ. ಈಗ ಜಯಶಂಕರ ಅನ್ನುವ ಹೊಸ ಮುಖ್ಯಾಧಿಕಾರಿ ಬಂದು ಕೂತಿದ್ದಾರೆ. ಜಯಶಂಕರ ಬರುವ ಮೊದಲು ಈ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಲೋಕಾಯುಕ್ತ ರೈಡ್ ನಡೆಸಿ ಮುಖ್ಯಾಧಿಕಾರಿಯನ್ನೇ ಬಂಧಿಸಿತ್ತು. ಪಿಡಬ್ಲ್ಯೂಡಿ ಕ್ಲಾಸ್ -1 ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಜೂನಿಯರ್ ಇಂಜಿನಿಯರ್ ನಾಗರಾಜ್ 2022-23 ನೇ ಸಾಲಿನ ಐದನೇ ಹಣಕಾಸು ಯೋಜನೆಯಲ್ಲಿ ಎಸ್ ಕೋಡಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಯಲ್ಲಿ ಬಿಲ್ಲು ಪಾಸ್ ಮಾಡಬೇಕಾದರೆ ಭಕ್ಷೀಸು ಕೊಡಬೇಕೆಂದು ಸೂಚಿಸಿದ್ದರು. ಗುತ್ತಿಗೆದಾರರು ಲಂಚ ಕೊಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಖ್ಯಾಧಿಕಾರಿ, ಜೂನಿಯರ್ ಇಂಜಿನಿಯರ್ ಇಬ್ಬರು ಜೈಲುಪಾಲಾಗಿದ್ದರು.
ಇಂತಹ ಹಿನ್ನೆಲೆ ಇರುವ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ನಿರೀಕ್ಷಕರಾಗಿದ್ದ ಜಯಶಂಕರ ಮುಖ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ನಿರೀಕ್ಷಕರಾಗಿದ್ದ ಸಂದರ್ಭ ಗೋಲ್ ಮಾಲ್ ನ ಗುಸುಗುಸು ಕೇಳಿ ಬಂದಿತ್ತು. ಇದೀಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳಾಗುತ್ತಾ ಬರುತ್ತಿದ್ದು, ಪಟ್ಟಣ ಪಂಚಾಯತ್ ಒಳಗೆ ಕೆಲವೊಂದು ಡೀಲಿಂಗ್ ನ ವಾಸನೆ ಕೂಡ ಬಡಿಯುತ್ತಿದೆ. ಕಾನೂನು ಮೀರಿ ಪೌರ ಕಾರ್ಮಿಕರೊಬ್ಬರನ್ನು ತಮ್ಮ ಕಚೇರಿಗೆ ಸಹಾಯಕರಾಗಿ ನೇಮಿಸಿದ್ದಾರೆ. ಇದೀಗ ಪಟ್ಟಣ ಪಂಚಾಯತ್ ನಲ್ಲಿ ವ್ಯವಹಾರದ ಕಿಲಕಿಲ ಕೇಳಿ ಬರುತ್ತಿದೆ. ಮುಂದಕ್ಕೆ ನೋಡೋಣ.
