ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಉಪ-ಚುನಾವಣೆ
ಆಗಸ್ಟ್ 17 ರಂದು ಮತದಾನ, ಆಗಸ್ಟ್ 20 ರಂದು ಮತ ಎಣಿಕೆ
ಹೊಸದಾಗಿ ರಚನೆಯಾಗಿರುವ ಐದು ಪಟ್ಟಣ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಉಪಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಆಗಸ್ಟ್ 17 ರಂದು ಮತದಾನ ನಡೆಯಲಿದೆ.ಜುಲೈ 29 ರಂದು ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 5 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 8 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಆಗಸ್ಟ್ 17 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಒಂದು ವೇಳೆ ಮರುಮತದಾನ ಇದ್ದರೆ ಆಗಸ್ಟ್ 19 ರಂದು ನಡೆಯಲಿದೆ. ಆಗಸ್ಟ್ 20 ರಂದು ಮತ ಎಣಿಕೆ ನಡೆಯಲಿದೆ.
ಹೊಸದಾಗಿ ರಚನೆಯಾಗಿರುವ ಐದು ಪಟ್ಟಣ ಪಂಚಾಯಿತಿಗಳಾದ ಕೋಲಾರ ಜಿಲ್ಲೆಯ ವೇಮಗಲ್, ಕುರುಗಲ್, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಹಾಗೂ ಕಲಬುರಗಿ ಜಿಲ್ಲೆಯ ಕಾಳಗಿಗೆ ಚುನಾವಣೆ ನಡೆಯಲಿದೆ. ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೂ ಉಪಚುನಾವಣೆ ಘೋಷಿಸಲಾಗಿದೆ. ಬೆಳಗಾವಿಯ ಉಗಾರ ಖುರ್ದ ಪುರಸಭೆ, ವಿಜಯಪುರದ ನಿಡಗುಂದಿ ಪಟ್ಟಣ ಪಂಚಾಯಿತಿ, ಮತ್ತು ರಾಯಚೂರು ಜಿಲ್ಲೆಯ ಒಂದು ಪಟ್ಟಣ ಪಂಚಾಯತ್.
ರಾಜ್ಯ ಚುನಾವಣಾ ಆಯೋಗ ಸದ್ಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸುತ್ತಿದೆ. BBMP ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಕಲ ಸಿದ್ಧತೆಗಳಿದ್ದರೂ, ರಾಜ್ಯ ಸರ್ಕಾರದಿಂದ ಅನುಮತಿಗಾಗಿ ಕಾಯಲಾಗುತ್ತಿದೆ.
