ಉತ್ತರಾಖಂಡ ‘ಆಪರೇಷನ್ ಕಲಾನೇಮಿ’ ಗೆ ವ್ಯಾಪಕ ಮೆಚ್ಚುಗೆ
ಉತ್ತರಾಖಂಡ ರಾಜ್ಯ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿನ ಪ್ರಮುಖ ಧಾರ್ಮಿಕ ನೆಲೆಗಳಿಗೆ ಭೇಟಿ ನೀಡಲು ಅನ್ಯರಾಜ್ಯ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರಾಖಂಡದಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣ ಭಾರಿ ಕಡಿಮೆ. ಆದರೆ ಇಲ್ಲಿ ಧರ್ಮದ ಹೆಸರಿನಲ್ಲಿ ವಂಚನೆ ಎಗ್ಗಿಲ್ಲದೆ ನಡೆಯುತ್ತಿದೆ. ಸಂತರು ಹಾಗೂ ಋಷಿ ಮುನಿಗಳಂತೆ ನಟಿಸಿ ಜನಸಾಮಾನ್ಯರು, ಮಹಿಳೆಯರು , ಯುವಕರನ್ನು ದಾರಿ ತಪ್ಪಿಸುವ ಕೆಲಸ ಯಥೇಚ್ಛವಾಗಿ ನಡೆಯುತ್ತಿದೆ. ಧಾರ್ಮಿಕ ಸೋಗಿನ ಮುಖವಾಡ ಧರಿಸಿ ಮಹಿಳೆಯರ ವೈಯಕ್ತಿಕ ಅಥವಾ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ವಂಚಿಸುವ ಪ್ರಕರಣ ದಿನನಿತ್ಯ ನಡೆಯುತ್ತಿದೆ. ಇಂತಹ ವಂಚಕರು ಬೇರೆ ರಾಜ್ಯದಿಂದ ಬಂದವರಾಗಿದ್ದು, ನಕಲಿ ವೇಷ ತೊಟ್ಟು ಧರ್ಮ ಬೋಧನೆ ಮಾಡುವವರಾಗಿದ್ದಾರೆ. ಇಂತಹ ನಕಲಿ, ಡೋಂಗಿ ಬಾಬಾಗಳ ಕಾಟದಿಂದ ಸಜ್ಜನ ಸಾಧುಸಂತರನ್ನು ಕೂಡ ಅಸಹ್ಯದಿಂದ ನೋಡುವ ಸ್ಥಿತಿ ಬಂದಿದೆ. ಇಂತಹ ಘಟನೆಗಳು ಉತ್ತರಾಖಂಡ ಸರಕಾರಕ್ಕೂ ದೊಡ್ಡ ಸವಾಲಾಗಿತ್ತು.

ಉತ್ತರಾಖಂಡದಲ್ಲಿ ಬೀಡುಬಿಟ್ಟಿರುವ ಡೋಂಗಿ ಬಾಬಾಗಳನ್ನು ಪತ್ತೆಹಚ್ಚಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ಮೇರೆಗೆ ಡೆಹ್ರಾಡೂನ್ ಪೊಲೀಸರು ‘ಆಪರೇಷನ್ ಕಲಾನೇಮಿ’ ಹೆಸರಿನಲ್ಲಿ ಬೃಹತ್ ಕಾರ್ಯಾಚರಣೆಗೆ ಇಳಿದಿದೆ. ವಿವಿಧ ಜಿಲ್ಲೆಗಳಲ್ಲಿ ಧರ್ಮದ ವೇಷ ತೊಟ್ಟು ವಂಚಿಸುತ್ತಿದ್ದ 25 ನಕಲಿ ಬಾಬಾಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಡೋಂಗಿ ಬಾಬಾಗಳಲ್ಲಿ 10 ಮಂದಿ ವಿವಿಧ ರಾಜ್ಯಗಳ ನಿವಾಸಿಗಳು, ಬಂಧಿತರಲ್ಲಿ ಓರ್ವ ಬಾಂಗ್ಲಾದೇಶದ ಪ್ರಜೆ ಎಂದು ತಿಳಿದುಬಂದಿದೆ.
ಉತ್ತರಾಖಂಡದಲ್ಲಿ ಶನಿವಾರದಂದು ನಡೆದ ಆಪರೇಷನ್ ಕಲಾನೇಮಿ ಕಾರ್ಯಾಚರಣೆಗೆ ರಾಜ್ಯಾದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿವಿಧ ಧಾರ್ಮಿಕ ಮುಖಂಡರು ಸರಕಾರದ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಡೋಂಗಿ ಬಾಬಾ ಮುಕ್ತ ರಾಜ್ಯ ಮಾಡಲು ಉತ್ತರಾಖಂಡ ಸರಕಾರ ಪಣ ತೊಟ್ಟಂತಿದೆ.
