ಪುತ್ತೂರು ಕಸ್ಬಾ ಗ್ರಾಮದ, ಬೊಳುವಾರು ಎಂಬಲ್ಲಿ, ವ್ಯಕ್ತಿಯೋರ್ವ ತನ್ನ ಕೈಯಲ್ಲಿ ತಲವಾರನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ತೋರಿಸುತ್ತಾ ಬೆದರಿಕೆ ಒಡ್ಡಿದ್ದಾನೆ. ತಕ್ಷಣವೇ ಸಾರ್ವಜನಿಕರು ಆತನನ್ನು ಹಿಡಿದು ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮೂಲತಃ ಹಾಸನ ಮೂಲದವನಾಗಿದ್ದು ಪ್ರಸ್ತುತ ಬಂಟ್ವಾಳ ನಿವಾಸಿಯಾಗಿರುವ ರಾಜು (45) ಬಂಧಿತ ಆರೋಪಿ. ಆರೋಪಿಯನ್ನು ವಶಕ್ಕೆ ಪಡೆದ ನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 59/2025, ಕಲಂ: 25(1B)(b) Indian Arms Act ಹಾಗೂ 110 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿಯವರು ತಿಳಿಸಿದ್ದಾರೆ.
