ಉಡುಪಿ: ರಾತ್ರಿ ರಾಣಿಯರ ಕಿತಾಪತಿ.!

ಕರಾವಳಿ

ದೇವಳ ನಗರಿ, ಸಂಸ್ಕೃತಿಯ ನಗರಿ ಎಂದೇ ಕರೆಯಿಸಿಕೊಂಡಿರುವ ಉಡುಪಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಅಪ್ಸರೆಯರ ಕಾಟ ಮಾಮೂಲಿಯಾಗಿದೆ. ವಿದ್ಯಾಮಂದಿರ ಎದುರೇ ಮೈಮಾಟ ಪ್ರದರ್ಶಿಸುವ ರಾತ್ರಿ ರಾಣಿಯರಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಉಡುಪಿಯಲ್ಲಿ ಈ ಹಿಂದೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಇಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ, ಅಕ್ರಮ ಚಟುವಟಿಕೆಗಳಿಗೆ ಪುಲಿಸ್ಟಾಪ್ ಹಾಕಿದ್ದರು. ಆದರೆ ಈಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಹೆಸರು ಕೆಡಿಸಿಕೊಂಡವರಲ್ಲ. ಆದರೂ ಉಡುಪಿಯಲ್ಲಿ ಮೈ ಮಾರಾಟದ ದಂಧೆ, ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಪರೂಪಕ್ಕೊಮ್ಮೆ ದಾಳಿ ನಡೆಸಿ ಒಂದು ವಾರಗಳ ಕಾಲ ತಹಬಂದಿಗೆ ತಂದರೂ, ಪುನಃ ಮತ್ತೆ ಮೈಮಾರಾಟದ ದಂಧೆ ಬಾಲ ಬಿಚ್ಚುತ್ತದೆ. ಉಡುಪಿಯ ಬಸ್ ನಿಲ್ದಾಣದ ಸಮೀಪ ನಡೆಯುತ್ತಿರುವ ರಾತ್ರಿ ರಾಣಿಯರ ಮೈ ಮಾರಾಟ ದಂಧೆಗೆ ಕಡಿವಾಣ ಹಾಕುವವರು ಯಾರು?

ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಐರೋಡಿ ಸರ್ಕಲ್ ಸುತ್ತಮುತ್ತ ಹಾಗೂ ಇಲ್ಲೇ ಇರುವ ಚರ್ಮದ ಅಂಗಡಿಯ ಬದಿಯಲ್ಲಿ ನಡೆಯುವ ಆ ಚರ್ಮದಂಧೆಯಾದರೂ ಏನು? ರಾತ್ರಿ ಹೊತ್ತು ನಿಲ್ಲಿಸಿರುವ ರಿಕ್ಷಾ, ಕಾರುಗಳಲ್ಲಿ ನಡೆಯುತ್ತಿರುವುದೇನು? ಇಲ್ಲಿನ ಬೇಕರಿಯೊಂದರ ಜಗಲಿಯಲ್ಲಿ ತಡರಾತ್ರಿ ಆರೆಬೆತ್ತಲೆಯಾಗಿ ಕುಳಿತು ಗಿರಾಕಿಗಳನ್ನು ಕರೆಯುತ್ತಿರುವವರು ಯಾರು?

ಇನ್ನು ಸಿಟಿ ಬಸ್ ನಿಲ್ದಾಣದ ಕೆಳಗಿನ ರಾಜ್ ಟವರ್ ಸಮೀಪದ ಗೂಡಂಗಡಿಗಳ ಎಡೆಯಿಂದ ಅವಿತುಕೊಂಡು ಹೊರಬರುವ ಅರೆಬೆತ್ತಲೆ ರಾಣಿಯರ ಅಸಲಿಯತ್ತಾದರೂ ಏನು? ಇವರು ರಾತ್ರಿ 2 ಗಂಟೆಯವರೆಗೂ ಅಲ್ಲಿ ಮಾಡುತ್ತಿರುವುದೇನು? ಇನ್ನು ಮುಂದಕ್ಕೆ ಸಾಗಿ ಹೈವೇಯಲ್ಲಿ ಶಾರದಾ ಹೋಟೆಲ್ ನಿಂದ ಮುಂದಕ್ಕೆ ಹೈವೇ ಬದಿಯಲ್ಲಿ ತಡರಾತ್ರಿ ಅರೆಬೆತ್ತಲೆಯಾಗಿ ನಿಂತು ಕೈ ಸನ್ನೆ, ಕಣ್ ಸನ್ನೆ ಮೂಲಕ ಕರೆಯುವ ಅಪ್ಸರೆಯಾದರೂ ಯಾರು?

ಇವರೆಲ್ಲ ಮಂಗಳಮುಖಿಯರು. ಇವರು ಕೂಡಾ ನಮ್ಮಂತೆಯೇ ಮನುಷ್ಯ ಜಾತಿಗೆ ಸೇರಿದವರು. ತೃತೀಯ ಲಿಂಗಕ್ಕೆ ಸೇರಿದ ಇವರಲ್ಲಿ ಒಳ್ಳೆಯವರು ಇದ್ದಾರೆ. ಕೆಟ್ಟವರೂ ಇದ್ದಾರೆ. ಭಿಕ್ಷಾಟನೆ ಇವರ ಕಸುಬು. ಆದರೆ ಉಡುಪಿಯಲ್ಲಿ ಇವರ ದುರಹಂಕಾರ ಮಿತಿ ಮೀರುತ್ತಿದೆ. ಸಭ್ಯಸ್ಥರು ರಸ್ತೆಯಲ್ಲಿ ನಡೆದಾಡಲು ಹೇಸಿಗೆ ಪಡುವಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸಿನೇಮಾ ಹಿರೋಯಿನ್ ತರಹ ಬಣ್ಣ ಬಣ್ಣದ ಅರ್ಧಂಬರ್ಧ ಬಟ್ಟೆ ಹಾಕಿ ರಸ್ತೆಯಲ್ಲಿ ನಡೆದಾಡುವವರನ್ನು, ವಿದ್ಯಾರ್ಥಿಗಳನ್ನು ಕೈ ಸನ್ನೆ, ಕಣ್ ಸನ್ನೆ ಮೂಲಕ ವೇಶ್ಯಾವಾಟಿಕೆಗೆ ಆಹ್ವಾನಿಸುವುದು ಇಲ್ಲಿ ಮಾಮೂಲಿಯಾಗಿಬಿಟ್ಟಿದೆ.

ಸಿಟಿ ಬಸ್ ನಿಲ್ದಾಣ ಪಕ್ಕದಲ್ಲಿರುವ ಸರಸ್ವತಿ ವಿದ್ಯಾಮಂದಿರ ಬಳಿಯೇ ಮಂಗಳಮುಖಿಯರ ಆರ್ತನಾದ ಜೋರಿದೆ. ಅಲ್ಲಿ ಟೂರಿಸ್ಟ್ ಗಳು, ಇತರರನ್ನು ರಾತ್ರಿ ರಾಣಿಯರ ತಂಡ ಹೊಡೆಯುವುದು, ಹಣ, ಚಿನ್ನಾಭರಣ ದೋಚಿ ವಿವಸ್ತ್ರ ಮಾಡಿ ಬಿಡುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆರಡು ಬಾರಿ ಪೊಲೀಸ್ ದಾಳಿ ನಡೆದರೂ, ವಾರ ಕಳೆದ ನಂತರ ಅವರ ಆಟ ಮತ್ತೆ ಯಥಾಪ್ರಕಾರ ನಡೆಯುತ್ತಿದೆ. ಈ ರಸ್ತೆಯಲ್ಲಿ ಸಭ್ಯಸ್ಥರು ನಡೆದಾಡಲು ಹೆದರುವಂತಾಗಿದೆ. ಉಡುಪಿಗೆ ಹೊಸಬರು ಬಂದು ಇವರ ಬಳಿ ಅಡ್ರೆಸ್ ಕೇಳಿದರೆ ಕಥೆ ಮುಗಿಯಿತು. ಪೂರ್ತಿ ಮುಂಡಾಮೋಚಿ ಬಿಡುತ್ತಾರೆ.

ಇನ್ನು ಬಾರ್ ಬಳಿ ಹೆಚ್ಚಾಗಿ ತಿರುಗಾಡುವ ಇವರು ಬಕಪಕ್ಷೀಯರಂತೆ ಅವರನ್ನು ಕಾಯುತ್ತಿರುತ್ತಾರೆ. ಬಾರ್ ನಿಂದ ಹೊರಗೆ ಏಕಾಂಗಿ ಬಂದರೆ ಅವನ ಬಳಿ ದುಡ್ಡು, ಗೋಲ್ಡ್ ಇದ್ದರೆ, ಬೈಕ್, ಮೊಬೈಲ್ ಇದೆಯಾ ಎಲ್ಲವನ್ನು ವಾಚ್ ಮಾಡಿ ತಮ್ಮ ತಂಡಕ್ಕೆ ಸುದ್ದಿ ಮುಟ್ಟಿಸುತ್ತಾರೆ. ಗುಂಪು ಗುಂಪಾಗಿ ಬರುವ ರಾತ್ರಿ ರಾಣಿಯರು ದೋಚಿಕೊಂಡು ಹೋಗುತ್ತಾರೆ. ಇದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.

ಪೊಲೀಸ್ ಇಲಾಖೆ ಇನ್ನಾದರೂ ಕಠಿಣ ಕ್ರಮ ಕೈಗೊಂಡು ಉಡುಪಿ ಬಸ್ ನಿಲ್ದಾಣದಲ್ಲಿ ಮೈ ಮಾರಾಟದ ದಂಧೆಗೆ ಕಡಿವಾಣ ಹಾಕಬೇಕಿದೆ. ಹೆಣ್ಣು ಮಕ್ಕಳು, ಮಹಿಳೆಯರು ತಲೆ ಎತ್ತಿ ತಿರುಗಾಡುವಂತಹ ವಾತಾವರಣ ಸೃಷ್ಟಿಸಬೇಕಿದೆ. ಜಿಲ್ಲಾ ಎಸ್ಪಿ ಅರುಣ್ ಇತ್ತ ಕಡೆ ಗಮನ ಹರಿಸಿ.