ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ, ಬಲವಂತದಿಂದ ಗರ್ಭಪಾತ, ಪ್ರಕರಣ ದಾಖಲು

ರಾಷ್ಟ್ರೀಯ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಮಕ್ಕಳ ಆಶ್ರಯ ಕೇಂದ್ರದಲ್ಲಿ ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿ, ಗರ್ಭಿಣಿ ಬಲವಂತದಿಂದ ಗರ್ಭಪಾತ ಮಾಡಿಸಲಾಗಿದೆ ಎಂದು ಆರೋಪಿಸಿ ಎಚ್‌ಐವಿ ಸೋಂಕಿತ ಬಾಲಕಿ ನೀಡಿದ ದೂರಿನ ಮೇರೆಗೆ ಶುಕ್ರವಾರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧೋಕಿ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನ ಪ್ರಕಾರ, ಈ ಘಟನೆಗಳು ಜುಲೈ 13, 2023 ರಿಂದ ಈ ವರ್ಷದ ಜುಲೈ 23 ರ ನಡುವೆ ಹಸೇಗಾಂವ್‌ನಲ್ಲಿರುವ ಎಚ್‌ಐವಿ ಸೋಂಕಿತ ಮಕ್ಕಳ ಆಶ್ರಮ ಕೇಂದ್ರದಲ್ಲಿ ನಡೆದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾಲಕಿಯ ದೂರಿನ ಪ್ರಕಾರ, ಆಕೆ ಕಳೆದ ಎರಡು ವರ್ಷಗಳಿಂದ ಸಂಸ್ಥೆಯಲ್ಲಿದ್ದು, ಈ ಮಕ್ಕಳ ಗೃಹದ ಉದ್ಯೋಗಿಯೊಬ್ಬರು ನಾಲ್ಕು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಯಾರಿಗೂ ಈ ವಿಚಾರ ತಿಳಿಸದಂತೆ ಆಕೆಗೆ ಬೆದರಿಕೆ ಹಾಕಿದ್ದಾನೆ. ಸಂಸ್ಥೆಯ ಆಡಳಿತ ಮಂಡಳಿಯು ಆಕೆಗೆ ಸಹಾಯ ಮಾಡಿಲ್ಲ. ಹೀಗಾಗಿ ಬಾಲಕಿ ಅಧಿಕಾರಿಗಳಿಗೆ ಪತ್ರ ಬರೆದು, ಅದನ್ನು ದೂರು ಪೆಟ್ಟಿಗೆಯಲ್ಲಿ ಹಾಕಿದ್ದಾಳೆ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ನಂತರ ಆರೋಪಿಯು ವೈದ್ಯರ ಒಪ್ಪಿಗೆಯಿಲ್ಲದೆ ಗರ್ಭಪಾತ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಸ್ಥೆಯ ಸ್ಥಾಪಕ ಮತ್ತು ಸೂಪರಿಂಟೆಂಡೆಂಟ್, ಆಕೆಯ ಮೇಲೆ ಅತ್ಯಾಚಾರ ಎಸಗಿದ ಉದ್ಯೋಗಿ ಮತ್ತು ಗರ್ಭಪಾತ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಸೇರಿದಂತೆ ಆರು ಜನರ ವಿರುದ್ಧ ಧೋಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.