ದ.ಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮಹತ್ವದ ಪ್ರಕಟಣೆ; DK SAND BAZAAR APP ನೋಂದಾಯಿಸಿ, ಮರಳು ಪಡೆಯಿರಿ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನ್ -ಸಿಆರ್ ಝೆಡ್ ಪ್ರದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್ ಗಳಲ್ಲಿನ ಮರಳು ದಾಸ್ತಾನನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ DK SAND BAZAAR APP ನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದ್ದು, ಜಿಲ್ಲಾಧಿಕಾರಿಯವರು ಸೂಚಿಸಿರುವಂತೆ, ಸದರಿ ಮರಳನ್ನು ಸಾಗಾಟ ಮಾಡಲು ಇಚ್ಛಿಸುವವರು ತಮ್ಮ ವಾಹನವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ DK SAND BAZAAR APP ನಲ್ಲಿ ನೋಂದಾಯಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮಾರ್ಚ್ 15 ರಿಂದಲೇ DK SAND BAZAAR APP ಮುಖಾಂತರ ಜಿಲ್ಲಾ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಅವಶ್ಯಕತೆ ಇರುವವರು Online (DK SAND BAZAAR APP) ಮುಖಾಂತರ ಪಡೆಯಬಹುದಾಗಿದೆ. ಜಿಲ್ಲೆಯ 15 ಮರಳು ಬ್ಲಾಕ್ ಗಳಲ್ಲಿ 3,30,405 ಮೆಟ್ರಿಕ್ ಟನ್ ಪರಿಸರ ವಿಮೋಚನಾ ಪತ್ರದಲ್ಲಿ ಮರಳು ಗಣಿಗಾರಿಕೆ ಮಾಡಲು ಲಭ್ಯವಿದ್ದು, ಪರಿಸರ ವಿಮೋಚನಾ ಪತ್ರದನ್ವಯ ಪ್ರತಿ ವರ್ಷ ಜೂನ್ 5 ರಿಂದ ಅಕ್ಟೋಬರ್ 15 ರವರೆಗೆ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿರುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ನಿಷೇಧವಿರುತ್ತದೆ. ಮರಳು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿರುವ ಒಟ್ಟು 27,550 ಮೆಟ್ರಿಕ್ ಟನ್ ಗಳಲ್ಲಿ ಮಾರ್ಚ್ 2025 ರಿಂದ ಇಲ್ಲಿಯವರೆಗೆ 12,126 ಮೆಟ್ರಿಕ್ ಟನ್ ಅನ್ನು ಬುಕಿಂಗ್ ಆಪ್ ಮುಖಾಂತರ ವಿತರಿಸಲಾಗಿರುತ್ತದೆ. ಅಲ್ಲದೆ ಮರಳು ಗಣಿ ಗುತ್ತಿಗೆ ದಾಸ್ತಾನು ಕೇಂದ್ರದಲ್ಲಿ ಲಭ್ಯವಿರುವ 15,424 ಮೆಟ್ರಿಕ್ ಟನ್ ಮರಳನ್ನು ಬುಕಿಂಗ್ ಮಾಡಲು dksandbazaar.com ವೆಬ್ ಸೈಟಿನಲ್ಲಿ ಬುಕ್ ಮಾಡಿಕೊಳ್ಳಬೇಕಿದೆ. ಸಾರ್ವಜನಿಕರಿಗೆ ಈ ಮೂಲಕ ಮಾಹಿತಿ ನೀಡುತ್ತಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ.

DK SAND BAZAAR ಬುಕಿಂಗ್ ನಲ್ಲಿ ಯಾವುದೇ ತಾಂತ್ರಿಕ ತೊಂದರೆ ಇದ್ದಲ್ಲಿ ಮೊಬೈಲ್ ಸಂಖ್ಯೆ 6364019555 ಅನ್ನು ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.