16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬೆದರಿಕೆ ಹಾಕಿ ವಿಡಿಯೋ ಚಿತ್ರೀಕರಿಸಿದ ಆರೋಪದಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.
ದಿನಾಂಕ 30-05-2023 ರಂದು ಸಜಿಪನಡು ನಿವಾಸಿ ಅಬ್ದುಲ್ ಅಝೀಝ್ ರವರ ಮಗ ಮೊಹಮ್ಮದ್ ಮನ್ಸೂರ್ ಯಾನೆ ಜಾಬೀರ್ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ದಿನಾಂಕ 23-12-2023 ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅ.ಕ್ರ 128/2023 ಕಲಂ: 363, 376(2)(ಎನ್),376(3),506 ಐಪಿಸಿ & ಕಲಂ: 6 ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.

ಆರೋಪಿತನು ಸುಮಾರು 08 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದು, ದಿನಾಂಕ 02-07-2024 ರಂದು ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗುರುರಾಜ್ ರವರು ಭಾಗಶಃ ತನಿಖೆಯನ್ನು ಪೂರೈಸಿದ್ದು, ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ರಾಜೆಂದ್ರ ಬಿ ರವರು ಕೈಗೊಂಡಿರುತ್ತಾರೆ. ಪ್ರಕರಣದಲ್ಲಿ ತನಿಖಾಧಿಕಾರಿಯವರು ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಿಗದಿತ ಸಮಯದ ಒಳಗಾಗಿ ತನಿಖೆಯನ್ನು ಪೂರೈಸಿ ಆರೋಪಿತ ಮೊಹಮ್ಮದ್ ಮನ್ಸೂರ್ ಯಾನೆ ಜಾಬೀರ್ ಎಂಬಾತನ ವಿರುದ್ಧ ದೋಷರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೋಕ್ಸೋ ) ನ್ಯಾಯಾಲಯ ಮಂಗಳೂರು ಇಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದ್ದು, ಸರಕಾರಿ ಅಭಿಯೋಜಕರು ಬದ್ರಿನಾಥ ಮತ್ತು ವಿಶೇಷ ಸರಕಾರಿ ಅಭಿಯೋಜಕರು ಶ್ರೀಮತಿ ಸಹನಾದೇವಿ ಬೋಳೂರು ರವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.
ಜುಲೈ 30 ರಂದು ನ್ಯಾಯಾಧೀಶರಾದ ಮಾನು ಕೆ.ಎಸ್ ರವರು ಆರೋಪಿತನಿಗೆ ಬಾಲಕಿಯ ಅತ್ಯಾಚಾರದ ಆರೋಪದ ಅಡಿಯಲ್ಲಿ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ರೂಪಾಯಿ 50,000/- ದಂಡ ವಿಧಿಸಿದರು ಜೊತೆಗೆ ಬೆದರಿಕೆ ಆರೋಪದಡಿ 1 ವರ್ಷ ಶಿಕ್ಷೆ ಮತ್ತು 50,000 ರೂ. ದಂಡವನ್ನು ವಿಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
