ಸಮುದಾಯದ ‘ಚೇಂಜ್ ಮೇಕರ್’ ಜಿ.ಎ ಬಾವ.!
ಭಾರತದಲ್ಲಿ ಹಲವಾರು ಸಂಘ ಸಂಸ್ಥೆಗಳು ಸಮಾಜದ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿದೆ. ಕೆಲವೊಂದು ಸಂಸ್ಥೆಗಳ ಯೋಜನೆಗಳು ಅತ್ಯುತ್ತಮ ಫಲಿತಾಂಶ ತರುತ್ತಿದೆ. ಇಂತಹ ಯೋಜಗಳ ಮಾದರಿಗಳನ್ನು ಪರಿಚಯಿಸುವ ಹಾಗೂ ಪರಸ್ಪರ ಸಹಯೋಗದಲ್ಲಿ ಮಾಡುವ ಅವಕಾಶಕ್ಕಾಗಿ ಬೀದರ್ ಶಾಹೀನ್ ಕಾಲೇಜಿನಲ್ಲಿ ಎರಡು ದಿನಗಳ ಕಾಲದ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆ ನಡೆಯಿತು. ದೇಶದ ವಿವಿಧ ಭಾಗದಿಂದ ಆಗಮಿಸಿದ ಎನ್.ಜಿ. ಒ ಗಳು ತಮ್ಮ ಯೋಜನೆಗಳನ್ನು ಪರಿಚಯ ಮಾಡಿದರು.

ಚೇಂಜ್ ಮೇಕರ್ ಎಂಬ ಈ ಕಾರ್ಯಕ್ರಮದಲ್ಲಿ ನೂರಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳು ಭಾಗವಹಿಸಿತ್ತು. ಇದರಲ್ಲಿ ವಕ್ಫ್ ಆಸ್ತಿಯ ಸದ್ಭಳಕೆ ಹೇಗೆ ಮಾಡಬಹುದು ಎನ್ನುವ ಮಾದರಿಯಲ್ಲಿ ಬೆಂಗಳೂರಿನ ಹಮೀದ್ ಶಾ ಕಾಂಪ್ಲೆಕ್ಸ್ ನ ಅಭಿವೃದ್ಧಿ ಯೋಜನೆಯನ್ನು ಜನಾಬ್ ಜಿ. ಎ ಭಾವಾರವರು ಪರಿಚಯಿಸಿದರು. ಸಂಸ್ಥೆಯ ಪ್ರಸ್ತುತಿಯನ್ನು ನೋಡಿದ ನಂತರ ಎಲ್ಲಾ ಸಂಘ ಸಂಸ್ಥೆಗಳ ಪ್ರಮುಖರು ಇದೊಂದು ಅಭೂತಪೂರ್ವ ಪ್ರಯತ್ನ ಎಂದು ಶ್ಲಾಘಿಸಿದರು.

ಹಮೀದ್ ಶಾ ಕಾಂಪ್ಲೆಕ್ಸ್ ನ ಅಧ್ಯಕ್ಷರಾಗಿ 2016 ರಲ್ಲಿ ಜಿ. ಎ ಬಾವಾ ಅಧಿಕಾರ ವಹಿಸಿದಾಗ ಕಾಂಪ್ಲೆಕ್ಸ್ ನ ವರಮಾನ ಕೇವಲ 80 ಲಕ್ಷ ಇತ್ತು. ಪಾರದರ್ಶಕ ಆಡಳಿತ ನಡೆಸಿದ ಬಾವಾರವರು ಒಂದೇ ವರ್ಷದಲ್ಲಿ ಕಾಂಪ್ಲೆಕ್ಸ್ ನ ವರಮಾನವನ್ನು 3 ಕೋಟಿ 80 ಲಕ್ಷಕ್ಕೆ ಏರಿಸಿದರು. ಅಂದರೆ ಮೂರು ಕೋಟಿ ರುಪಾಯಿ ಹೆಚ್ಚು ವರಮಾನ ಬರುವಂತೆ ಮಾಡಿದರು. ಈ ವರಮಾನದಲ್ಲಿ ಅವರು ಮೊದಲಿಗೆ ಕಿಡ್ನಿ ವೈಫಲ್ಯಗೊಂಡ ರೋಗಿಗಳಿಗೆ ನೆರವಾಗಲು ಸುಸಜ್ಜಿತವಾದ ಡಯಾಲಿಸಿಸ್ ಸೆಂಟರ್ ಸ್ಥಾಪಿಸಿದರು. ಸುಮಾರು ಹತ್ತು ಡಯಾಲಿಸೀಸ್ ಮೆಷಿನ್ ಇರುವ ಈ ಕೇಂದ್ರದಲ್ಲಿ ಸರ್ವಧರ್ಮೀಯ ರೋಗಿಗಳು ಪ್ರಯೋಜನ ಪಡೆಯುತ್ತಾರೆ. ತಿಂಗಳಿಗೆ ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ನೆರವು ನೀಡುವ ಈ ಕೇಂದ್ರದಲ್ಲಿ ನುರಿತ ತಂತ್ರಜ್ಞರು ಇದ್ದಾರೆ. ಇದರ ನಂತರ ಉಚಿತ ಚಿಕಿತ್ಸೆಯ ಅಸ್ಪತ್ರೆಯನ್ನು ತೆರೆಯಲಾಯಿತು. ತಪಾಸಣೆ, ಮೆಡಿಸಿನ್ ಎಲ್ಲವೂ ಪ್ರಿಯಾಗಿರುವ ಈ ಕಿರು ಆಸ್ಪತ್ರೆಯಲ್ಲಿ ಸ್ಥಳೀಯ ಎಲ್ಲಾ ಧರ್ಮೀಯ ನಾಗರಿಕರಿಗೆ ನೆರವು ಸಿಗುತ್ತದೆ. ತಜ್ಞ ವೈದ್ಯರು ಇಲ್ಲಿ ಚಿಕಿತ್ಸೆ ನೀಡುತ್ತಾರೆ.
ಬೆಂಗಳೂರಿನಲ್ಲಿ ಪ್ರಥಮ ಎಂಬಂತೆ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ಇರುವುದು ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿ. ಹೈಟೆಕ್ ತಂತ್ರಜ್ಞಾನದ ಮಿಷನರಿಗಳು ಇಲ್ಲಿ ಇದ್ದು , ರಕ್ತ ಸಂಗ್ರಹ, ರಕ್ತ ನಿಧಿ, ಪ್ಲಾಸ್ಮಾ ಬದಲಾಯಿಸುವ ಸೌಲಭ್ಯ ಒದಗಿಸುತ್ತದೆ. ಪ್ರತೀ ದಿನ ನೂರಾರು ಜನರು ಇದರ ಪ್ರಯೋಜನ ಪಡೆಯುತ್ತಾರೆ. ಇಷ್ಟೊಂದು ವ್ಯವಸ್ಥೆ ಇರುವ ಬ್ಲಡ್ ಬ್ಯಾಂಕ್ ಸೇವಾ ಕಾರ್ಯ ವಲಯದಲ್ಲಿ ಕರ್ನಾಟಕ ರಾಜ್ಯದಲ್ಲೇ ಕಾಣಲು ಸಾಧ್ಯವಿಲ್ಲ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ಬರುವ ಮುಸ್ಲಿಂ ಯುವತಿಯರಿಗೆ ಹೈಟೆಕ್ ಹಾಸ್ಟೇಲ್ ಸೌಲಭ್ಯ ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿ ಇದೆ. ಸುಂದರ ಕೊಠಡಿಗಳು, ಎಲ್ಲಾ ಅನುಕೂಲತೆಗಳು, ನಮಾಜ್ ಮಾಡುವ ಕೇಂದ್ರ, ಸಂಪೂರ್ಣ ಭದ್ರತೆಯಲ್ಲಿ ಉಚಿತ ವಸತಿ ಸೌಲಭ್ಯ ಇರುವ ಈ ಹಾಸ್ಟೇಲ್ ನಲ್ಲಿ ಊಟದ ಹಣವನ್ನು ಮಾತ್ರವೇ ಪಾವತಿಸಬೇಕಾಗುತ್ತದೆ.

ಈ ಮೊದಲಿನಿಂದಲೂ ಇಲ್ಲಿ ಐಟಿಐ ಇತ್ತು , ಅದಕ್ಕೆ ಉತ್ತಮ ಕಟ್ಟಡವನ್ನು ನಿರ್ಮಿಸಿದ ಜಿ. ಎ ಬಾವಾ ನೇತೃತ್ವದ ಕಮಿಟಿಯವರು ಈ ಐಟಿಐ ಅಲ್ಲದೇ ಸ್ಕಿಲ್ ಇಂಡಿಯಾ ದ ಮೂಲಕ ವಿವಿಧ ಕೌಶಲ್ಯ ತರಬೇತಿಯನ್ನು ನೀಡುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಮೊದಲು ಐ.ಎಂ. ಎ ಸ್ಕ್ಯಾಮ್ ಆದಾಗ ಮುಚ್ಚಿ ಹೋದ ಶಿವಾಜಿ ನಗರದ ವಿ.ಕೆ ಒಬೇದುಲ್ಲಾ ಸ್ಕೂಲ್ ನ ಪರಿಸ್ಥಿಯಿಂದ ಸಾವಿರಕ್ಕಿಂತ ಹೆಚ್ಚು ಬಡ ಮಕ್ಕಳ ವಿದ್ಯಾಭ್ಯಾಸ ಅರ್ಧದಲ್ಲಿ ನಿಂತು ಹೋಯಿತು. ಈ ಸಂದರ್ಭ ಜಿ. ಎ ಬಾಬಾರವರು ಸಚಿವರಾದ ಶ್ರೀ ಜಮೀರ್ ಅಹ್ಮದ್ ರವರ ಸಹಕಾರದಿಂದ ರಿಜ್ವಾನ್ ಅರ್ಷದ್ ರವರ ಜೊತೆ ಸಮಾಲೋಚಿಸಿ ಹಮೀದ್ ಶಾ ಕಾಂಪ್ಲೆಕ್ಸ್ ಮೂಲಕ ಶಾಲೆಯನ್ನು ಮುನ್ನಡೆಸುವುದಾಗಿ ಹೇಳಿದರು. ಈ ಮೂಲಕ ವಾರ್ಷಿಕ ಒಂದು ಕೋಟಿಯಷ್ಟು ಖರ್ಚು ಬರುವ ಈ ಶಾಲೆಯ ಸಂಪೂರ್ಣ ಜವಾಬ್ದಾರಿ ಹಮೀದ್ ಶಾ ಟ್ರಸ್ಟ್ ತೆಗೆಯಿತು. ಇದಕ್ಕೆ ಕಾರಣ ಈ ಕಾಂಪ್ಲೆಕ್ಸ್ ನಲ್ಲಿ ಬರುವ ವರಮಾನ. ಇದರಿಂದಾಗಿ ಸಾವಿರಾರು ಮಕ್ಕಳ ಬದುಕು ಮತ್ತೆ ದಡ ಸೇರಿತು. ಅನಾಥವಾಗಿದ್ದ ಶಾಲೆ ಇಂದು ಪಿಯು ಕಾಲೇಜಿ ಆಗಿ, ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿ ಬೆಳೆದು ನಿಂತಿದೆ. ಇದು ದೂರದೃಷ್ಟಿಯ ಮತ್ತು ಕಾಳಜಿ ಇರುವ ನಾಯಕತ್ವಕ್ಕೆ ಒಂದು ನಿದರ್ಶನವಾಗಿದೆ. ಹಮೀದ್ ಶಾ ಕಾಂಪ್ಲೆಕ್ಸ್ ನ ವಕ್ಫ್ ಆಸ್ತಿಯ ಮೂಲಕ ಮಸೀದಿ, ಮದುವೆಗೆ ನೆರವು, ಶಿಕ್ಷಣಕ್ಕೆ ವಿದ್ಯಾರ್ಥ್ ವೇತನ ಹೀಗೆ ನೂರಾರು ಸೇವಾ ಕಾರ್ಯಕ್ರಮ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಯನ್ನು ಚೇಂಜ್ ಮೇಕರ್ ನ ಕಾರ್ಯಕ್ರಮದಲ್ಲಿ ನೋಡಿದ ನಂತರ ಅಭಿಪ್ರಾಯ ಸೂಚಿಸುವ ಸಂದರ್ಭ ವಕ್ಫ್ ಬಚಾವೋ ಮಾಡುವ ಹೋರಾಟಕ್ಕಿಂತ ವಕ್ಫ್ ಆಸ್ತಿ ಬಚಾವ್ ಮಾಡಿದ ಜಿ. ಎ ಬಾವಾ ನೇತೃತ್ವದ ಕಮಿಟಿಯವರ ಪ್ರಯತ್ನ ಶ್ಲಾಘನೀಯ ಎಂದು ಗುಲ್ಬರ್ಗದ ಬೈತುಲ್ ಮಾಲ್ ನ ಬಾಬಾ ನಝರ್ ಮೊಹಮ್ಮದ್ ಖಾನ್ ಹೇಳಿದರು.

ವಕ್ಫ್ ಆಸ್ತಿ ಬಚಾವು ಮಾಡುವುದು ಹೀಗೆ ಎಂದು ನಮಗೆ ಜಿ. ಎ ಬಾವಾ ತೋರಿಸಿ ಕೊಟ್ಟಿದ್ದಾರೆ. ನಮ್ಮಲ್ಲಿ ನಿಸ್ವಾರ್ಥ ಮತ್ತು ಕಾಳಜಿಯ ನಾಯಕತ್ವ ಬೇಕು. ಅತ್ಯುತ್ತಮ ಯೋಜನೆ ಮತ್ತು ನೀತಿ ಇರಬೇಕು. ನಾವು ವಕ್ಫ್ ಆಸ್ತಿ ಬಚಾವ್ ಮಾಡಿ ಏನು ಮಾಡುವುದು ಎಂದು ನಮಗೆ ಗೊತ್ತಿರದಿದ್ದರೆ ಈಗ ಇರುವಂತೆ ಅದು ನಿರುಪಯುಕ್ತ ಆಗಬಹುದು. ಹಾಗಾಗಿ ನಾವು ಹಮೀದ್ ಶಾ ಕಾಂಪ್ಲೆಕ್ಸ್ ಯೋಜನೆಯನ್ನು ಹೆಚ್ಚು ಜನರತ್ತ ತಲುಪಿಸಬೇಕು. ಈ ಮೂಲಕ ಅದನ್ನು ಎಲ್ಲರೂ ಅನುಸರಿಸುವಂತಾಗಲಿ ಎಂದು ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸ್ಥಾಪಕಾರದ ಹನೀಫ್ ಪುತ್ತೂರು ಅಭಿಪ್ರಾಯ ವ್ಯಕ್ತಪಡಿಸಿದರು.
