ಎಸ್ಐಟಿ ತನಿಖೆಯನ್ನು ದಾರಿ ತಪ್ಪಿಸಲು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಹುನ್ನಾರ: ಶೇಖರ್ ಲಾಯಿಲ
ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ ವರದಿ ಮಾಡುತ್ತಿದ್ದ ಯೂಟ್ಯೂಬರ್ ಗಳ ಮೇಲೆ ಪುಂಡರು ನಡೆಸಿದ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಅತ್ಯಾಚಾರವಾಗಿದೆ. ಇಂತಹ ಕಾನೂನು ಬಾಹಿರ ಗೂಂಡಾಗಿರಿ ನಡೆಸಿದ ಎಲ್ಲ ಪುಂಡರರನ್ನು ತಕ್ಷಣ ಬಂದಿಸಬೇಕು.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸಾವಿರಾರು ಅಸಹಜ ಸಾವುಗಳ ಶವಗಳನ್ನು ಕಾನೂನು ಬಾಹಿರವಾಗಿ ಹೂತಿರುವ ಪ್ರಕರಣದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಪತ್ರಿಕೆಗಳಲ್ಲಿ, ಟಿವಿ ಮಾದ್ಯಮಗಳು ಸೇರಿದಂತೆ ಯೂಟ್ಯೂಬ್ ಗಳಲ್ಲಿ ದಿನನಿತ್ಯ ಸುದ್ದಿ ಪ್ರಸಾರ ನಡೆಯುತ್ತಿದೆ. ಇದನ್ನು ಸಹಿಸದ ಗೂಂಡಾಗಳು ಯೂಟ್ಯೂಬರ್ ಗಳ ಮೇಲೆ ಏಕಪಕ್ಷೀಯವಾಗಿ, ವ್ಯವಸ್ಥಿತವಾಗಿ ಧಾಳಿ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಇಂತಹ ಗೂಂಡಾಗಿರಿಯಿಂದಾಗಿ ಧರ್ಮಸ್ಥಳದ ಹೆಸರು ಕೆಡುತ್ತದೆಯೇ ಹೊರತು ಇತರರಿಂದಲ್ಲ. ಈ ಧಾಳಿಯ ಹಿಂದೆ ವ್ಯವಸ್ಥಿತ ಹುನ್ನಾರ ಅಡಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದಾರೆ. ಧರ್ಮಸ್ಥಳ ಯಾರಪ್ಪನ ಸ್ವತ್ತಲ್ಲ, ಅದು ಧರ್ಮಸ್ಥಳ ಗ್ರಾಮದ ಸರ್ವರದ್ದು. ಧರ್ಮಸ್ಥಳವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ, ಧರ್ಮಸ್ಥಳ ತನ್ನ ಸಾಮ್ರಾಜ್ಯ ಎಂದುಕೊಂಡಿರುವವರು ಈ ಧಾಳಿಯ ಹಿಂದೆ ಇದ್ದಾರೆ.

ಮಹಿಳೆಯರನ್ನು ಮಾತೆ, ದೇವತೆ ಎಂದೇಳುವ ಸಂಘಪರಿವಾರ ಧರ್ಮಸ್ಥಳದಲ್ಲಿ ಅಸಹಜವಾಗಿ ಸಾವಿಗೀಡಾಗಿರುವ ಸಾವಿರಾರು ಹೆಣ್ಣು ಮಕ್ಕಳ ಬಗ್ಗೆ ಏಕೆ ಮೌನ.? ಅಸಹಜ ಸಾವುಗಳ ಬಗ್ಗೆ ಶಿವನ ಸಾನಿಧ್ಯದಲ್ಲಿ ಸ್ವರ್ಗಪ್ರಾಪ್ತಿಗೋಸ್ಕರ ಸಾವನ್ನಪ್ಪುವುದು ಸಹಜ ಎನ್ನುವವರು ಮೊದಲು ಧರ್ಮಸ್ಥಳದಲ್ಲಿ ಅಸಹಜವಾಗಿ ಸಾಯಲಿ. ಅಸಹಜ ಸಾವುಗಳ ಬಗ್ಗೆ ಎಸ್ಐಟಿ ತನಿಖೆಯನ್ನು ದಾರಿ ತಪ್ಪಿಸಲು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಹುನ್ನಾರದ ಭಾಗವಾಗಿ ಈ ಗೂಂಡಾಗಿರಿ ನಡೆಸಿರುವ ಸಾಧ್ಯತೆಯಿದೆ. ಈ ಗೂಂಡಾಗಿರಿಯ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ, ಗೂಂಡಾಗಳನ್ನು ತಕ್ಷಣ ಬಂಧಿಸಬೇಕು.
