ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಾಯಗೊಂಡರೆ, ಮೃತಪಟ್ಟರೆ ವಾಹನ ಮಾಲೀಕನೇ ಜವಾಬ್ದಾರಿ, ಆತನೇ ಪರಿಹಾರ ಪಾವತಿಸಬೇಕು: ಹೈಕೋರ್ಟ್ ಮಹತ್ವದ ಆದೇಶ

ರಾಜ್ಯ

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡರೆ ಅಥವಾ ಮೃತಪಟ್ಟ ವೇಳೆ ಆ ವಾಹನದ ಮಾಲೀಕರು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೇ, ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪೆನಿಯನ್ನು ಹೊಣೆಗಾರನನ್ನಾಗಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ (ಎಂಎಸಿಟಿ) ಆದೇಶ ಪ್ರಶ್ನಿಸಿ ಸರಕು ಸಾಗಣೆ ವಾಹನಕ್ಕೆ ವಿಮೆ ನೀಡಿದ್ದ ‘ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ’ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಪರಿಹಾರಕ್ಕೆ ಅರ್ಹವಾಗಿರುವ ವ್ಯಕ್ತಿ ಚುನಾವಣಾ ಕರ್ತವ್ಯ ಮುಗಿಸಿಕೊಂಡು ಊರಿಗೆ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುತ್ತಿದ್ದನು. ಟೆಂಪೋದಲ್ಲಿ ಸಾಗಿಸುತ್ತಿದ್ದ ಸರಕುಗಳಿಗೆ ಗಾಯಗೊಂಡ ವ್ಯಕ್ತಿ ಮಾಲೀಕರಾಗಿರಲಿಲ್ಲ , ಹಾಗಾಗಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 147 ರಡಿಯಲ್ಲಿ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುವ ಅನಪೇಕ್ಷಿತ ಪ್ರಯಾಣೀಕರಿಗೆ ಸಾವು ಇಲ್ಲವೇ ಗಾಯವಾದಲ್ಲಿ ವಿಮಾ ಕಂಪನಿ ಪರಿಹಾರ ಪಾವತಿಸಲು ಹೊಣೆಗಾರರಾಗುವುದಿಲ್ಲ. ಆದರೆ ಘಟನೆಗೆ ಎರಡು ವಾಹನಗಳ ವಿಮಾದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಹೊಣೆಗಾರರಾಗಿದ್ದರೆಂದು ಎಂಎಸಿಟಿ ತೀರ್ಪು ನೀಡಿರುವುದು ತಪ್ಪಾಗಿದೆ ಎಂದು ಪೀಠ ಹೇಳಿದೆ.

ಗಾಯಗೊಂಡಿರುವ ವ್ಯಕ್ತಿಯ ವಿರುದ್ದದ ಎರಡೂ ವಾಹನಗಳ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಎರಡೂ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಉಂಟಾದಲ್ಲಿ ಸಂತ್ರಸ್ತರಿಗೆ ಸಮಾನ ಪರಿಹಾರ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ ನ್ಯಾಯಾಧೀಕರಣದ ಆದೇಶ ಮಾರ್ಪಾಡು ಮಾಡುತ್ತಿದ್ದು, ಅಪಘಾತದಲ್ಲಿ ಭಾಗಿಯಾಗಿರುವ ಬಸ್ ಮಾಲೀಕ, ಬಸ್ ವಿಮಾದಾರ ಕಂಪನಿ ಒಟ್ಟಾಗಿ ಶೇಕಡಾ 50 ರಷ್ಟು ಮತ್ತು ಸರಕು ಸಾಗಣೆ ಟೆಂಪೋ ಮಾಲೀಕ ಶೇಕಡಾ 50 ರಷ್ಟು ಪರಿಹಾರ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ.