ವಿರೋಧ ಪಕ್ಷದ ರಾಜ್ಯದಲ್ಲಿ ಹಿಗ್ಗಾಮುಗ್ಗಾ ತರಾಟೆ..ಆಡಳಿತದ ರಾಜ್ಯಗಳಲ್ಲಿ ರತ್ನಗಂಬಳಿ ಹಾಸಿ ಸ್ವಾಗತ..ಬಿಜೆಪಿಯ ಇಬ್ಬಗೆಯ ಬಣ್ಣ ಬಯಲು
ರಾಜಕೀಯ ಪಕ್ಷಗಳ ನಿಜವಾದ ಬಣ್ಣ ಬಯಲಾಗಬೇಕಾದರೆ ಚುನಾವಣೆಗಳು ಬರಬೇಕು. ಚುನಾವಣೆಗಳು ಬಂದಾಗ ಗೆಲುವು ತನ್ನದಾಗಿಸಿಕೊಳ್ಳಲು ಸಿದ್ಧಾಂತಕ್ಕೆ ಎಳ್ಳು ನೀರು ಬಿಡುತ್ತಾರೆ. ಬಹುಶಃ ಬಿಜೆಪಿಯ ವಿಷಯದಲ್ಲಿ ಇದೆ ಆದಂತಿದೆ. ಅಭಿವೃದ್ಧಿ ಆಧಾರಿತ ಆಡಳಿತದ ಪಿತಾಮಹನಂತೆ, ಆರ್ಥಿಕ ಶಿಸ್ತಿನ ಹರಿಕಾರನಂತೆ ಬಿಂಬಿಸಿಕೊಳ್ಳುವ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬಂದಾಗ ತಾನು ಕೂಡ ಇತರ ಪಕ್ಷಗಳಂತೆ ಜನಪ್ರಿಯ ಯೋಜನೆಗಳ ಹಿಂದೆ ಬೀಳುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ವಿಷಯವಾಗಿದೆ.
ಬಹುಶಃ ಜನಪರ ಅಥವಾ ಜನಪ್ರಿಯ ಯೋಜನೆಗಳನ್ನು ಇನ್ನು ಮೇಲೆ ಚುನಾವಣಾ ಯೋಜನೆಗಳೆಂದು ಮರುನಾಮಕರಣ ಮಾಡುವುದು ಒಳಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಬಿಜೆಪಿ ತಾನು ಆಡಳಿತ ನಡೆಸುತ್ತಿರುವ, ಆಡಳಿತ ಸರಕಾರದ ಭಾಗಿಯಾಗಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ ರತ್ನಗಂಬಳಿ ಹಾಸಿ ಬೆಂಬಲಿಸುತ್ತಿರುವುದು ಬಿಜೆಪಿಯ ಗ್ಯಾರಂಟಿ ಯೋಜನೆ ಬಗೆಗಿರುವ ದ್ವಂದ್ವ ನಿಲುವು ಎನ್ನಬೇಕು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿಯ ಮಾದರಿಗಳನ್ನು ಹೋಲುವ ಉಚಿತ ಯೋಜನೆಗಳನ್ನು ಇದೀಗ ನಿತೀಶ್ ಕುಮಾರ್ ಸರಕಾರ ಘೋಷಿಸಿದೆ. ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ನಿತೀಶ್ ಕುಮಾರ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಉಚಿತ ಸಾರಿಗೆ ವ್ಯವಸ್ಥೆಯ ಬಗ್ಗೆಯೂ ಪರಿಶೀಲಿಸುತ್ತಿದೆ. ಇವೆಲ್ಲವೂ ಗ್ಯಾರಂಟಿ ಯೋಜನೆ ಅಲ್ಲವೇ ಎಂದು ಯಾರಾದರೂ ಕೇಳಿದರೆ, ಅಲ್ಲ ಅದು ಸಮಾಜ ಸುಧಾರಣೆಯ ಸುವರ್ಣ ಹೆಜ್ಜೆಗಳು ಎಂಬಂತೆ ಪೋಸು ಕೊಡುತ್ತಿದೆ. ಇದಕ್ಕೆ ಮಹಾರಾಷ್ಟ್ರದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಲಡಾಕಿ ಬೆಹೆನ್ ಯೋಜನೆಯು ಕೂಡ ಕಾಂಗ್ರೆಸ್ ಗ್ಯಾರಂಟಿಯನ್ನು ಫಾಲೋ ಮಾಡಿರುವುದಕ್ಕೆ ಒಂದು ಒಳ್ಳೆಯ ಉದಾಹರಣೆ.

ಆದರೆ ಕರ್ನಾಟಕದಲ್ಲಿ ಇಂತಹ ಸಮಾಜ ಸುಧಾರಣೆಯ ಯೋಜನೆಗಳನ್ನು ವಿರೋಧ ಪಕ್ಷವಾದ ಬಿಜೆಪಿ ಬಿಟ್ಟಿ ಭಾಗ್ಯ ಎಂದು ಬೊಬ್ಬೆ ಹೊಡೆಯುತ್ತಿದೆ. ಆರ್ಥಿಕ ಅಶಿಸ್ತಿಗೆ ಕಾರಣವಾಗುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ ಜನಸಾಮಾನ್ಯ ಮಾತ್ರ ಮೂಕಪ್ರೇಕ್ಷಕನಾಗಿ ಇದನ್ನೆಲ್ಲ ನೋಡುತ್ತಿದ್ದಾನೆ. ಚಳವಳಿಗಳ ದಾರಿಯನ್ನು ಜನಸಾಮಾನ್ಯ ಮರೆತು ದಶಕಗಳೇ ಕಳೆದಿವೆ. ಉಚಿತ ಕೊಡುಗೆಗಳ ಪರಿಪಾಠ ರಾಜಕೀಯವನ್ನು ಮೀರಿ ಸಾಗಬೇಕು ಎಂಬುದು ಯಾವ ಪಕ್ಷಗಳಿಗೂ ಅರ್ಥವಾದಂತೆ ಕಾಣುತ್ತಿಲ್ಲ.
ಬದಲಿಗೆ ಪಕ್ಷ ಪಕ್ಷಗಳ ನಡುವೆ ಇಂತಹ ಚುನಾವಣ ಯೋಜನೆಗಳ ಘೋಷಣೆಗೆ ತಾ ಮುಂದು ನಾ ಮುಂದು ಎಂಬ ಪೈಪೋಟಿ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಧ್ಯೇಯಗಳಲ್ಲಿ ಒಂದಾದ ಸುಭಿಕ್ಷ ಸಮಾಜದ ಪರಿಕಲ್ಪನೆಗೆ ಅರಾಜಕತೆ ಎಂಬ ಕಟ್ಟಕಡೆಯ ಮೊಳೆ ಹೊಡೆಯಲು ಸಿದ್ಧರಾದಂತೆ ಕಾಣುತ್ತಿದೆ. ಇಂತಹುದೇ ದಾರಿ ಹಿಡಿದ ಜಿಂಬಾಬ್ವೆ ಹಾಗೂ ಗ್ರೀಕ್ ದೇಶಗಳು ಯಾವ ಪರಿಸ್ಥಿತಿ ಎದುರಿಸಬೇಕಾಯಿತು, ಆರ್ಥಿಕ ಶಿಸ್ತಿಲ್ಲದ ಉಚಿತ ಕೊಡುಗೆಗಳು ಹೇಗೆ ವಿಪತ್ತನ್ನು ಸೃಷ್ಟಿಸಿದವು ಎಂಬುದಕ್ಕೆ ಇವೆರಡು ದೇಶಗಳ ಉದಾಹರಣೆಯೇ ಸಾಕು.
ಹಾಗೆ ನೋಡಿದರೆ ಭಾರತದಲ್ಲಿ ಕಲ್ಯಾಣ ಯೋಜನೆಗಳಿಗೇನು ಬರವಿಲ್ಲ. ಆದರೆ ಈ ಯೋಜನೆಗಳು ಜಾರಿಗೆ ಬಂದು ಅದೆಷ್ಟೋ ದಶಕಗಳು ಕಳೆದರೂ ಅವುಗಳು ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿಲ್ಲ ಎಂದಾದರೆ ಈ ಆಡಳಿತ ಪಕ್ಷಗಳೇ ಅದಕ್ಕೆ ನೇರ ಹೊಣೆ. ಉಚಿತ ಯೋಜನೆಗಳಿಗೆ ಜನ ಈ ಪಾಟಿ ಮುಗಿಬೀಳುತ್ತಿದ್ದಾರೆ ಎಂದರೆ ಕಳೆದ ಎಂಟು ದಶಕಗಳಲ್ಲಿ ಆಡಳಿತ ನಡೆಸಿದ ಸರಕಾರಗಳು ಜಾರಿಗೆ ತಂದ ಕಲ್ಯಾಣ ಯೋಜನೆಗಳು ಯಾವುದೇ ಇದುವರೆಗೆ ಅವರಿಗೆ ತಲುಪಲೇ ಇಲ್ಲ ಎಂಬ ಅರ್ಥವಲ್ಲವೇ ಇದು.

ಆಯಾ ಪಕ್ಷಗಳ ಆಡಳಿತ ವೈಫಲ್ಯವಲ್ಲದೆ ಇನ್ನೇನು? ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ಅನ್ನಭಾಗ್ಯ ದಂತಹ ಯೋಜನೆಗಳು ಜಾರಿಯಲ್ಲಿವೆ. ಈ ಯೋಜನೆಗಳು ನಿಜವಾಗಿಯೂ ಯಾವುದೇ ಸೋರಿಕೆಯಲ್ಲದೆ ಸಮಗ್ರವಾಗಿ ಸರಿಯಾದ ರೀತಿಯಲ್ಲಿ ಜಾರಿ ಆಗಿದ್ದರೆ ಗ್ಯಾರಂಟಿ ಯೋಜನೆಗಳ ಮೊರೆ ಹೋಗುವ ದರ್ದು ರಾಜಕೀಯ ಪಕ್ಷಗಳಿಗೆ ಇರುತ್ತಿತ್ತೆ? ಅದೇ ರೀತಿ ಬಿಹಾರ ಕೂಡ ಇದೇ ರೀತಿಯ ಯೋಜನೆಗಳಿಂದ ಹೊರತಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಜಲ ಜೀವನ್ ಮಿಷನ್, ಜನ ಧನ ಯೋಜನೆ ಇದೆಲ್ಲವೂ ಜಾರಿಯಲ್ಲಿದೆ. ಅಲ್ಲವೇ ಇಷ್ಟಾದರೂ ಈ ಪಕ್ಷಗಳಿಗೆ ಗ್ಯಾರಂಟಿ ಆಸರೆ ಬೇಕು.
ಎಲ್ಲಾ ಪಕ್ಷಗಳು ಯಾರು ಹೆಚ್ಚು ಉಚಿತ ಕೊಡುಗೆಗಳನ್ನು ನೀಡಬಹುದು ಎಂಬ ಪೈಪೋಟಿಯನ್ನು ಬಿಟ್ಟು ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದು ಹೇಗೆ? ಈ ಯೋಜನೆಗಳನ್ನು ಮತ್ತಷ್ಟು ಬಲಪಡಿಸಿ ಅನುಷ್ಠಾನದಲ್ಲಿ ಸುಗಮಗೊಳಿಸಿ ಬಡವರ ಹಾಗೂ ಕಷ್ಟದಲ್ಲಿರುವವರ ಬಾಳನ್ನು ಸಬಲೀಕರಣ ಗೊಳಿಸುವ ಬಗ್ಗೆ ಯೋಚಿಸಬೇಕೇ ಹೊರತು ಗ್ಯಾರಂಟಿ ಎಂಬ ರಾಜಕೀಯ ಪ್ರೇರಿತ ಮತಪರ ಯೋಜನೆಗಳನ್ನು ಜಾರಿಗೆ ತಂದು ಪ್ರಜೆಗಳನ್ನು ಗ್ಯಾರಂಟಿ ಎಂಬ ಸಾಂಕೇತಿಕ ಪರಿಹಾರದ ಗುರಾಣಿಗಳನ್ನಾಗಿ ಮಾಡುವ ಕ್ರಮ ಎಷ್ಟು ಸರಿ?
ಅದರಲ್ಲೂ ಬಿಜೆಪಿಯಂತಹ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರೂ ಹಲವಾರು ರಾಜ್ಯಗಳಲ್ಲಿ ಪ್ರಮುಖ ಆಡಳಿತ ಪಕ್ಷವಾಗಿರುವ ಹೊತ್ತಿನಲ್ಲಿ ಹೇಗೆ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬಹುದು ಎಂದು ತೋರಿಸುವ ಅವಕಾಶ ಇದ್ದಾಗ ಅದನ್ನು ಬಳಸಿಕೊಳ್ಳದೇ ಇದ್ದರೆ ಅದು ಬಿಜೆಪಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತದೆ.
ಆ ನಿಟ್ಟಿನಲ್ಲಿ ಬಿಜೆಪಿ ಎಂಬ ಬಿಜೆಪಿ ಗ್ಯಾರಂಟಿ ಎಂಬ ಊರುಗೋಲಿನ ಆಸರೆ ಬೆನ್ನು ಹತ್ತಿದರೆ ಕಲ್ಯಾಣ ಯೋಜನೆಗಳಿಗಿಂತ ದೊಡ್ಡ ಗ್ಯಾರಂಟಿ ಇಲ್ಲ ಎಂದು ತೋರಿಸುವ ಸದಾವಕಾಶವನ್ನು ಕಳೆದುಕೊಂಡಂತೆ ಎಂಬುದು ಮರೆಯಬಾರದು. ಅಷ್ಟಾಗಿಯೂ ಈ ಹೊತ್ತಿನ ಅವಶ್ಯಕತೆ ಗ್ಯಾರಂಟಿ ಅಲ್ಲ . ಈ ಹೊತ್ತಿಗೆ ಅವಶ್ಯಕತೆ ಉತ್ತಮ ಆಡಳಿತ. ಆಡಳಿತಕ್ಕೆ ಕೆಲಸವಿದ್ದಾಗ ಗ್ಯಾರಂಟಿಗೆ ಜಾಗವಿರುವುದಿಲ್ಲ.
