11,454 ಸೀಟುಗಳ ಪೈಕಿ ಬರೀ 2491 ಸೀಟುಗಳು ಭರ್ತಿ
ಆರ್ ಟಿ ಇ ಅರ್ಥಾತ್ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಆರ್ ಟಿ ಇ ಕಾಯ್ದೆ ಉದ್ದೇಶವೇ ದುರ್ಬಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದು ಇದು ವಿಫಲಗೊಳ್ಳದಂತೆ ಸರಕಾರ, ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ತಜ್ಞರು ನೋಡಿಕೊಳ್ಳಬೇಕಾಗಿದೆ.

ಪ್ರಸ್ತುತ 2025-26 ನೇ ಸಾಲಿಗೆ ರಾಜ್ಯದ ಖಾಸಗಿ ಶಾಲೆಗಳಲ್ಲಿ ಶೇಕಡಾ 25 ರಷ್ಟು ಸೀಟುಗಳನ್ನು ಆರ್ ಟಿ ಇ ಕಾಯ್ದೆಯಡಿ ಭರ್ತಿಗೆ ಮೀಸಲಿಡಲಾಗಿದೆ. ಒಟ್ಟು 11,454 ಸೀಟುಗಳು ಲಭ್ಯವಿದೆ. ಆದರೆ ಇದುವರೆಗೆ ಕೇವಲ 2491 ಸೀಟುಗಳು ಮಾತ್ರ ಭರ್ತಿಯಾಗಿವೆ. ಆರ್ ಟಿಇ ಯಡಿ ಸೀಟು ಭರ್ತಿ ಆರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಇನ್ನೂ 8,963 ಸೀಟುಗಳು ಬಾಕಿ ಉಳಿದಿವೆ. ಇವುಗಳಿಗೆ ಮಕ್ಕಳು ಪ್ರವೇಶ ಪಡೆಯುವುದು ಬಹುತೇಕ ಅನುಮಾನ. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು 368 ಮಕ್ಕಳು ಪ್ರವೇಶ ಪಡೆದಿದ್ದಾರೆ. ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಆರ್ ಟಿಇಯಡಿ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಎರಡಂಕಿ ದಾಟಿಲ್ಲ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತದೆ.
ಆರ್ ಟಿಇಯಡಿ ಪ್ರವೇಶ ಪಡೆಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ ಎಂಬುದು ಗಮನಿಸಬೇಕಾದ ವಿಚಾರ. 2019 ರ ಬಳಿಕ ಈ ಕುಸಿತ ದಾಖಲಾಗುತ್ತಾ ಬಂದಿದೆ. ಇದಕ್ಕಿಂತ ಮುಂಚೆ ರಾಜ್ಯದಲ್ಲಿ ಲಕ್ಷಕ್ಕೆ ಮೀರಿದ ಸಂಖ್ಯೆಯಲ್ಲಿ ಆರ್ ಟಿಇ ಸೀಟುಗಳು ಭರ್ತಿಯಾಗುತ್ತಿದ್ದರೆ 2019 ರ ಬಳಿಕ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಆರ್ ಟಿಇ ಯ ಸೆಕ್ಷನ್ 12(1)(ಸಿ) ಯ ಪ್ರಕಾರ ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಇದು ಗುಣಮಟ್ಟದ ಶಿಕ್ಷಣದ ಖಾತರಿಯನ್ನು ನೀಡುತ್ತವೆ. ಆದರೆ ಆರ್ ಟಿಇಯಡಿ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಖಾಸಗಿ ಶಾಲೆಗಳು ತೋರುತ್ತಿರುವ ನಿರಾಸಕ್ತಿ, ಆರ್ ಟಿಇಯಡಿ ದಾಖಲಾಗಲು ಹಿಂಜರಿಕೆ ಈ ಕುಸಿತಕ್ಕೆ ಕಾರಣವಾಗಿದೆ.

ಇದರ ಜತೆಗೆ ಸರಕಾರವು ಈ ಕಾಯಿದೆಗೆ 2019 ರಲ್ಲಿ ತಂದಿರುವ ತಿದ್ದುಪಡಿ ಕೂಡ ಮಕ್ಕಳ ಸಂಖ್ಯೆ ಇಳಿಕೆಯಾಗುವಂತೆ ಮಾಡಿದೆ ಎಂಬುದು ಗಮನಾರ್ಹ. ಈ ತಿದ್ದುಪಡಿಯ ಪ್ರಕಾರ ಆರ್ ಟಿಇಯಡಿ ದಾಖಲಾಗುವ ವಿದ್ಯಾರ್ಥಿಯ ಪರಿಸರದಲ್ಲಿ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆ ಇದ್ದರೆ ಅಲ್ಲಿಯೇ ದಾಖಲಾಗಬೇಕೇ ವಿನಾ ಖಾಸಗಿ ಶಾಲೆಯನ್ನು ಆಯ್ಕೆಮಾಡಿಕೊಳ್ಳುವಂತ್ತಿಲ್ಲ. ಹತ್ತಿರದಲ್ಲಿರುವ ಸರಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದಿದ್ದರೂ ದುರ್ಬಲ ವರ್ಗದವರು ಹೊಸ ನಿಯಮದಿಂದಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಆರ್ ಟಿ ಇಯಡಿ ಸೇರಿಸುವಂತ್ತಿಲ್ಲ. ಸೇರಿಸುವುದಿದ್ದರೆ ಪೂರ್ಣ ಪ್ರಮಾಣದ ಶುಲ್ಕ ಪಾವತಿಸಿ ಸೇರಿಸಬೇಕಾಗುತ್ತದೆ. ಇದರಿಂದಾಗಿ ಅದೆಷ್ಟೋ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಸರಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೂ ಅಲ್ಲಿರುವ ಶಿಕ್ಷಕರ ಸಂಖ್ಯೆ ಮತ್ತು ಮೂಲ ಸೌಲಭ್ಯಗಳನ್ನು ಪರಿಗಣಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ.
ಒಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶವನ್ನು ಸಮಾಜದ ದುರ್ಬಲ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಒದಗಿಸಿಕೊಡುವ ಆಶಯದ ಈ ಕಾಯಿದೆ ಹೀಗೆ ವಿಫಲಗೊಳ್ಳುವುದಕ್ಕೆ ಬಿಡಬಬಾರದು. ಈ ವರ್ಗದವರು ಹಿಂದಿನಂತೆಯೇ ಉತ್ಸಾಹದಿಂದ ಈ ಕಾಯಿದೆಯ ಪ್ರಯೋಜನ ಪಡೆಯುವಂತಹ ವಾತಾವರಣವನ್ನು ಸರಕಾರ, ಶಿಕ್ಷಣ ಇಲಾಖೆ, ಶಿಕ್ಷಣ ತಜ್ಞರು ಜತೆಗೂಡಿ ನಿರ್ಮಿಸಿಕೊಡಬೇಕಿದೆ.
