ಮಾರಣಾಂತಿಕ ರಸ್ತೆ ಗುಂಡಿಗಳು- ದುರಂತಗಳ ಹಿಂದೆ ಇರುವ ವ್ಯವಸ್ಥೆಯ ವೈಫಲ್ಯ; ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿರುವ ಅಮಾಯಕ ಜೀವಗಳು.

ಕರಾವಳಿ

ಜೀವಕಳೆದುಕೊಂಡವರ ಆತ್ಮಕ್ಕೆ ಮೋಕ್ಷ ಸಿಗಬೇಕಾದರೆ, ಅದು ದುಃಖದಿಂದಲ್ಲ. ಬದಲಾಗಿ ಈ ಅವ್ಯವಸ್ಥೆಗೆ ಕಾರಣೀಕರ್ತರನ್ನು ಹೊಣೆಗಾರನ್ನಾಗಿ ಮಾಡುವುದರಿಂದ.

✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು

2025ರ ಸೆಪ್ಟೆಂಬರ್ 9ರಂದು, ಮಂಗಳೂರಿನ ಪಣಂಬೂರು ಕೂಳೂರು ರಾಷ್ಟ್ರೀಯ ಹೆದ್ದಾರಿ-66ಯಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಲ್ಯಾಬ್ ತಂತ್ರಜ್ಞೆ ಮಾಧವಿ ಎಂಬವರು, ಮಾರಣಾಂತಿಕ ರಸ್ತೆ ಗುಂಡಿಗೆ ಬಿದ್ದು ಅವರ ಮೇಲೆ ಮೀನಿನ ಲಾರಿ ಹರಿದು ದಾರುಣವಾಗಿ ಮೃತಪಟ್ಟಿರುತ್ತಾರೆ. ಯಾರದೋ ತಪ್ಪಿಗೆ ಆ ಅಮಾಯಕ ಮಹಿಳೆ ತಮ್ಮ ಜೀವನ್ನೇ ಕಳೆದುಕೊಳ್ಳುವಂತಾಗಿದ್ದು, ದುರದೃಷ್ಟವೇ ಸರಿ.
ಸುರತ್ಕಲ್‌ನ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸುತ್ತಿರುವ ಕಾರ್ಯಾಚರಣೆ ಸಮಿತಿ ಎನ್‌ಎಚ್‌ಎಐ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದೆ. ಆಮ್ ಆದ್ಮಿ ಪಕ್ಷ (AAP) ಕೂಡ ಎನ್‌ಎಚ್‌ಎಐ ವಿರುದ್ಧ ನಿರ್ಲಕ್ಷ್ಯದ ಆಧಾರದ ಮೇಲೆ ದೂರು ದಾಖಲಿಸಿದೆ. ಸ್ಥಳೀಯರು ಹಲವು ಬಾರಿ ದುರಸ್ತಿ ಬೇಡಿಕೊಂಡರೂ, ಕ್ಯಾರೇ ಅನ್ನದ ವ್ಯವಸ್ಥೆ ಪ್ರಾಣ ಹೋದ ನಂತರವೇ ರಸ್ತೆ ಗುಂಡಿ ಮುಚ್ಚಲು ಚಾಲನೆ ನೀಡುವುದು ವಾಡಿಕೆಯಾಗಿ ಹೋಗಿದೆ. “ಪ್ರತಿ ನಿರ್ಲಕ್ಷಿತ ಗುಂಡಿಯೂ ಒಂದು ಮರಣದ ಬಲೆಯಾಗಿದೆ. ನಾಗರಿಕರು ಸಣ್ಣ ತಪ್ಪಿಗೆ ದಂಡಿಸಲ್ಪಡುತ್ತಾರೆ, ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಏಕೆ ಹೊಣೆಗಾರಿಕೆ ಇಲ್ಲ?” ಎಂಬ ಕೂಗು ಜನರಿಂದ ಕೇಳಿಬರುತ್ತಿದೆ.

ನಿರ್ಲಕ್ಷಿತ ಮೂಲಸೌಕರ್ಯದ ಮಾದರಿ — ಪಣಕ್ಕಿರುವ ಜೀವಗಳು
ಮಾಧವಿಯವರ ಮರಣವು ದಕ್ಷಿಣ ಕನ್ನಡದಲ್ಲಿ ನಡೆದಿರುವ ಹಲವಾರು ದುರಂತಗಳಲ್ಲಿ ಒಂದಷ್ಟೇ. ಈ ಅಪಘಾತವು ಇದೇ ರೀತಿಯ ಪುನರಾವರ್ತಿತ ಮಾದರಿಯನ್ನು ತೋರಿಸುತ್ತವೆ. ಜೂನ್ 2025ರಲ್ಲಿ ಪಣಂಬೂರಿನ ಬಳಿ ಬೈಕ್ ಸವಾರ ಅಶ್ರಫ್ ರಸ್ತೆ ಗುಂಡಿಗೆ ಬಿದ್ದಾಗ ಅವರ ಮೇಲೆ ಟ್ಯಾಂಕರ್ ಹರಿದು ಮೃತರಾದರು. ಆಗಸ್ಟ್ 2022 ರಲ್ಲಿ ನಂತೂರು–ಬಿಕರ್ನಕಟ್ಟೆ ರಸ್ತೆಯಲ್ಲಿ, ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದ ದ್ವಿಚಕ್ರ ಸವಾರ ಬಿದ್ದು ಸಾವನ್ನಪ್ಪಿದರು. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ಆಕ್ರೋಶ ಎದ್ದರೂ, ನಂತೂರು–ಸುರತ್ಕಲ್ ನಡುವೆ ಇರುವ ರಸ್ತೆಯನ್ನು ನಿರ್ಲಕ್ಷಿಸಿದ ಎನ್‌ಎಚ್‌ಎಐ ಮತ್ತು ಜನಪ್ರತಿನಿಧಿಗಳ ವಿರುದ್ಧವೇ ಜನರ ಕೋಪ ಮಡುಗಟ್ಟಿದೆ. ಹೀಗಿರುವಾಗಲೇ ಮತ್ತೆ ಒಂದು ಅಮೂಲ್ಯ ಜೀವ ಬಲಿಯಾಗಿದೆ.
ಈ ಘಟನೆಗಳು ವರ್ಷಗಟ್ಟಲೆ ಗುಂಡಿ ಬಿದ್ದು, ಸಾರ್ವಜನಿಕ ಜೀವಕ್ಕೆ ಅಪಾಯವೊಡ್ಡುವ ರಸ್ತೆಗಳ ಸೂಕ್ತ ರೀತಿಯಲ್ಲಿ ಅಭಿವೃದ್ಧಿಪಡಿಸದ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯುತ್ತವೆ. ತಡೆಯಬಹುದಾದ ಜೀವಹಾನಿಗಳನ್ನು ತಡೆಯದೇ ನಿರ್ಲಕ್ಷಿಸಿದ ಸರಕಾರಗಳು, ಆಡಳಿತ ವ್ಯವಸ್ಥೆ, ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಸೂಕ್ತ ಉತ್ತರ ನೀಡಬೇಕಾಗಿದೆ.

ಭ್ರಷ್ಟಾಚಾರ ಮತ್ತು ಅಗ್ಗದ ಕಾಮಗಾರಿ
ರಸ್ತೆಗಳು ಶುದ್ಧ ಬಿಟುಮಿನ್ ಬಳಸಿ ನಿರ್ಮಾಣವಾಗದೇ, ವಾಹನಗಳ ತ್ಯಾಜ್ಯ ಎಣ್ಣ ಮಿಶ್ರಣದದಿಂದ ಡಾಂಬರು ಹಾಕಲಾಗುತ್ತಿದೆ ಹಾಗೂ ಹಾಗೆ ಮಾಡುವುದರಿಂದ ಉಳಿತಾಯವಾಗುವ ಹಣವನ್ನು, ಕಂಟ್ರಾಕ್ಟುದಾರರು, ಇಂನಿನಿಯರ್ ಗಳು, ಹಾಗೂ ಜನ ಪ್ರತಿನಿಧಿಗಳು ಹಂಚಿಕೊಂಡು ಆರಾಮವಾಗಿ ಜೀವನ ಸಾಗಿಸುತ್ತಾರೆ. ಇಂತಹ ಅಧಿಕಾರಿಗಳು ಒಂದೋ ಈ ರಸ್ತೆಗಳಲ್ಲಿ ಸಂಚರಿಸಲ್ಲ, ಅಥವಾ ಅವರು ಸಂಚರಿಸುವಾಗ ಅವರಿಗೆ ಬೇಕಾದ ವ್ಯವಸ್ಥೆಯನ್ನು ಇಲ್ಲಿನ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮಾಡಿಕೊಡುತ್ತಾರೆ. ಅಗ್ಗದ ಮಿಶ್ರಣಗಳನ್ನು ಸೇರಿಸುವ ಮೂಲಕ ನಿರ್ಮಿಸಲಾದ ರಸ್ತೆಗಳು ಒಂದೇ ಒಂದು ಮಳೆಗೆ ಕರಗಿ ಹೋಗಿ ರಸ್ತೆಗುಂಡಿಗಳು ಉಂಟಾಗುತ್ತಿದ್ದು, ಇಂತಹ ಗುಂಡಿಗಳನ್ನು ಮುಚ್ಚಲು ಹಣ ಮಂಜೂರು ಮಾಡಿಕೊಳ್ಳುವ ಆಡಳಿತ ವ್ಯವಸ್ಥೆ, ಹಾಗೆ ಮಂಜೂರಾಗುವ ಹಣವನ್ನು ತಮ್ಮ ತಮ್ಮಲ್ಲೇ ಹಂಚಿಕೊಳ್ಳುವ ಈ ಭ್ರಷ್ಟರು, ರಸ್ತೆ ಗುಂಡಿಗಳನ್ನು ತಿಂಗಳುಗಟ್ಟಲೆ ಹಾಗೆಯೇ ಇರುವಂತೆ ನೋಡಿಕೊಳ್ಳುತ್ತಾರೆ. ಈ ಗುಂಡಿ ರಸ್ತೆಗಳಲ್ಲಿ ಎದ್ದು ಬಿದ್ದು, ಸಾಗುವ ವಾಹನ ಸವಾರರು, ಅಪಘಾತದಿಂದ ಜೀವ ಕಳೆದುಕೊಂಡಾಗ ಎಚ್ಚರವಾಗುವ ವ್ಯವಸ್ಥೆ, ರಸ್ತೆಗೂ, ಸಾರ್ವಜನಿಕ ಕಣ್ಣಿಗೂ ತೇಪೆ ಹಚ್ಚುತ್ತಾರೆ.

ಜಿಲ್ಲಾ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿವೃದ್ಧಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು ಹಾಗೂ ನಿರ್ಲಕ್ಷ್ಯ ತೋರಿದವರಿಗೆ ಹೊಣೆಗಾರಿಕೆ ನಿಶ್ಚಯವಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ವ್ಯವಸ್ಥೆಯ ಅಂಗವಾಗಿ ತಾನೂ ಸಹಿತ ಪಾಲುದಾರಿಕೆಯನ್ನು ಹೊಂದಿರುವ ಈ ವ್ಯವಸ್ಥೆಯಲ್ಲಿ ಜೀವ ಕಳೆದುಕೊಂಡವರ ಜೀವಕ್ಕೆ ಯಾವ ಬೆಲೆ ಎಂಬುವುದನ್ನು ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮಾಡುತ್ತೇನೆ ಎನ್ನುವ ಸ್ಪಷ್ಟನೆಯನ್ನು ಇವರು ನೀಡಲಿಲ್ಲ, ನೀಡುವುದೂ ಇಲ್ಲ. ಮಾನ್ಯ ಗುಂಡೂರಾವ್ ರವರಿಗೆ ಒಂದು ಕಿವಿ ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ಆಪ್ತ ಮಿತ್ರ ಎಂ.ಎಲ್.ಎ. ಆಗಿರುವ ಉಳ್ಳಾಲ ಕ್ಷೇತ್ರದ ತೊಕ್ಕೊಟ್ಟು – ದೇರಳಕಟ್ಟೆ ರಸ್ತೆಯಲ್ಲಿ ನಿಮ್ಮ ಹೊಣೆಗಾರಿಕೆ ನಿಗದಿ ಹಾಗೂ ವೈಜ್ಞಾನಿಕ ಪರಿಶೀಲನೆಯ ಆರಂಭ ಆಗಲಿ. ಪ್ರತಿ ಆರು ತಿಂಗಳಿಗಳಿಗೊಮ್ಮೆ ಡಾಂಬರೀಕರಣದ ಹೆಸರಲ್ಲಿ ಮಡ್-ಆಯಿಲ್ ಲೇಪಿಸಿ ನಳನಳಿಸುವ ಈ ರಸ್ತೆ ಈ ಎಂದಿನಂತೆ ಈ ಬಾರಿಯೂ ಕೇವಲ ಮೂರೇ – ಮೂರು ತಿಂಗಳುಗಳಲ್ಲಿ ಮಡ್-ಆಯಿಲ್ ಮಳೆ ನೀರಿಗೆ ಕರಗಿ ಇಂದು ಸರ್ವ ಗುಂಡಿ ಮಾಯವಾಗಿದೆ. ನಿಮ್ಮ ಈ ಪರಿಶೀಲನೆ ನಿಮ್ಮ ಸರಕಾರದ ಹಾಗೂ ಅಧಿಕಾರಿಗಳ ಕರ್ಮಕಾಂಡ ಬಯಲು ಮಾಡುವುದು. ಇದರಿಂದ ಉಳಿದ ರಸ್ತೆಗಳೂ ಹೀಗಾಗಿರುವುದು ಯಾಕೆ ಎಂಬ ಉತ್ತರ ನಿಮಗೇ ಸಿಗುವುದು.

ಹೊಣೆಗಾರಿಕೆಯ ಬದಲು ವ್ಯಕ್ತಿ ಪೂಜೆ
ಈ ಸಮಸ್ಯೆಯ ಅತಿ ಕಳವಳದ ಅಂಶವೇ, ರಾಜಕೀಯ ನಾಯಕರು ಹೊಣೆಗಾರಿಕೆಯಿಂದ ತಪ್ಪಿಸಿಕೊಂಡು ಜನರಿಂದ ಪೂಜಿಸಲ್ಪಡುವುದು. ಬೈಕ್ ಸವಾರರು ಹೆಲ್ಮೆಟ್ ಹಾಕದಿದ್ದರೆ ದಂಡಿಸಲಾಗುತ್ತದೆ, ಆದರೆ ಭ್ರಷ್ಟಾಚಾರದಿಂದ ಸೃಷ್ಟಿಯಾದ ಗುಂಡಿಗೆ ಬಿದ್ದು ಸಾಯುವವರ ಜೀವಕ್ಕೆ ಯಾವ ಉತ್ತರದಾಯಿಯೂ ಇಲ್ಲ! ಸಾರ್ವಜನಿಕ ಕೋಪ ಕೂಡ ಕೆಲವೇ ದಿನಗಳಲ್ಲಿ ತಣ್ಣಗಾಗುತ್ತದೆ, ಮತ್ತೆ ರಾಜಕೀಯ ನಾಯಕರನ್ನು “ದೊಡ್ಡವರು” ಎಂದು ಆರಾಧನೆ ಮಾಡುವ ವಾತಾವರಣ ಸೃಷ್ಟಿಯಾಗುತ್ತದೆ. ಅವರು ಬರುವಾಗ ಜೈಕಾರ ಹಾಕಿ, ಹಾರ ಅರ್ಪಿಸಿ, ಫೋಟೋ, ಸೆಲ್ಫಿ ಕ್ಲಿಕ್ಕಿಸಿ ಅವರನ್ನು ವಿಜೃಂಭಿಸಲಾಗುತ್ತದೆ. ಇದರಿಂದಾಗಿ ಅವರು ಮತ್ತಷ್ಟು ಭ್ರಷ್ಟಾಚಾರವನ್ನು ಮಾಡಿ, ಮತ್ತಷ್ಟು ಜೀವ ಬಳಿ ಪಡೆಯಲು ಅನುವು ಮಾಡಿಕೊಟ್ಟಂತಾಗುದ್ದರೆ.

ಸಾರ್ವಜನಿಕರು ಒಟ್ಟುಗೂಡಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ.
ಈ ದುರಂತಗಳನ್ನು ತಡೆಯಲು ಸಾರ್ವಜನಿಕರು ಅಭಿಯಾನ ಕೈಗೊಳ್ಳಬೇಕಾದಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
1) ಜಿಲ್ಲೆಯ ಅತ್ಯಂತ ಅಪಾಯಕಾರಿ ರಸ್ತೆಗಳನ್ನು ರಸ್ತೆ ಗುಂಡಿಗಳನ್ನು ಗುರುತಿಸಿ, ಆ ರಸ್ತೆ ಯಾವಾಗ ಆಗಿದ್ದು, ಅದರ ಗುತ್ತಿಗೆದಾರ, ಇಂಜಿನಿಯರ್ ಯಾರು, ಸರಕಾರ ಸದ್ರಿ ರಸ್ತೆಗೆ ಎಷ್ಟು ಹಣ ಮಂಜೂರು ಮಾಡಿದೆ ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕುವುದು,
2) ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಜನಪ್ರತಿನಿಧಿಗಳ ಮೇಲೆ ಲೋಕಾಯುಕ್ತ ಹಾಗೂ ಉಚ್ಚ ನ್ಯಾಯಾಲದಲ್ಲಿ ದೂರು ಸಲ್ಲಿಸುವುದು.
3) ಸಂಗ್ರಹಿಸಿದ ದಾಖಲೆಗಳನ್ನು ಹಾಗೂ “ಈ ಗುಂಡಿಯನ್ನು ನಿರ್ಮಿಸಿದವರು… ನಿರ್ಲಕ್ಷಿಸಿದವರು…” ಎಂಬ ಬರಹದೊಂದಿಗೆ ಕಾಂಟ್ರಾಕ್ಟರ್, ಇಂಜಿನಿಯರ್, ಶಾಸಕರು ಮತ್ತು ಸಂಸದರ ಚಿತ್ರಗಳನ್ನು ಪ್ರತೀ ಗುಂಡಿಯ ಬಳಿಯಲ್ಲಿ ಅಂಟಿಸುವುದು.
4) ಸೋಶಿಯಲ್ ಮೀಡಿಯಾಗಳಲ್ಲಿ ವಿವರಗಳನ್ನು ಪ್ರಚುರಪಡಿಸಿ, ಜನಾಭಿಪ್ರಾಯ ಮೂಡಿಸುವುದು.
5) ಕಾನೂನು ಮತ್ತು ಮಾಧ್ಯಮ ಒತ್ತಡ: ಎಫ್‌ಐಆರ್ ದಾಖಲೆ, ನ್ಯಾಯಾಂಗದ ಹಸ್ತಕ್ಷೇಪ ಬೇಡಿಕೆ, ಸ್ಥಳೀಯ ಮತ್ತು ಪ್ರಾದೇಶಿಕ ಮಾಧ್ಯಮಗಳ ಮೂಲಕ ನಿರಂತರ ಒತ್ತಡ.
6) ಸಮುದಾಯದ ನಿಗಾವಹಿಕೆ: ಸ್ಥಳೀಯ ಸಂಘಟನೆಗಳು (ಕಾರ್ಯಾಚರಣೆ ಸಮಿತಿಗಳು) ನಿಯಮಿತ ರಸ್ತೆ ಪರಿಶೀಲನೆ ಮಾಡಿ ವರದಿ ಮಾಡುವುದು.
7) ಪರಿಹಾರ ಮತ್ತು ಶಿಕ್ಷೆ: ಬಲಿಯಾದ ಕುಟುಂಬಗಳಿಗೆ ಸಮರ್ಪಕ ಪರಿಹಾರ ಹಾಗೂ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ–ಅಧಿಕಾರಿಗಳ ವಿರುದ್ಧ ಕಠಿಣ ಶಿಕ್ಷೆ.

ಪ್ರತಿ ನಿರ್ಲಕ್ಷಿತ ಗುಂಡಿಯೂ ಒಂದು ಮರಣದ ಬಲೆ. ಈ ಬಲೆಗೆ ಬಿದ್ದು ಜೀವಕಳೆದುಕೊಂಡವರ ಆತ್ಮಕ್ಕೆ ಮೋಕ್ಷ ಸಿಗಬೇಕಾದರೆ, ಅದು ದುಃಖದಿಂದಲ್ಲ. ಬದಲಾಗಿ ಈ ಅವ್ಯವಸ್ಥೆಗೆ ಕಾರಣೀಕರ್ತರನ್ನು ಹೊಣೆಗಾರನ್ನಾಗಿ ಮಾಡುವುದರಿಂದ. ಮೂಲಸೌಕರ್ಯ, ಹೊಣೆಗಾರಿಕೆ ಮತ್ತು ನಾಗರಿಕ ಜಾಗೃತಿಯ ಹಂತದಲ್ಲಿ ವ್ಯವಸ್ಥಾತ್ಮಕ ಬದಲಾವಣೆ ಆಗಬೇಕಾಗಿದೆ. ಬದಲಾವಣೆ ಆರಂಭವಾಗುವುದು ನಾಗರಿಕರು ತಮ್ಮ ಧ್ವನಿಯನ್ನು ಎತ್ತಿದಾಗ ಎನ್ನುವುದನ್ನು ಮರೆಯಬಾರದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಬಯಲಿಗೆಳೆಯುವ, ಜೀವ ಕಸಿಯುವ ಗುಂಡಿಗಳನ್ನು ತಡೆಗಟ್ಟುವ ಹೋರಾಟವೇ ನಿಜವಾದ ಸಾರ್ವಜನಿಕ ಸೇವೆ. ಕಾನೂನು, ಮಾಧ್ಯಮ ಮತ್ತು ಜನರ ಒಗ್ಗಟ್ಟಿನ ಒತ್ತಡದಿಂದ ಮಾತ್ರ ನಮ್ಮ ರಸ್ತೆಗಳು ಜೀವವನ್ನೇ ರಕ್ಷಿಸುವ ದಾರಿಗೆ ಬದಲಾಗುತ್ತವೆ ಎಂಬುವುದನ್ನು ನಾವು ಮನಗಾಣಬೇಕಾಗಿದೆ. ಹಾಗಾದಾಗ ಮಾತ್ರ ನಾವು ಕಳೆದುಹೋದ ಜೀವಗಳಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ.