ಉಸ್ಕು ದಮ್ಮಿಲ್ಲದ ದ್ವೇಷ ಭಾಷಣಕೋರರು, ರಿವಾಲ್ವರ್ ಹಿಡಿದಿಲ್ಲ.., ಲಾಠಿ ಬೀಸಲಿಲ್ಲ.., ಮಂಗಳೂರು ಶಾಂತ ಶಾಂತ.. That is police ಪವರ್.!
ಮಂಗಳೂರಿನಲ್ಲಿ ಗಣೇಶೋತ್ಸವ ಮೆರವಣಿಗೆಗಳು ಮಸೀದಿ ಮುಂದೆ ಹಾದು ಹೋದರೂ, ಕೇಕೆ ಹಾಕಿ ಕುಣಿಯಲಿಲ್ಲ ಭಕ್ತರು, ಈದ್ ಮಿಲಾದ್ ಜಾಥಾದಲ್ಲಿ ಯುವಕರ ಗುಂಪು ಕರ್ಕಶ ಹಾರ್ನ್ ಹಾಕಿ ನಾಗರೀಕರ ನೆಮ್ಮದಿ ಕಸಿದುಕೊಂಡಿಲ್ಲ. ಡಿಜೆ ಅಬ್ಬರವಿಲ್ಲ, ಹತ್ತು ಗಂಟೆಗೆ ಸುಚ್ ಆಪ್. ಇದಕ್ಕೆಲ್ಲ ಕಾರಣ ಮಂಗಳೂರು ಪೊಲೀಸ್ ಅಧಿಕಾರಿಗಳ ದಿಟ್ಟತನದ ನಿರ್ಧಾರ. ರಾಜಿ ರಹಿತವಾಗಿ ಕಾನೂನು ಪಾಲಿಸಿಕೊಂಡ ಪರಿಣಾಮ, ಮಂಗಳೂರು ನೆಮ್ಮದಿಯಾಗಿದೆ. ಹಿಂದೆ ಮಂದೆ ತಿರುಗಿ ನೋಡದೆ, ತಲವಾರಿನ ಭಯವಿಲ್ಲದೆ ಸಾಗಬಹುದು. ಈ ಕಾರಣಕ್ಕಾಗಿ ಮಂಗಳೂರು ಪೊಲೀಸರಿಗೆ ಶಹಬ್ಬಾಸ್ ಅನ್ನಲೇಬೇಕು.
ಬರೀ ನಾಲ್ಕು ತಿಂಗಳ ಹಿಂದೆ ಮಂಗಳೂರಿನ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ.. ಧರ್ಮದಂಗಲ್ ವಿಜೃಂಭಿಸುತ್ತಿತ್ತು. ದ್ವೇಷ ಭಾಷಣಕೋರರು ವೇದಿಕೆ ಕಟ್ಟಿ ಒಂದು ಧರ್ಮವನ್ನು ಬಹಿರಂಗವಾಗಿ ವಾಚಾಮಗೋಚರವಾಗಿ ದ್ವೇಷಕಾರುತ್ತಿದ್ದರು. ದ್ವೇಷ ಭಾಷಣಕಾರರ ಅಬತರಕ್ಕೆ ಚಪ್ಪಾಳೆ ಮುಗಿಲುಮುಟ್ಟುತ್ತಿತ್ತು. ಮತೀಯ ದ್ವೇಷಕ್ಕೆ ನೆತ್ತರ ಓಕುಳಿ ಹರಿಯುತ್ತಿತ್ತು. ಮನೆಯಿಂದ ಹೊರಗೆ ಬಂದರೆ ಯಾರ ಚೂರಿಗೆ ಯಾರು ಬಲಿಯಾಗಬಹುದು ಅನ್ನುವ ಆತಂಕ ಅಮಾಯಕ ನಾಗರಿಕರಲ್ಲಿ ಮಡುಗಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಕ್ರಿಮಿನಲ್ ಗಳು ರೌದ್ರವತಾರದ ನಂಜುಕಾರುವ ಪೋಸ್ಟ್ ಹಾಕಿ ಪೌರುಷ ತೋರುತ್ತಿದ್ದರು. ಧೋ ನಂಬರ್ ದಂಧೆಕೋರರು, ಸಮಾಜಘಾತುಕರು ಪೊಲೀಸರ ಹೆಗಲಿಗೆ ಕೈ ಹಾಕಿ ಸೆಲ್ಪಿ ತೆಗೆಯುತ್ತಿದ್ದರು, ಠಾಣೆಯಲ್ಲೆ ಠಿಕಾಣಿ ಹೂಡಿದ್ದರು. ಜನಪ್ರತಿನಿಧಿಗಳು ದಮ್ಮಿನಿಂದ ನಾವು ಆಡಿದ್ದೇ ಆಟ ಎಂದು ದ್ವೇಷ ಭಾಷಣಕಾರರಿಗಿಂತ ಕೊಳಕಾಗಿ ಮಾತನಾಡುತ್ತಿದ್ದರು. ಪೊಲೀಸರು ಅನ್ನುವುದು ಕೇವಲ ಹೆಸರಿಗೆ ಮಾತ್ರ. ಇಲ್ಲಿ ನಡೆಯುತ್ತಿದ್ದುದ್ದೇ ಧೋ ನಂಬರ್ ದಂಧೆಕೋರರ, ಮತೀಯ ದ್ವೇಷಕೋರರ ಸಾಮ್ರಾಜ್ಯ.!

ಅದೇ ನಾಲ್ಕು ತಿಂಗಳ ನಂತರ ಮಂಗಳೂರು ಹೇಗೆ ಬದಲಾಗಿದೆ ನೋಡಿ. ಸ್ಟೇಜ್ ಕಟ್ಟಿ ಧರ್ಮರಕ್ಷಣೆಯ ದ್ವೇಷ ಭಾಷಣಗಾರರ ಉಸ್ಕು ದಮ್ಮಿಲ್ಲ. ಜನಪ್ರತಿನಿಧಿಗಳ ಹಾರಾಟ, ಚೀರಾಟವಿಲ್ಲ. ಕೈಯಲ್ಲಿ ಮೈಕ್ ಹಿಡಿದರೆ ಮೈಮೇಲೆ ಬರುತ್ತಿದ್ದವರು ಇದೀಗ ಶಾಂತಿ ಮಂತ್ರದ ಪಾಠ ಬೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೋಸ್ಟ್ ಬರಹ ಬಿಡಿ ಪಾರ್ವಡ್ ಮಾಡಲು ಹೆದರುವಂತಹ ಸನ್ನಿವೇಶ ಉಂಟಾಗಿದೆ. ಅಂತಹವರಿಗೆ ಎಫ್ಐಆರ್ ಭಾಗ್ಯ ಸಲೀಸಾಗಿ ಸಿಗುತ್ತಿದೆ. ಮೂರನೇ ಕೇಸಿಗೆ ಕೆಕೋಕಾ(KCOCA) ಪ್ರೀ.., ಧೋ ನಂಬರ್ ದಂಧೆಕೋರರು, ಸಮಾಜಘಾತುಕರು ಪೊಲೀಸರ ಎದುರು ನಿಲ್ಲುವುದು ಬಿಡಿ, ಇಲ್ಲಿನ ಸಹವಾಸ ಬೇಡವೆಂದು ಊರು ಬಿಟ್ಟೇ ಪಲಾಯಣ ಮಾಡಿದ್ದಾರೆ. ಧಾರ್ಮಿಕ ಹಬ್ಬಗಳು ಯಾವುದೇ ಆತಂಕವಿಲ್ಲದೆ ಸಾಂಗವಾಗಿ ನಡೆಯುತ್ತಿದೆ. ಒಬ್ಬರ ಉಸ್ಕು ದಮ್ಮಿಲ್ಲ, ಬರೀ ಪೊಲೀಸರದ್ದೆ ದಮ್ಮು, ತಾಕತ್ತು ಮಾತ್ರ. ಇದಕ್ಕೆ ಕಾರಣವಾಗಿದ್ದು ಖಡಕ್ಕ್ ಅಧಿಕಾರಿಗಳಾದ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಅರುಣ್ ಅವರ ಸಂಘಟಿತ ಕಾನೂನು ಪಾಲನೆ.
ನಾಲ್ಕು ತಿಂಗಳ ಹಿಂದೆ ಮಂಗಳೂರಿನಲ್ಲಿದ್ದಿದ್ದು ಅದೇ ಪೊಲೀಸರು. ಈಗ ಇರುವುದು ಅದೇ ಪೊಲೀಸ್. ಆದರೆ ಹೆಡ್ ಮೇಸ್ಟ್ರು ಮಾತ್ರ ಬದಲಾಗಿದ್ದು ಅಷ್ಟೇ. ಅಷ್ಟಕ್ಕೆ ಮತೀಯವಾದಿಗಳು, ಸಮಾಜಘಾತುಕರು ಗಪ್ ಚುಪ್ ಆಗಿದ್ದಾರೆ. ಪೊಲೀಸರು ಪ್ರಾಮಾಣಿಕ, ದಿಟ್ಟತನದಿಂದ ಕಾನೂನು ಪಾಲನೆ ಜಾರಿಗೆ ತಂದರೆ ಎಂತಹ ಪರಿಸ್ಥಿತಿಯನ್ನು ನಿಭಾಯಿಸಬಹುದು ಅನ್ನುವುದಕ್ಕೆ ಮಂಗಳೂರು ಪೊಲೀಸರು ಒಂದು ಉತ್ತಮ ಉದಾಹರಣೆ.

ಮಂಗಳೂರು ಪೊಲೀಸರು ಕ್ರೈಂ ನ ಬೇರಿಗೆ ಕೈ ಹಾಕಿದ್ದಾರೆ. ಕೇವಲ ಅಪರಾಧ ಮಾಡಿದವರು ಮಾತ್ರವಲ್ಲ, ಅವರನ್ನು ಛೂ ಬಿಟ್ಟವರಿಗೂ ಕಾನೂನಿನ ರುಚಿ ತೋರಿಸುತ್ತಿದ್ದಾರೆ. ಗಲಾಟೆ, ಮರ್ಡರ್ ಅನ್ನುವುದು ಏಕಾಏಕಿ ನಡೆಯುವ ಕೃತ್ಯವಲ್ಲ. ಅದೊಂದು ರೀತಿಯ ವ್ಯವಸ್ಥಿತ ಕೃತ್ಯ . ಸುಪಾರಿ ಸೇರಿದಂತೆ ಹತ್ತಾರು ಮಂದಿ ಇಂತಹ ಕ್ರೈಂ ವ್ಯವಹಾರದಲ್ಲಿ ಭಾಗಿಯಾಗುತ್ತಾರೆ. ಆದರೆ ಕಡಿದು ಕೊಂದ ನಾಲ್ಕೈದು ಮಂದಿ ಕ್ರಿಮಿನಲ್ ಗಳು ಮಾತ್ರ ಕೇಸು ಫಿಕ್ಸ್ ಆಗಿ ಜೈಲು ಪಾಲಾಗುತ್ತಾರೆ. ಉಳಿದವರು ಡೀಲ್, ಸೆಟ್ಟಿಂಗು, ಪಿಟ್ಟಿಂಗು ನಡೆಸಿ ರಾಜಾರೋಷವಾಗಿ ಜೀವನ ನಡೆಸುತ್ತಾರೆ. ತೆರೆಮರೆಯಲ್ಲಿ ಸಮಾಜದ ಸಭ್ಯ ಮುಖವಾಡ ತೊಟ್ಟವರ ಕೈವಾಡವೂ ಇರುತ್ತದೆ. ಅಂತಹ ಕೈಯನ್ನೇ ಮಟ್ಟ ಹಾಕಿದರೆ ಮಚ್ಚು, ಲಾಂಗ್ ಎತ್ತುವವರೇ ಇರುವುದಿಲ್ಲ. ಖಡಕ್ ಆಫೀಸರ್ಸ್ ಮಂಗಳೂರಿಗೆ ಕಾಲಿಟ್ಟಾಗ ಮಾಡಿದ ಮೊದಲ ಕೆಲಸ ಇದುವೇ.. ಮರ್ಡರ್ ಪ್ರಕರಣದಲ್ಲಿ ಆರೋಪಿ ಜೊತೆಗೆ ಪ್ರತ್ಯಕ್ಷ ಯಾ ಪರೋಕ್ಷ ಕೈಯಾಡಿಸುವ ಎಲ್ಲರನ್ನೂ ಕಂಬಿ ಹಿಂದೆ ತಳ್ಳಲಾಗುವುದು. ಪೊಲೀಸ್ ಕಮೀಷನರ್ ರವರ ಒಂದು ಸ್ಟೇಟ್ ಮೆಂಟ್ ಗೆ ಕ್ರಿಮಿನಲ್ ಗಳನ್ನು ಪೋಷಿಸುವ ಸಭ್ಯರು ಸೈಲೆಂಟಾಗಿ ಕೂತು ಬಿಟ್ಟಿದ್ದಾರೆ. ಠಾಣೆಗಳಲ್ಲಿ ದೂಳು ಹಿಡಿದ ಹಳೇ ಪೈಲುಗಳು ಕೊಡವಿ ನಿಂತಿದೆ. ಮೂಲೆಯಲ್ಲಿದ್ದ ಕಾನೂನು ಪುಸ್ತಕ ಟೇಬಲಿಗೆ ಬಂದಿದೆ. ಇದೀಗ ಪೆನ್ನು ಪೇಪರ್ ಮಾತಾಡುತ್ತಿದೆ. ಇದೇ ಕಾರಣದಿಂದಲೇ ಮತೀಯ ಕ್ರೈಂ ತಹಬಂದಿಗೆ ಬಂದಿದೆ. ಇನ್ನು ಡ್ರಗ್ಸ್, ಗಾಂಜಾ ಮಾಫಿಯಾದ ಬೆನ್ನು ಮೂಳೆ ಮುರಿದಿದ್ದಾರೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ವಾರಂಟ್ ಆರೋಪಿಗಳು, ಹಳೆಯ ಆರೋಪಿಗಳಿಗೆ ಕಾನೂನಿನ ಬಿಸಿ ಮುಟ್ಟಿಸದೆ ಹಾಗೆಯೇ ಬಿಟ್ಟ ಪರಿಣಾಮ ಹೊಸ ಹೊಸ ಕ್ರಿಮಿನಲ್ ಗಳ ಉದಯಕ್ಕೆ ಕಾರಣವಾಗುತ್ತಿತ್ತು. ಇದೀಗ ಯಾವುದೇ ಬಿಲದಲ್ಲಿ ಅಡಗಿದ್ದರೂ ಹಳೆ ಆರೋಪಿಗಳೆಲ್ಲ ಜೈಲು ಸೇರುತ್ತಿದ್ದಾರೆ. ಕ್ರಿಮಿನಲ್ ಗಳ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗಿದೆ.

ಮಂಗಳೂರಿನಲ್ಲಿ ಅವತ್ತಿದ್ದದ್ದು ಇದೇ ಪೊಲೀಸು, ಈಗ ಇರುವುದು ಇದೇ ಪೊಲೀಸು, ಅದೇ ಖಾಕಿ. ಆದರೆ ಕಮಾಂಡರ್ ಮಾತ್ರ ಚೇಂಜಾಗಿದೆ. ರೌಡಿಗಳನ್ನು, ಕ್ರಿಮಿನಲ್ ಗಳನ್ನೆಲ್ಲ ಕಮಾಂಡರ್ ಪೆರೇಡ್ ನಡೆಸಲಿಲ್ಲ. ಲಾಠಿ ಬೀಸಲಿಲ್ಲ, ರಿವಾಲ್ವರ್ ಎತ್ತಲಿಲ್ಲ. ಪೊಲೀಸ್ ಆಫೀಸರ್ಸ್ ಕಚೇರಿಯಲ್ಲೇ ಕೂತು ಮಂಗಳೂರನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಪರಾಧ ಪ್ರಕರಣ, ಮತೀಯ ಹಿಂಸಾಚಾರಗಳನ್ನು ಚಿವುಟಿ ಹಾಕಿದ ಜಾಣ ನಡೆಯನ್ನು ಮೆಚ್ಚಲೇಬೇಕು. ಪೊಲೀಸರು ನಿಷ್ಠಾವಂತರಾಗಿದ್ದರೆ, ಎಂತಹ ದೊಡ್ಡ ಕ್ರಿಮಿನಲ್ ಗಳನ್ನು ಹದ್ದುಬಸ್ತಿನಲ್ಲಿಡಬಹುದು ಅನ್ನುವುದಕ್ಕೆ ಮಂಗಳೂರು ಪೊಲೀಸರ ಕಾರ್ಯವೈಖರಿಯೇ ಸಾಕ್ಷಿ. ಇಡೀ ಮಂಗಳೂರು ನಮ್ಮದು ಎಂದು ಬೀಗುತ್ತಿದ್ದ ಕ್ರಿಮಿನಲ್ ಗಳು, ದಂಧೆಕೋರರು, ಮತೀಯವಾದಿಗಳು ಉಸ್ಕು ದಮ್ಮಿಲ್ಲದೆ ಬಿಲ ಸೇರಿದ್ದಾರೆ. ಇದೀದ ಜಿಲ್ಲೆಯಲ್ಲಿ ಕಾನೂನು ಪಾಲಕರಾದ ಪೊಲೀಸರದ್ದೇ ದಮ್ಮು, ತಾಕತ್ತು.
