ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಎಟಿಎಂಗೆ ನಿಗದಿತ ನಗದು ಜಮಾ ಮಾಡದೆ, ಕಡಿಮೆ ಹಣ ಜಮಾ ಮಾಡಿ ದುರುಪಯೋಗಪಡಿಸಿ, ವಂಚನೆ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025 ರಂತೆ ಸುಬ್ರಹ್ಮಣ್ಯಂ, ಪುಲುಗುಜ್ಜು ಎಂಬವರ ಮೇಲೆ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ 04-09-2023 ರಿಂದ 19-12-2025 ರ ಅವಧಿಯಲ್ಲಿ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಆರೋಪಿತ ಸುಬ್ರಹ್ಮಣ್ಯಂ, ಪುಲುಗುಜ್ಜು ಎಂಬವರು ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು.

ಆರೋಪಿತ ಸುಬ್ರಹ್ಮಣ್ಯಂ, ಪುಲುಗುಜ್ಜು ಎಂಬವರು ದಿನಾಂಕ 06-02-2024 ರಿಂದ 16-12-2025 ರವರೆಗೆ ಬ್ಯಾಂಕಿನ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ರೂ.70,86,000/- ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ದಿನಾಂಕ 19-12-2025 ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ ರೂ.55,000/- ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ.
ಹಣದ ದುರುಪಯೋಗ ಪತ್ತೆಯಾಗುತ್ತಿದ್ದಂತೆ ದಿನಾಂಕ 17-12-2025 ರಂದು ಆರೋಪಿತ ಯಾರಿಗೂ ತಿಳಿಸದ ಪರಾರಿಯಾಗಿರುತ್ತಾರೆ. ಆರೋಪಿತನು ಬ್ಯಾಂಕಿಗೆ ಒಟ್ಟು 71,41,000 ರೂ. ವಂಚನೆ ಮಾಡಿರುತ್ತಾರೆ. ಎಂದು C.V.S. ಚಂದ್ರಶೇಖರ್, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರು, ಜೆಪ್ಪು ಮಂಗಳೂರು ಇವರು ದಿನಾಂಕ 23-12-2025 ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025, ಕಲಂ 314, 316(5), 318(2) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
