ಸರಕಾರಿ ಡಿಪ್ಲೋಮಾ ಕೋರ್ಸ್ ಗಳತ್ತ ಕಣ್ಣು ಹಾಯಿಸುತ್ತಿಲ್ಲ ವಿದ್ಯಾರ್ಥಿಗಳು

ರಾಜ್ಯ

ಈ ವರ್ಷ 9000 ಕ್ಕೂ ಅಧಿಕ ಸೀಟುಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ..ಖಾಲಿ

ರಾಜ್ಯದ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಳೆದ ಮೂರು ವರ್ಷಗಳಿಂದ ಡಿಪ್ಲೋಮಾ ಕೋರ್ಸ್ ಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದು, ಈ ವರ್ಷ 9,349 ಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿದಿವೆ. ಕಟ್ಟಡಗಳು, ಪ್ರಯೋಗಾಲಯಗಳು ಮತ್ತು ಪೂರ್ಣ ಪ್ರಮಾಣದ ಅಧ್ಯಾಪಕರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದಾಗಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯಾದ್ಯಂತ ಒಟ್ಟು 109 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, 2025-26 ನೇ ಸಾಲಿನಲ್ಲಿ ಒಟ್ಟು 26,730 ಡಿಪ್ಲೋಮಾ ಕೋರ್ಸ್ ಸೀಟುಗಳು ಲಭ್ಯವಿದ್ದು, ಕೇವಲ 17,381 ಸೀಟುಗಳು ಮಾತ್ರ ಭರ್ತಿಯಾಗಿವೆ. ಖಾಲಿ ಉಳಿದಿರುವ ಹೆಚ್ಚಿನ ಸಂಖ್ಯೆಯ ಸೀಟುಗಳು ಸಿವಿಲ್, ಮೆಕ್ಯಾನಿಕಲ್ ಮತ್ತು ಆಟೋ ಮೊಬೈಲ್ ಕೋರ್ಸ್ ಗಳು ಸೇರಿವೆ. ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗೂ ಉತ್ತಮ ಸಂಬಳದ ಕೆಲಸ ಸಿಗುತ್ತದೆ. ಆದರೆ ಸರಕಾರಿ ಪಾಲಿಟೆಕ್ನಿಕ್ ಕಡೆ ವಿದ್ಯಾರ್ಥಿಗಳು ತಲೆ ಹಾಕುತ್ತಿಲ್ಲ. ಮೂಲಭೂತ ಸೌಕರ್ಯದ ಕೊರತೆ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು.

ಇನ್ನು ರಾಜ್ಯದಲ್ಲಿನ ಒಟ್ಟು 109 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾದ 27 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ರಾಜ್ಯ ಸರಕಾರ ಇದುವರೆಗೆ ಯಾವುದೇ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅತಿಥಿ ಅಧ್ಯಾಪಕರ ಮೂಲಕ ಮಾತ್ರ ನಡೆಸಲಾಗುತ್ತಿದೆ.