ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ, ಅಂಗವಿಕಲ ಕೋಟಾದ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನ

ರಾಜ್ಯ

ಆರೋಪಿಗಳಿಂದ ನಕಲಿ ದಾಖಲೆ ಪತ್ರ, ನಕಲಿ ದಾಖಲೆ ಸೃಷ್ಟಿಸಲು ಬಳಸುತ್ತಿದ್ದ ಉಪಕರಣಗಳ ಜಪ್ತಿ

ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಅಂಗವಿಕಲ ಕೋಟಾದ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ್ದವರಿಗೆ ನೆರವು ನೀಡಿದ್ದ ಮೂವರು ಆರೋಪಿಗಳನ್ನು ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್‌ನ ನಿವಾಸಿ ಭರಮಪ್ಪ, ಹೊಸಪೇಟೆಯ ಉಮೇಶ್ ಚೌಧರಿ ಹಾಗೂ ಕುಕನೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಸುಧಾಕರ್ ಬಂಧಿತ ಆರೋಪಿಗಳು. ಆರೋಪಿಗಳಿಂದ ನಕಲಿ ದಾಖಲೆಗಳು ಹಾಗೂ ನಕಲಿ ದಾಖಲೆ ಸೃಷ್ಟಿಸಲು ಬಳಸುತ್ತಿದ್ದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಹತ್ತು ದಿನ ಪೊಲಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಧಾಕರ್ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಮೂವರೂ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಭ್ಯರ್ಥಿಗಳಿಗೆ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

21 ಅಭ್ಯರ್ಥಿಗಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ್ದ ನಾಲ್ವರ ವಿರುದ್ಧ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಅವರ ನಿರ್ದೇಶನದಂತೆ ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಗದ್ಯಾಳ್ ಅವರು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಮೊದಲ ಹಂತದ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿದ್ದಾರೆ. 21 ಅಭ್ಯರ್ಥಿಗಳು ಶ್ರವಣ ದೋಷವಿದೆ ಎಂದು ವೈದ್ಯಕೀಯ ದಾಖಲೆ ಪತ್ರಗಳನ್ನು ಸಲ್ಲಿಸಿದ್ದರು. ಪ್ರಮಾಣ ಪತ್ರಗಳ ಪರಿಶೀಲನೆಯ ವೇಳೆ ಅಭ್ಯರ್ಥಿಗಳು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.