ಮರಳುಗಾಡಿನ ಚಿನ್ನದ ರಹಸ್ಯ! ಗೋಲ್ಡ್ ಸ್ಮಗ್ಲಿಂಗ್ ಹಿಂದೆ ದೊಡ್ಡ ಮಾಫಿಯಾ

ಕರಾವಳಿ

ಹಳದಿ ಲೋಹದ ಮೇಲೆ ಭಾರತೀಯರಿಗೆ ಎಷ್ಟು ವ್ಯಾಮೋಹ ಇದೆ ಎಂದರೆ ಭಾರತೀಯರನ್ನು ‘ಚಿನ್ನಪ್ರಿಯರು’ ಎಂದೇ ಗುರುತಿಸಲಾಗುತ್ತದೆ. ಆದರೆ, ಭಾರತೀಯರಿಗೆ ಬೇಕಾದಷ್ಟು ಚಿನ್ನವನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿವರ್ಷ ಸುಮಾರು 400 ಟನ್ನಷ್ಟು ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಆಮದಾಗುವ ಚಿನ್ನದ ಮೇಲೆ ಸರ್ಕಾರ ವಿಧಿಸುವ ಸುಂಕವನ್ನು ತಪ್ಪಿಸಲು ಕಳ್ಳ ಮಾರ್ಗದಲ್ಲಿ ಚಿನ್ನವನ್ನು ಭಾರತಕ್ಕೆ ತರಲಾಗುತ್ತದೆ. ಇದೊಂದು ದೊಡ್ಡ ದಂಧೆಯಾಗಿದ್ದು, ವಿದೇಶಗಳಿಂದ ಅನಿಯಂತ್ರಿತವಾಗಿ ಕಳ್ಳಸಾಗಣೆ ನಡೆಯುತ್ತಲೇ ಇದೆ. ದುಬೈ ಕಳ್ಳಸಾಗಣೆದಾರರ ಕೇಂದ್ರ ಆಗಿದ್ದು, ಏನಿದು ಚಿನ್ನ ಕಳ್ಳಸಾಗಣೆ?, ದುಬೈನಿಂದಲೇ ಹೆಚ್ಚು ಕಳ್ಳಸಾಗಣೆ ಏಕೆ? ಎಂಬ ಒಂದಷ್ಟು ಮಾಹಿತಿ ಇಲ್ಲಿದೆ.

ಹಬ್ಬ, ಮದುವೆ, ಅಕ್ಷಯ ತೃತೀಯ ಬಂತೆಂದರೆ ಚಿನ್ನ ಖರೀದಿ ಮಾಡಬೇಕು. ಈ ಸಮಯದಲ್ಲಿ ಬೆಲೆ ಏರಿರುತ್ತದೆ. ಹೀಗಾಗಿ ಎಷ್ಟು ಬೇಗ ಖರೀದಿ ಮಾಡಬೇಕು? ಯಾವಾಗ ಚಿನ್ನದ ಬೆಲೆ ಇಳಿಯಬಹುದು ಎಂದು ಜನಸಾಮಾನ್ಯರು ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಯಾರ ಊಹೆಗೂ ನಿಲುಕದ ಚಿನ್ನದ ಕಳ್ಳಸಾಗಣೆ ಹಾದಿಯೊಂದು ಮರಳುಗಾಡು ದುಬೈನಿಂದ ಭಾರತದವರೆಗೆ ತೆರೆದುಕೊಂಡಿದೆ. ವಿಮಾನ ಅಥವಾ ಹಡಗಿನ ಮೂಲಕ ಪ್ರತಿ ನಿತ್ಯ 100 ಕೇಜಿಗೂ ಅಧಿಕ ಚಿನ್ನ ಭಾರತವನ್ನು ತಲುಪುತ್ತಿದೆ. ಚಿನ್ನದ ಆಮದಿನ ಮೇಲೆ ಭಾರತ ವಿಧಿಸುವ ಸುಂಕವನ್ನು ತಪ್ಪಿಸುವುದು ಮಾತ್ರವಲ್ಲದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸಿ ತಂದು ಅದನ್ನು ಹೆಚ್ಚು ಬೆಲೆಗೆ ಮಾರುವ ಉದ್ದೇಶದಿಂದ ಈ ಕಳ್ಳಸಾಗಣೆ ನಡೆಯುತ್ತದೆ.

ದುಬೈನಲ್ಲಿ ಚಿನ್ನದ ಖರೀದಿ ಮೇಲೆ ಯಾವುದೇ ತೆರಿಗೆಯನ್ನು ಅಲ್ಲಿನ ಸರ್ಕಾರ ವಿಧಿಸುವುದಿಲ್ಲ. ಮೇಕಿಂಗ್‌ ಚಾರ್ಜ್‌ ಸಹ ಕಡಿಮೆ ಇರುವುದರಿಂದ ಅಲ್ಲಿ ಸ್ಪರ್ಧಾತ್ಮಕ ಬೆಲೆಗೆ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಕೆಲವೊಮ್ಮೆ ಭಾರತ ದಲ್ಲಿ ಕೊಳ್ಳುವುದಕ್ಕಿಂತ ದುಬೈನಲ್ಲಿ ಕೊಂಡರೆ ಚಿನ್ನದ ಬೆಲೆ ಶೇ.20ರಷ್ಟು ಕಡಿಮೆ ಇರುತ್ತದೆ. ಹೀಗಾಗಿ ಜನ ಇಲ್ಲಿ ಚಿನ್ನ ಖರೀದಿ ಮಾಡಲು ಬಯಸುತ್ತಾರೆ.

ಕಚ್ಚಾತೈಲದ ಬಳಿಕ ಚಿನ್ನ ಮಾರಾಟದಿಂದ ದುಬೈ ಹೆಚ್ಚು ಹಣ ಗಳಿಸುತ್ತಿದೆ. ಇದಕ್ಕಾಗಿಯೇ ಹಲವು ಚಿನ್ನದ ಮಾರುಕಟ್ಟೆಗಳನ್ನು ದುಬೈನಲ್ಲಿ ತೆರೆಯಲಾಗಿದೆ. ಇವುಗಳನ್ನು ಸರ್ಕಾರವೇ ನಿಯಂತ್ರಣ ಮಾಡುತ್ತಿರುವುದರಿಂದ ಜನರಿಗೆ ಇವುಗಳ ಮೇಲಿನ ವಿಶ್ವಾಸ ಹೆಚ್ಚಿನ ಪ್ರಮಾಣದಲ್ಲಿದೆ. ಇಲ್ಲಿನ ಸೂಕ್‌ ಇನ್‌ ದೇರಾ ಚಿನ್ನದ ಹೂಡಿಕೆದಾರರು, ಚಿಲ್ಲರೆ ಮಾರಾಟಗಾರರು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಅಲ್ಲದೆ, ಚಿನ್ನದ ಮಾರಾಟಕ್ಕಾಗಿಯೇ ದುಬೈ ಸರ್ಕಾರ 2022ರಲ್ಲಿ ದುಬೈ ಮಲ್ಟಿ ಕಮಾಡಿಟೀಸ್‌ ಸೆಂಟರ್‌ ಸ್ಥಾಪಿಸಿದೆ. ಹೀಗಾಗಿ ಜಗತ್ತಿನಲ್ಲಿ ದುಬೈ ಚಿನ್ನದ ನಗರಿಯಾಗಿ ಮಾರ್ಪಾಟಾಗಿದೆ.

ದುಬೈನಲ್ಲಿ ಕಡಿಮೆ ಬೆಲೆಗೆ ಚಿನ್ನ ಖರೀದಿ ಮಾಡಿದರೂ ಅದನ್ನು ಭಾರತಕ್ಕೆ ತರುವುದು ಸುಲಭದ ಕೆಲಸವಲ್ಲ. ದುಬೈನಿಂದ ಭಾರತಕ್ಕೆ ತರುವ ಚಿನ್ನಕ್ಕೆ ಸುಂಕ ಪಾವತಿಸಬೇಕು. ಅಲ್ಲದೆ, ನಿರ್ದಿಷ್ಟ ಪ್ರಮಾಣದಲ್ಲಿ (ಯಾವುದೇ ಸುಂಕವಿಲ್ಲದೆ 20 ಗ್ರಾಂ ಚಿನ್ನ ತರಬಹುದು. ದುಬೈನಲ್ಲಿ 6 ತಿಂಗಳಗಿಂತ ಹೆಚ್ಚು ವಾಸವಾಗಿದ್ದು ಬಳಿಕ 1 ಕೆ.ಜಿ. ಚಿನ್ನ ತರಲು ಅವಕಾಶವಿದೆ. ಇದಕ್ಕೆ ಸುಂಕ ಪಾವತಿಸಬೇಕು) ಮಾತ್ರ ಚಿನ್ನ ತರಲು ಅವಕಾಶವನ್ನು ನೀಡಲಾಗಿದೆ. ಆಮದಿನ ಮೇಲೆ ಭಾರತ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ತೆರಿಗೆಗಳನ್ನೂ ವಿಧಿಸುತ್ತದೆ. ಈ ಮೊದಲು ಚಿನ್ನದ ಆಮದಿನ ಮೇಲೆ ಶೇ.15ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಚಿನ್ನದ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ 2024ರ ಜುಲೈನಲ್ಲಿ ಆಮದು ಸುಂಕವನ್ನು ಶೇ.6ಕ್ಕೆ ಇಳಿಕೆ ಮಾಡಲಾಯಿತು. ಆದರೂ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಚಿನ್ನ ತರಲು ಅವಕಾಶವಿರುವುದರಿಂದ ಹೆಚ್ಚಿನ ಚಿನ್ನ ತಂದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಇಲ್ಲವೇ ದಂಡ ಪಾವತಿಸಬೇಕಾಗುತ್ತದೆ. ಮುಟ್ಟುಗೋಲು ಹಾಕಿಕೊಂಡ ಚಿನ್ನ ಆರ್‌ಬಿಐ ಪಾಲಾಗುತ್ತದೆ.

ಕಳ್ಳ ಸಾಗಣೆದಾರರು ಜಲ ಮಾರ್ಗಕ್ಕಿಂತ ಭೂಮಿ ಮತ್ತು ವಾಯು ಮಾರ್ಗದ ಮೂಲಕ ಹೆಚ್ಚು ಚಿನ್ನವನ್ನು ಭಾರತಕ್ಕೆ ತರುತ್ತಾರೆ. ಭಾರತದ ಈಶಾನ್ಯ ಗಡಿ ಭಾಗದಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್‌, ನೇಪಾಳ, ಭೂತಾನ್‌ಗಳ ಮೂಲಕ ರಸ್ತೆ ಮಾರ್ಗ ದಲ್ಲಿ ಕಳ್ಳಸಾಗಣೆದಾರರು ಭಾರತವನ್ನು ಪ್ರವೇಶಿಸುತ್ತಾರೆ. ಅದೇ ರೀತಿ, ಪಶ್ಚಿಮ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಮೂಲಕ ವಾಯು ಮಾರ್ಗದಲ್ಲಿ ಚಿನ್ನ ತರಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಫ್ರಿಕಾ ನೈರೋಬಿ ಸೇರಿ ಹಲವು ದೇಶ ಗಳಿಂದ, ಉಜ್ಬೇಕಿಸ್ತಾನದ ತಾಷ್ಕೆಂಟ್‌ ವಿಮಾನ ನಿಲ್ದಾಣದಿಂದಲೂ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ.

1 ಕೆ.ಜಿ. ಸಾಗಿಸಿದರೆ 1.5 ಲಕ್ಷ ರೂ. ಸಿಗುತ್ತದೆ

ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಿಂದ ಸಾಮಾನ್ಯ ಜನ ಕೆಲಸ ಅರಸಿಕೊಂಡು ದುಬೈಗೆ ಪ್ರಯಾಣಿಸಿರುತ್ತಾರೆ. ಇವರಲ್ಲಿ ಬಹುತೇಕರು ಚಿನ್ನ ಕಳ್ಳಸಾಗಣೆದಾರರ ಆಮಿಷಕ್ಕೆ ಬಲಿಯಾಗಿ ಬಲಿಪಶುಗಳಾಗುತ್ತಿದ್ದಾರೆ. ದುಬೈನಿಂದ ಭಾರತಕ್ಕೆ 1 ಕೇಜಿ ಚಿನ್ನ ಕಳ್ಳಸಾಗಣೆ ಮಾಡಿದರೆ ಸುಮಾರು 1.5 ಲಕ್ಷ ರೂ. ಲಾಭ ಮಾಡಿಕೊಳ್ಳಬಹುದು. ಹೀಗಾಗಿ ಕಳ್ಳಸಾಗಣೆಗೆ
ಒಪ್ಪಿಕೊಳ್ಳುವ ಸಾಮಾನ್ಯರಿಗೆ 1.5 ಲಕ್ಷ ರೂ. ಪಾವತಿ ಮಾಡಲಾಗುತ್ತದೆ. ಇಲ್ಲದಿದ್ದರೆ ದುಬೈನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಅವರಿಗೆ ತಿಳಿಯದಂತೆ ಚಿನ್ನವನ್ನು ನೀಡಿ ಸಾಗಣೆ ಮಾಡಿಸಲಾಗುತ್ತದೆ. ಚಿನ್ನ ಕಳ್ಳಸಾಗಣೆ ಹಿಂದೆ ದೊಡ್ಡ ಮಾಫಿಯಾವೇ ಕೆಲಸ ಮಾಡುತ್ತದೆ.

ಬೆಂಗಳೂರು ಏರ್ ಪೋರ್ಟ್ ನಲ್ಲೇ ಹೆಚ್ಚು ಅಕ್ರ ಮ ಚಿನ್ನ ಸಾಗಣೆ

ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಕಳೆದೊಂದು ವರ್ಷದ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಹೆಚ್ಚು ಚಿನ್ನ ಅಕ್ರಮ ಸಾಗಾಣೆ ಪ್ರಕರಣಗಳು ವರದಿಯಾಗಿವೆ. ಮಂಗಳೂರು ವಿಮಾನ ನಿಲ್ದಾಣ 2ನೇ ಸ್ಥಾನದಲ್ಲಿದೆ

ಇತ್ತೀಚಿನ ದಿನಗಳಲ್ಲಿ ಹಣದ ಆಮಿಷವೊಡ್ಡಿ ಚಿನ್ನ ಸಾಗಣೆಗೆ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ. ರಬ್ಬರ್‌ ಪೊಟ್ಟಣದಲ್ಲಿ ಚಿನ್ನದ ಬಿಸ್ಕತ್‌ ಹಾಗೂ ಉಂಡಿಯನ್ನು ಹಾಕಿ, ಅಂಥ ಪೊಟ್ಟಣವನ್ನು ಮಹಿಳೆಯರ ಗುಪ್ತಾಂಗಗಳಲ್ಲಿ ಇರಿಸಿ ಸಾಗಿಸಲಾಗುತ್ತಿದೆ. ಕಳೆದ ವರ್ಷ ಚೆನ್ನೈ ಮೂಲದ ಇಬ್ಬರು ಮಹಿಳೆಯರು ಇದೇ ಮಾದರಿಯಲ್ಲಿ ಚಿನ್ನದ ತಂದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದರು. ಮಂಗಳೂರು ಏರ್‌ಪೋರ್ಟ್‌ನಲ್ಲೂ ದಕ್ಷಿಣ ಕನ್ನಡ ಮತ್ತು ಕೇರಳ ಮೂಲದ ಮಹಿಳೆಯರು ಇದೇ ರೀತಿ ಸಿಕ್ಕಿಬಿದ್ದಿದ್ದರು.

ಚಿನ್ನದ ಪೇಸ್ಟ್‌, ಪೌಡರ್‌, ಪೇಸ್ಟ್‌, ಮಾತ್ರೆಗಳನ್ನು ಸಣ್ಣ ಪ್ರಮಾಣದಲ್ಲಿ ಸಿದ್ಧಪಡಿಸಿ, ದೇಹದ ಗುದದ್ವಾರ, ಗುಪ್ತಾಂಗ ಹಾಗೂ ಹೊಟ್ಟೆ, ವಿಗ್‌(ತಲೆಕೂದಲು)ನಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸಲಾಗುತ್ತಿದೆ.