ಸೈಫುದ್ದೀನ್ ಕೊಲೆ ಪ್ರಕರಣ: ಈ ಹತ್ಯೆಯ ಹಿಂದೆ ಹೆಣ್ಣಿನ ವಾಸನೆ, ಮಹಿಳೆಯ ಬಂಧನ

ಕರಾವಳಿ

ಉಡುಪಿ: ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಒಳಸಂಚು ರೂಪಿಸಿದ ಆರೋಪದಲ್ಲಿ ಮಹಿಳಾ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದು ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

ಕೊಲೆ ಪ್ರಕರಣದ ಆರೋಪಿ ಮಹಮ್ಮದ್ ಫೈಜಲ್ ಖಾನ್ ಪತ್ನಿ ಮಿಷನ್ ಕಂಪೌಂಡೌ ನಿವಾಸಿ ರಿಧಾ ಶಭನಾ ಬಂಧಿತ ಆರೋಪಿ. ಈಕೆ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದಳು ಎನ್ನಲಾಗಿದೆ‌. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ರಿದಾ ಶಬಾನಾ ಸೈಪುದ್ದೀನ್ ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು ಎಂಬ ಅಪವಾದವಿದೆ. ಮೃತ ಸೈಪುದ್ದೀನ್ ರಿಧಾ ಶಭಾನಾಗೆ ಕಿರುಕುಳ ನೀಡಿದ್ದ ಎನ್ನಲಾಗಿದ್ದು ಇದರಿಂದಲೇ ಇವರು ಒಟ್ಟು ಸೇರಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಹತ್ಯೆಯ ಹಿಂದೆ ಹೆಣ್ಣಿ ವಾಸನೆ ಅಡಗಿದೆ ಎಂಬ ಗುಮಾನಿ ಇದೆ.

ಸೆ.27ರಂದು ಸೈಫುದ್ದೀನ್‌ನನ್ನು ಅವರ ಕೊಡವೂರಿನ ಮನೆಯಲ್ಲಿಯೇ ಆರೋಪಿಗಳಾದ ಮಹಮ್ಮದ್ ಫೈಜಲ್ ಖಾನ್, ಮಹಮ್ಮದ್ ಶರೀಫ್, ಅಬ್ದುಲ್ ಶುಕೂರು(ಅದ್ದು)ಮಾರಾಕಾಯುಧಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಮೂವರನ್ನು ಸೆ.28ರಂದು ಪೊಲೀಸರು ಬಂಧಿಸಿದ್ದರು. ಸದ್ಯ ಮಹಿಳೆಯ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.