ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಅವರನ್ನು ಸಿನಿಮೀಯ ರೀತಿಯಲ್ಲಿ ಕಾರು ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಗಂಗಾವತಿ ನಗರದ ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂದುಗಡೆ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಲೀಲಾವತಿ ಆಸ್ಪತ್ರೆ ಬಳಿ ತಡರಾತ್ರಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಎಂಬುವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಲೀಲಾವತಿ ಆಸ್ಪತ್ರೆಯ ಮುಂಭಾಗ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ಎರಡು ಗಂಟೆ ಸಮಯಕ್ಕೆ ಕಾರಲ್ಲಿ ಅಗಮಿಸಿದ್ದ ದುಷ್ಕರ್ಮಿಗಳು ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ನೇಹಿತರೊಂದಿಗೆ ಊಟ ಮುಗಿಸಿ ವೆಂಕಟೇಶ್ ದೇವಿ ಕ್ಯಾಂಪ್ ನಿಂದ ಗಂಗಾವತಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಫಾಲೋ ಮಾಡಿದ ದುಷ್ಕರ್ಮಿಗಳು ಕಾರಿನಿಂದ ವೆಂಕಟೇಶ್ ಇದ್ದ ಬೈಕ್ ಗೆ ಗುದ್ದಿ, ವೆಂಕಟೇಶ್ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಚ್ಚಿಹತ್ಯೆಗೈದಿದ್ದಾರೆ ಎನ್ನಲಾಗಿದೆ. ಗಂಗಾವತಿ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
