ಹೆಜ್ಜೇನು ಕಡಿತದಿಂದ ಮೃತಪಟ್ಟ ಬಾಲಕಿಯ ಮೃತದೇಹವನ್ನು ಮನೆಗೆ ಕೊಂಡೊಯ್ಯುತ್ತಿರುವಾಗ ಕಿಡಿಗೇಡಿಗಳು ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿ, ರಸ್ತೆ ಮದ್ಯೆ ತಡೆದು ನಿಲ್ಲಿಸಿದ ಘಟನೆ ಪೆರ್ನೆ- ಕಡಂಬು ಎಂಬಲ್ಲಿ ನಡೆದಿದೆ.
ದಿನಾಂಕ 12-10-2025 ರ ರಾತ್ರಿ 12:30 ಗಂಟೆಗೆ, ಪಡ್ನೂರು ಗ್ರಾಮದ ಕಾರ್ಲ ಶ್ರೀರಾಮ ಭಜನಾ ಮಂದಿರದ ಬಳಿ, ಶವ ಸಾಗಿಸುತ್ತಿದ್ದ KA-21 AE-3033 ಅಂಬುಲೆನ್ಸ್ ಅನ್ನು ಬೊಲೆರೋ ವಾಹನ (ನಂ: KA 19 AE 7322) ಹಿಂಬದಿಯಿಂದ ಓವರ್‌ಟೇಕ್ ಮಾಡಿ ರಸ್ತೆಗೆ ಅಡ್ಡಗಟ್ಟಿ ಅಕ್ರಮವಾಗಿ ತಡೆದ ಘಟನೆ ನಡೆದಿದೆ.
ಅಂಬುಲೆನ್ಸ್‌ನಲ್ಲಿ ಹೆಜ್ಜೇನು ಕಡಿತದಿಂದ ಮೃತಪಟ್ಟ ಬಾಲಕಿಯ ಮೃತದೇಹವಿದ್ದು, ಮೃತರ ಕುಟುಂಬಸ್ಥರು ದುಃಖದ ಪರಿಸ್ಥಿತಿಯಲ್ಲಿದ್ದರು. ಆದರೆ ಆರೋಪಿತರು ಅಂಬುಲೆನ್ಸ್‌ನಲ್ಲಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಿರ್ಯಾದಿದಾರರಾದ ಅವಿನಾಶ್ ಎಂ. ಪುತ್ತೂರು ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸೇಡಿಯಾಪು ಕೂಟೇಲು ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ದಿಶಾ ಎಂಬ ಏಳು ವರ್ಷದ ಬಾಲಕಿಗೆ ಶುಕ್ರವಾರದಂದು ಹೆಜ್ಜೇನು ದಾಳಿ ಮಾಡಿದ ಕಾರಣ ಆಕೆ ಶನಿವಾರ ಮೃತಪಟ್ಟಿದ್ದಳು. ಈಕೆಯ ಮೃತದೇಹವನ್ನು ಮನೆಗೆ ಯಾಗಿಸುವ ದಾರಿ ಮದ್ಯೆಆರೋಪಿಗಳು ರಸ್ತೆ ತಡೆದು ಅನುಚಿತವಾಗಿ ವರ್ತಿಸಿದ್ದರು. ಮನೆಯವರು ಮೃತದೇಹವನ್ನು ಮನೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಬೇಡಿಕೊಂಡರೂ ಸಾಕಷ್ಟು ಹೊತ್ತು ಅಂಬ್ಯುಲೆನ್ಸ್ ತಡೆದು ನಿಲ್ಲಿಸಿದಾಗಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
