ಪ್ರತಿಷ್ಠಿತ ಅಡ್ಯಾರ್-ಅರ್ಕುಳ ಗ್ರಾಮ ಪಂಚಾಯತ್ ಎಸ್ ಡಿ ಪಿಐ ವಶವಾಗಿದೆ. ಬಹುಮತವಿದ್ದ ಕಾಂಗ್ರೆಸ್ ಬಣ ರಾಜಕೀಯ ಮೇಳೈಸಿ ಅಧಿಕಾರ ಕಳೆದುಕೊಳ್ಳುವಂತಾಗಿದೆ. ನಿನ್ನೆಯಷ್ಟೇ ಕಾಂಗ್ರೆಸ್ ಕೈಯಲ್ಲಿದ್ದ ಗುರುಪುರ ಗ್ರಾಮ ಪಂಚಾಯತ್ ಎಸ್ ಡಿ ಪಿಐ ಪಾಲಾಗಿತ್ತು. ಇದೀಗ ಅಡ್ಯಾರ್ ಗ್ರಾಮ ಪಂಚಾಯತ್ ನ್ನು ಕಾಂಗ್ರೆಸ್ ಕಳೆದುಕೊಂಡಿದೆ.
31 ಸದಸ್ಯ ಬಲದ ಅಡ್ಯಾರ್ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯರ ನಿಧನದಿಂದ ಸಂಖ್ಯಾಬಲ 30 ಕ್ಕೆ ಇಳಿದಿತ್ತು. ಕಾಂಗ್ರೆಸ್ 13, ಎಸ್ ಡಿ ಪಿಐ 10, ಬಿಜೆಪಿ 6 ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಪೈಪೋಟಿ ಇತ್ತು. ಆದರೆ ಅದನ್ನು ಪರಿಹರಿಸಲು ಕಾಂಗ್ರೆಸ್ ನಾಯಕರು ವಿಫಲರಾದ ಕಾರಣ ಕಾಂಗ್ರೆಸ್ ಪಕ್ಷದ ಐವರು ಸದಸ್ಯರು ಬಂಡಾಯವೆದ್ದು ಎಸ್ ಡಿ ಪಿಐ ಬೆಂಬಲಿಸಿದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತಾಗಿದೆ. ಎಸ್ ಡಿ ಪಿಐ ಬೆಂಬಲಿತ ಅಭ್ಯರ್ಥಿ ಯಾಸೀನ್ ಅಧ್ಯಕ್ಷರಾದರೆ, ಖತೀಜಾ ಖುಬ್ರಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ರಫ್ ಕೇವಲ ಎಂಟು ಮತ ಪಡೆಯಲು ಶಕ್ತರಾಗಿದ್ದಾರೆ. ಅಡ್ಯಾರ್ ಗ್ರಾಮ ಪಂಚಾಯತ್ ನ ಘಟಾನುಘಟಿ ನಾಯಕರೇ ಎಸ್ ಡಿ ಪಿಐ ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್ ನೊಳಗಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಒಟ್ಟಾರೆ ಬಣ ರಾಜಕಾರಣಕ್ಕೆ ಅಡ್ಯಾರ್ ಗ್ರಾಮ ಪಂಚಾಯತ್ ಕಾಂಗ್ರೆಸ್ ಕೈ ತಪ್ಪಿದೆ.