ನಕಲಿ ಜಿಪಿಎ (ಪವರ್ ಆಫ್ ಅಟಾರ್ನಿ) ಮಾಡಿ ತನ್ನ ತಮ್ಮನಿಗೆ ಸೇರಿದ್ದ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡ ಬಗ್ಗೆ ಅಣ್ಣ ಅಹಮ್ಮದ್ ಮೊಹಿದ್ದೀನ್ ಬಾವಾ, ನ್ಯಾಯವಾದಿ ಸೇರಿ ಒಟ್ಟು ಐವರ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಅಹಮ್ಮದ್ ಮೊಹಿದ್ದೀನ್ ಬಾವಾ ಅವರ ತಮ್ಮ ಮಂಗಳೂರು ನಿವಾಸಿ ಜುಬೇರ್ ಅಹಮ್ಮದ್ ದೂರು ನೀಡಿದ್ದು, ನವೆಂಬರ್ 24 ರಂದು ದೂರುದಾರರು ಜಿಪಿಎ ಕೊಟ್ಟಿರುವ ರೀತಿ ನಕಲಿ ದಾಖಲೆ ತಯಾರಿಸಿ, 2023 ರ ಸೆಪ್ಟೆಂಬರ್ 21 ರಂದು ಮಂಗಳೂರಿನ ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾನಪತ್ರ ನೀಡಿದಂತೆ ದಾಖಲೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು ನಿವಾಸಿ ಅಹಮ್ಮದ್ ಮೊಹಿದ್ದೀನ್, ಲಾಲ್ ಬಹದೂರ್ ಶಾ ನಗರ ನಿವಾಸಿ ಸೀಮಾ ಗುರುರಾಜ್, ಕಡಂದಲೆ ನಿವಾಸಿ ಅಜಯ್ ಕುಮಾರ್, ನ್ಯಾಯವಾದಿ ಜಗನ್ನಾಥ, ಪ್ರದೀಪ್ ಹಾಗೂ ಕೃಷ್ಣಾಪುರ ನಿವಾಸಿಯಾಗಿದ್ದ ದಿವಂಗತ ಬಿ.ಎಂ ಮುಮ್ತಾಜ್ ಅಲಿ ಆರೋಪಿಗಳು.
ಈ ಬಗ್ಗೆ ಜಿಪಿಎ ನೀಡಿರುವುದನ್ನು ಗುರುತಿಸಿದ್ದ ಆರೋಪಿ ಬಿ.ಎಂ ಮುಮ್ತಾಜ್ ಅಲಿ ಈಗ ಮೃತಪಟ್ಟಿದ್ದಾರೆ. ಟ್ರೇಡಿಂಗ್ ವಹಿವಾಟು ನಡೆಸುತ್ತಿದ್ದ ದೂರುದಾರರು ಮಂಗಳೂರಿನಲ್ಲಿ ವಾಸಿಸುತ್ತಿದ್ದು ಉಡುಪಿ ಕಡೆಗೆ ಹೋಗುವಾಗ ಮುಕ್ಕ ಬಳಿ ಇರುವ ತನ್ನ ಜಾಗ ನೋಡಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಉಡುಪಿಗೆ ಹೋಗುವಾಗ ತನ್ನ ಜಾಗದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನು ನೋಡಿ ದಂಗಾಗಿದ್ದು , ಹತ್ತಿರ ಹೋಗಿ ವಿಚಾರಿಸಿದಾಗ ಹೆಚ್ಚಿನ ವಿಚಾರ ತಿಳಿಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
