ಕ್ರಿಮಿನಲ್‌ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅನುಮೋದನೆ ಇಲ್ಲದ ಹೊರತು ತನಿಖಾಧಿಕಾರಿಗಳು ವಕೀಲರಿಗೆ ಸಮನ್ಸ್‌ ನೀಡುವಂತಿಲ್ಲ: ಸುಪ್ರೀಂ ಕೋರ್ಟ್‌

ರಾಷ್ಟ್ರೀಯ

ಕ್ರಿಮಿನಲ್‌ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅನುಮೋದನೆ ಇಲ್ಲದ ಹೊರತು ತನಿಖಾಧಿಕಾರಿಗಳು ವಕೀಲರಿಗೆ ಸಮನ್ಸ್‌ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ತನ್ನ ಕಕ್ಷಿದಾರರಿಗೆ ಕಾನೂನು ಸಲಹೆ ನೀಡುವ ವಕೀಲರಿಗೆ ತನಿಖಾ ಸಂಸ್ಥೆಗಳು ಮನಸ್ಸಿಗೆ ತೋಚಿದಂತೆ ಸಮನ್ಸ್‌ ನೀಡುವುದಕ್ಕೆ ಕಡಿವಾಣ ಹಾಕುವುದಕ್ಕಾಗಿ ಸುಪ್ರೀಂ ಕೋರ್ಟ್‌, ಹಲವು ನಿರ್ದೇಶನಗಳನ್ನೂ ನೀಡಿದೆ.

ಪ್ರಕರಣವೊಂದರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಪ್ರತಾಪ್‌ ವೇಣುಗೋಪಾಲ್‌ ಅವರಿಗೆ ನೀಡಿದ್ದ ಸಮನ್ಸ್‌ಗಳನ್ನು ರದ್ದುಪಡಿಸಿ ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್‌ ಈ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ವಕೀಲರು ಹಾಗೂ ಕಕ್ಷಿದಾರರ ಹಕ್ಕಗಳ ರಕ್ಷಣೆಗೆ ಸಂಬಂಧಿಸಿ ಮಹತ್ವದ ಕ್ರಮ ಎಂದು ವಿಶ್ಲೇಷಿಸಲಾಗುತ್ತಿದೆ.

ಹಣ ಅಕ್ರಮ ವರ್ಗಾವಣೆ ಕುರಿತು ನಡೆಸುತ್ತಿರುವ ತನಿಖೆ ಭಾಗವಾಗಿ ಜಾರಿ ನಿರ್ದೆಶನಾಲಯವು ದಾತಾರ್‌ ಹಾಗೂ ಪ್ರತಾಪ್‌ ವೇಣುಗೋಪಾಲ್‌ ಅವರಿಗೆ ಸಮನ್ಸ್‌ ನೀಡಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರನ್ ಹಾಗೂ ಎನ್‌.ವಿ.ಅಂಜಾರಿಯಾ ಅವರು ಇದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿತ್ತು. ಆಗಸ್ಟ್‌ 12ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಪೀಠ ಪ್ರಕಟಿಸಿದೆ.

ದಾತಾರ್‌ ಹಾಗೂ ಪ್ರತಾಪ್ ಅವರಿಗೆ ಸಮನ್ಸ್‌ ನೀಡಿದ ಇ.ಡಿ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸುವ ವಕೀಲರ ಸಂಘದಿಂದ (ಎಸ್‌ಸಿಎಒಆರ್‌ಎ) ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದು ವಿವಾದದ ಸ್ವರೂಪ ಪಡೆದ ನಂತರ, ತನ್ನ ಅಧಿಕಾರಿಗಳಿಗೆ ಕೆಲ ನಿರ್ದೇಶನಗಳನ್ನು ನೀಡಿ ಜಾರಿ ನಿರ್ದೇಶನಾಲಯ ಜೂನ್‌ 20ರಂದು ಸುತ್ತೋಲೆ ಹೊರಡಿಸಿತ್ತು. ಇ.ಡಿ ನಿರ್ದೇಶಕರಿಂದ ಪೂರ್ವಾನುಮತಿ ಮತ್ತು ಬಿಎಸ್‌ಎ ಸೆಕ್ಷನ್‌ 132ಕ್ಕೆ ಅನುಗುಣವಾಗಿ ಇಲ್ಲದ ಹೊರತು, ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ವಕೀಲರಿಗೆ ಸಮನ್ಸ್‌ ನೀಡದಂತೆ ತನ್ನ ಅಧಿಕಾರಿಗಳಿಗೆ ಸೂಚಿಸಿತ್ತು.