ಕೆಟ್ಟ ಮೇಲೆ ಬುದ್ಧಿ ಬರುವ ಕಾಂಗ್ರೆಸ್ಸಿನ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.
ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಬಿರುಸಿನ ರಾಜಕಾರಣ ತೆರೆಮರೆಯಲ್ಲಿ ನಡೆಯುತ್ತಿರುವುದಂತೂ ಸುಳ್ಳಲ್ಲ. ಅದರಲ್ಲೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಭರ್ಜರಿಯಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡ, ಉಡುಪಿ ರಾಜಕಾರಣದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ರಾಜಕಾರಣದ ಬಗ್ಗೆ ಹೆಚ್ಚು ಗಂಭೀರ ಚಿಂತನೆಯಲ್ಲಿ ತೊಡಗಿಸಿಕೊಂಡಂತೆ ಕಾಣುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿನಲ್ಲಿ ಬಿಜೆಪಿಯ ಅಶೋಕ್ ರೈಯನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡು ಟಿಕೆಟ್ ಕೊಟ್ಟು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮಂಗಳೂರು ಉತ್ತರದಲ್ಲಿ ಉದ್ಯಮಿ ಇನಾಯತ್ ಆಲಿಯವರಿಗೆ ಕೊನೆಕ್ಷಣದಲ್ಲಿ ಟಿಕೆಟ್ ನೀಡಲಾಯಿತಾದರೂ, ಸ್ವ ಪಕ್ಷದ ಕೆಲವರ ಷಡ್ಯಂತರದಿಂದ ಗೆಲ್ಲುವಲ್ಲಿ ವಿಫಲರಾಗಿದ್ದರು.
ಮಂಗಳೂರು ಉತ್ತರ (ಸುರತ್ಕಲ್) ವಿಧಾನಸಭಾ ಕ್ಷೇತ್ರ ಬಂಟರೇ ಆಳಿದ್ದು ಬಹುಪಾಲು. ವಿಜಯ್‍ಕುಮಾರ್ ಶೆಟ್ಟಿ, ರಮಾನಾಥ ರೈ (ಗುರುಪುರ ಬ್ಲಾಕ್ ಬಂಟ್ವಾಳಕ್ಕೆ ಸೇರಿತ್ತು), ಇದೀಗ ಭರತ್ ಶೆಟ್ಟಿ ಹೀಗೆ ಬಂಟರದ್ದೇ ಅಧಿಪತ್ಯ. ಈ ನಡುವೆ ಮೊಹಿದ್ದೀನ್ ಬಾವಾ ಮಂಗಳೂರು ಉತ್ತರದಲ್ಲಿ ಶಾಸಕರಾಗಿದ್ದರು. ಶಾಸಕರಾಗಿ ಕೆಲವು ಎಡವಟ್ಟಿನಿಂದ ಸೋತಿದ್ದರು. ಕಳೆದ ಬಾರಿ ಮೊಹಿದ್ದೀನ್ ಬಾವಾ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಉದ್ಯಮಿ ಇನಾಯತ್ ಆಲಿ ಪಾಲಾಗಿತ್ತು. ಸಮಯವಕಾಶ ಸಿಗದೆ ಇನಾಯತ್ ಆಲಿ ಕೂಡಾ ಮುಗ್ಗರಿಸಿದ್ದರು. ಮುಂದಾಲೋಚನೆ ಇಲ್ಲದ ಬಾವಾ ಎಡವಿ ಮೂಲೆಗುಂಪಾದರು. ಇದೀಗ ರಾಜಕೀಯಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ.

ಗೋಲ್ಡ್ ಪಿಂಚ್
ಶೆಟ್ರು ಕೈ ಪಾಲು.!
ಉದ್ಯಮ ರಂಗದಲ್ಲಿ ತನ್ನದೇ ಆದ ಹೆಸರು ಮಾಡಿಕೊಂಡಿರುವ ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಕಾಂಗ್ರೆಸ್ ಪಡಸಾಲೆಗೆ ಹಾರುತ್ತಾರೆ ಅನ್ನುವ ಗುಸುಗುಸು ಸುದ್ಧಿ ಕೇಳಿಬರತೊಡಗಿದೆ. ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಅವರಿಗೆ ಬಿಜೆಪಿಯ ಉನ್ನತ ನಾಯಕರೊಂದಿಗೆ ಅವಿನಾಭಾವ ಸಂಬಂಧವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಬಿಜೆಪಿಯ ಕಾರ್ಯಕ್ರಮಗಳು ಶೆಟ್ಟರ ಆಧೀನದ ಗೋಲ್ಡ್ ಫಿಂಚ್ ಮೈದಾನದಲ್ಲೇ ನಡೆಯುತ್ತದೆ. ಬಿಜೆಪಿಯಿಂದ ರಾಜ್ಯಸಭೆ ಅಥವಾ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಾರೆ ಅನ್ನುವ ಸುದ್ದಿ ಇದ್ದರೂ ಗೋಲ್ಡ್ ಪಿಂಚ್ ಶೆಟ್ಟರಿಗೆ ಆ ಅವಕಾಶ ಒದಗಿ ಬರಲಿಲ್ಲ. ಬಿಜೆಪಿಯ ಈಗಿನ ಸಂಸದರೂ ಶೆಟ್ಟರ ಪಟ್ಟಾ ಶಿಷ್ಯ ಕೂಡಾ ಹೌದು.
ಒಂದು ಮೂಲದ ಪ್ರಕಾರ ಪುತ್ತೂರು ಶಾಸಕ ಅಶೋಕ್ ರೈ ಮಧ್ಯಸ್ಥಿಕೆಯಲ್ಲಿ ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಹಲವು ಬಾರಿ ಭೇಟಿ ಆಗಿದ್ದಾರಂತೆ. ಪ್ರಕಾಶ್ ಶೆಟ್ಟಿ ಅವರನ್ನು ಕಾಂಗ್ರೆಸ್ಸಿಗೆ ಕರೆತರುವ ಫ್ಲ್ಯಾನ್ ನಡೆಯುತ್ತಿದೆಯಂತೆ. ಮುಂದಿನ ಚುನಾವಣೆಯಲ್ಲಿ ಪ್ರಕಾಶ್ ಶೆಟ್ಟಿ ಅವರನ್ನು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಆಖಾಡಕ್ಕೆ ಇಳಿಸಲು ತಯಾರಿ ನಡೆಸಲಾಗುತ್ತಿದೆ ಅನ್ನುವ ಗುಸು, ಗುಸು ಕೇಳಿ ಬರುತ್ತಿದೆ.
ಬಂಟ ಯುವ ನಾಯಕನ ಎಂಟ್ರಿ
ಸಂಸತ್ ಚುನಾವಣೆಯಲ್ಲಿ, ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಸೋತು ಸುಸ್ತಾದ ಯುವನಾಯಕ, ಪಿಲಿನಲಿಕೆ ಕಾರ್ಯಕ್ರಮ ಮೂಲಕ ತಮ್ಮ ಹವಾ ಮೆಂಟೈನ್ ಮಾಡುತ್ತಿದ್ದಾರೆ. ಮುಂದೆ ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಗೆಲುವು ಕಷ್ಟ ಅರಿತ ಇವರು ಮಂಗಳೂರು ಉತ್ತರದತ್ತ ದೃಷ್ಟಿ ಹಾಯಿಸಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಡಿಕೆಶಿ ಗೋಲ್ಡ್ ಪಿಂಚ್ ಪ್ರಕಾಶ್ ಶೆಟ್ಟರನ್ನು ಕಾಂಗ್ರೆಸ್ಸಿಗೆ ಕರೆ ತಂದು ಮಂಗಳೂರು ಉತ್ತರದಲ್ಲಿ ಅಭ್ಯರ್ಥಿ ಮಾಡುವ ಪಕ್ಕಾ ಫ್ಲ್ಯಾನ್ ರೂಪಿಸುತ್ತಿದ್ದಾರೆ ಅನ್ನುವ ಸುದ್ಧಿ ಸಿಕ್ಕಿದೊಡನೆ ಮಂಗಳೂರು ಉತ್ತರ ಬಂಟರ ಪಾಲಾಗುವುದು ಖಚಿತ ಅಂದುಕೊಂಡು ಉತ್ತರದತ್ತ ಚಿತ್ತ ಹಾಯಿಸಿದ್ದಾರೆ. ಈಗಾಗಲೇ ಮಂಗಳೂರು ಉತ್ತರದಲ್ಲಿ ಬಂಟರ ಹುಡುಗರನ್ನು ಆಯಕಟ್ಟಿನ ಸ್ಥಾನದಲ್ಲಿ ಕೂರಿಸಲಾಗುತ್ತಿದೆ. ರಾಜೀವ್‍ಗಾಂಧಿ ವಿಶ್ವವಿದ್ಯಾನಿಲಯ ಆರೋಗ್ಯ ಸಿಂಡಿಕೇಟ್ ಸದಸ್ಯರಾಗಿ ಮಂಗಳೂರು ಉತ್ತರದ ಬಂಟರೊಬ್ಬರನ್ನು ನೇಮಕ ಮಾಡಿರುವ ಹಿಂದೆ ಯುವನಾಯಕನ ರಾಜಕೀಯ ಚಾಣಾಕ್ಷತೆ ಅಡಗಿದೆ ಎಂದು ಕಾಂಗ್ರೆಸಿಗರ ಬಾಯಲ್ಲಿ ಬಯಲಾಗುತ್ತಿದೆ.

ಸುರತ್ಕಲ್ ವಲಯದ ಬಂಟ ಯುವ ಕಾಂಗ್ರೆಸ್ ಮುಖಂಡನೊಬ್ಬ ಇದೀಗ ಬಂಟ ಯುವನಾಯಕನ ಬಣದಲ್ಲಿ ಹೆಚ್ಚಾಗಿ ಗುರುತಿಸಿಕೊಂಡು ಸಕ್ರೀಯರಾಗುತ್ತಿದ್ದಾರಂತೆ.! ಬಂಟರ ಹುಡುಗರು ಒಂದೊಂದು ಸಂಘ ಸಂಸ್ಥೆಯನ್ನು ಕಟ್ಟಿ ಪ್ರಚಾರದ ಹಿಂದೆ ತೆರಳುತ್ತಿದ್ದಾರೆ. ಮುಂದೆ ಅಗತ್ಯ ಬಂದಾಗ ಲಾಭವಾಗಬಹುದು ಅನ್ನುವುದು ಯುವ ನಾಯಕನೊಬ್ಬನ ಟೀಮಿನ ಲೆಕ್ಕಾಚಾರ. ರಾಜಕಾರಣದಲ್ಲಿ ಎಲ್ಲವೂ ಪರಿಶುದ್ಧ ಎಂದೇ ತಿಳಿದುಕೊಂಡಿರುವ ಉಧ್ಯಮಿ ಕಂ ರಾಜಕೀಯದ ಲೀಡರಿಗೆ ತನ್ನ ಆಪ್ತರಿಂದಲೇ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಅರಿವು ಇದ್ದಂತ್ತಿಲ್ಲ. ಉತ್ತರದಲ್ಲಿ ರಾಜಕೀಯದ ನಿಗೂಢ ತಂತ್ರಗಾರಿಕೆ ನಡೆಯುತ್ತಿದೆ. ಒಂದಂತೂ ಸತ್ಯ. ಬ್ಯಾರಿ ಮತದಾರರು ಸೆಟೆದು ನಿಂತರೆ ಎಲ್ಲರ ಲೆಕ್ಕಾಚಾರ ಉಲ್ಟ ಹೊಡೆಯುವುದಂತು ಗ್ಯಾರಂಟಿ!
ಮುಸ್ಲಿಂ ನಾಯಕರಿಗೆ ಅನ್ಯಾಯವೇ?
ಮಂಗಳೂರು ಉತ್ತರದಲ್ಲಿ ಪಕ್ಷ ಸಂಘಟನೆಗೆ ರಾತ್ರಿ ಹಗಲೆನ್ನದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಮುಸ್ಲಿಂ ಯುವನಾಯಕ. ಹಲವಾರು ಕಾರ್ಯಕ್ರಮ ಆಯೋಜಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ. ಈ ಮಧ್ಯೆ ಮಂಗಳೂರು ಉತ್ತರದಲ್ಲಿ ಮುಸ್ಲಿಂ ಯುವ ನಾಯಕನ ಬದಲು ಬಂಟ ಸಮುದಾಯದವರನ್ನು ಕರೆದುಕೊಂಡು ಬಂದು ಕಾಂಗ್ರೆಸ್ಸಿನಲ್ಲಿ ಟಿಕೆಟ್ ಕೊಡಲಾಗುತ್ತಿದೆ ಅನ್ನುವ ಸುದ್ಧಿ ಹರಿದಾಡುತ್ತಿದೆ. ಖುದ್ದು ಡಿಕೆಶಿಯೇ ಮುಂದಾಳತ್ವ ವಹಿಸಿರುವುದಾಗಿ ತಿಳಿದುಬಂದಿದೆ. ಇದು ಮುಸ್ಲಿಂ ಸಮುದಾಯಕ್ಕೆ ಮಾಡುವ ದೊಡ್ಡ ದ್ರೋಹವಾಗಿದೆ. ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಮುಸ್ಲಿಂ ನಾಯಕನನ್ನು ಬದಲಾಯಿಸಿ ಬಂಟರಿಗೆ ಟಿಕೆಟ್ ನೀಡಿದರೆ ಮುಸ್ಲಿಂ ಸಮುದಾಯ ಆಕ್ರೋಶಗೊಳ್ಳುವುದಂತೂ ಖಂಡಿತ. ಕೆಟ್ಟ ಮೇಲೆ ಬುದ್ಧಿ ಬರುವ ಕಾಂಗ್ರೆಸ್ಸಿನ ನಾಯಕರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಿದೆ.
