ಹುಬ್ಬಳ್ಳಿ: ಇಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ರಾಜ್ಯ

ಕೇರಳ ಮೂಲದ ಚಿನ್ನಾಭರಣದ ವ್ಯಾಪಾರಿಗಳೇ ದರೋಡೆಕೋರರ ಟಾರ್ಗೆಟ್

ಇಡಿ ಅಧಿಕಾರಿಗಳ ಸೋಗಿನಲ್ಲಿ ಮೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಇಡಿ ಅಧಿಕಾರಿಗಳು ಎಂದು ಹೇಳಿಕೊಂಡ ಐವರ ತಂಡ, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯನ್ನು ವಿಚಾರಣೆ ನಡೆಸುವ ನೆಪದಲ್ಲಿ, 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ ರೂ.2 ಲಕ್ಷ ನಗದು ದೋಚಿದ ಘಟನೆ ಕಳೆದ ಗುರುವಾರ ನಡೆದಿದೆ.

ವ್ಯಾಪಾರಿ ಸುದೀನ್ ಎಂ.ಆರ್ ಅವರು ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಿದ್ದರು. ನ. 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ ಅವರ ಜತೆ ಬರುವಾಗ ಚೈನ್‌, ಬ್ರೆಸ್ಲೆಟ್‌, ಉಂಗುರ, ಕಿವಿಯೋಲೆ, ನೆಕ್ಲೆಸ್‌, ಲಾಕೆಟ್‌, ಬಳೆ ಸೇರಿ ಒಟ್ಟು 3.2 ಕೋಟಿ ಮೌಲ್ಯದ ಆಭರಣಗಳನ್ನು ತಂದಿದ್ದರು. ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿರುವ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ, ಆರ್ಡರ್‌ಗಳನ್ನು ಪಡೆದಿದ್ದರು. ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು.

ನ. 19ರಂದು ಧಾರವಾಡಕ್ಕೆ ಹೋಗಿ ಹೋಟೆಲ್‌ಗೆ ವಾಪಸ್‌ ಬರುವಾಗ ನೀಲಿಜಿನ್‌ ರಸ್ತೆಯಲ್ಲಿ ಅವರನ್ನು ತಡೆದ ಐದು ಮಂದಿಯ ತಂಡ, ಇಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿ, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದೆ. ಆ ವೇಳೆ ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಸುದೀನ್‌ ಅವರನ್ನು ಬೆದರಿಸಿ, ಅವರ ಮೊಬೈಲ್‌ ಫೋನ್‌ ಪಡೆದು ಸಿಮ್‌ ತೆಗೆದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್‌ ಕಿತ್ತುಕೊಂಡಿದ್ದಾರೆ.

ಆರೋಪಿಗಳು ದಾರಿಮದ್ಯೆ ಕೆಲಸಗಾರ ವಿವೇಕ ಅವರನ್ನು ಇಳಿಸಿದ್ದಾರೆ. ನಂತರ, ಸುದೀನ ಅವರನ್ನು ಕರೆದೊಯ್ದು ಮಾರ್ಗ ಮಧ್ಯೆ ಬಿಟ್ಟು ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ಧಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಇಂತಹ ಹಲವಾರು ಪ್ರಕರಣಗಳು ನಡೆದಿದೆ. ಬೆಂಗಳೂರಲ್ಲಿ ನಡೆದ ಏಳು ಕೋಟಿಗೂ ಅಧಿಕ ಮೊತ್ತದ ದರೋಡೆ ಪ್ರಕರಣ, ಮೈಸೂರಿನ ಚಾಮರಾಜನಗರದ ಬಂಡಿಪುರ ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ, ಚಿನ್ನದ ವ್ಯಾಪಾರಿಯಿಂದ ಕೊಟ್ಯಾಂತರ ರೂಪಾಯಿಯ ನಗನಾಣ್ಯಗಳನ್ನು ದೋಚಿದ ಪ್ರಕರಣ ದಾಖಲಾಗಿದೆ. ಮಂಗಳೂರಿನ ಗ್ಯಾಂಗೊಂದು ಅಂಕೋಲಾ ಬಳಿ ಇತ್ತೀಚೆಗೆ ಕೊಟ್ಯಾಂತರ ರೂಪಾಯಿ ದೋಚಿ ಕೊನೆಗೆ ಜೈಲು ಪಾಲಾದ ಘಟನೆ ನಡೆದಿರುತ್ತದೆ. ತಲಪಾಡಿ- ಕೇರಳದ ಗಡಿಭಾಗದಲ್ಲೂ ಇಂತಹ ಹಲವು ಪ್ರಕರಣಗಳು ನಡೆದಿದೆ. ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಾಟ ಮಾಡುವವರನ್ನು ಗುರಿಯಾಗಿಸಿ, ಗಡಿಭಾಗದ ಹಲವು ರೌಡಿ ತಂಡಗಳು ಅವರನ್ನು ಅಪಹರಿಸಿ ಚಿನ್ನವನ್ನು ಲೂಟಿಗೈದಿರುತ್ತಾರೆ. ಆದರೆ ಕಳ್ಳ ಸಾಗಾಟಗಾರರು ಈ ಬಗ್ಗೆ ದೂರು ನೀಡದಿರುವುದೇ ಈ ಭಾಗದ ಕೆಲವು ರೌಡಿಗಳಿಗೆ, ದರೋಡೆಕೋರರಿಗೆ ವರವಾಗಿದೆ ಪರಿಣಮಿಸಿದೆ.