ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ ವಾಹನ ಕಳವು ಪ್ರಕರಣ: ಕೇರಳ ಮೂಲದ ಇಬ್ಬರು ಅಂತ‌ರಾಜ್ಯ ಕದೀಮರನ್ನು ಬಂಧಿಸಿದ ಮಂಗಳೂರು ಪೊಲೀಸರು

ಕರಾವಳಿ

ಮಂಗಳೂರಿನ ನಾಗುರಿ, ಜಪ್ಪಿನಮೊಗರು ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಅಂತ‌ರಾಜ್ಯ ಕದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ವೆಲ್ಲಾಡ್‌ ಅಲೆಕ್ಸ್‌ ಡೊಮಿನಿಕ್‌, ಕೋಯಿಕೋಡ್ ಕುರಚೂರು ನಿವಾಸಿ ಅಮಲ್‌ ಕೃಷ್ಣ ಬಂಧಿತ ಆರೋಪಿಗಳು.

ನವಂಬರ್ 14ರಂದು ಆರೋಪಿಗಳು ಸ್ನೇಹಿತರನ್ನು ಭೇಟಿ ಮಾಡಲು ಮಂಗಳೂರಿಗೆ ಬಂದು ನಗರದ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಸುತ್ತಾಡಿದ್ದಾರೆ. ಬಳಿಕ ನಾಗುರಿಯ ಬಸ್‌ ತಂಗುದಾಣ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್‌ ಹಾಗೂ ಜೆಪ್ಪಿನಮೊಗರು ಆದಿಮಾಯೆ ದೇವಸ್ಥಾನ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್‌ ಕೀ ಇಲ್ಲದೆ ‘ಡೈರೆಕ್ಟ್ ಕನೆಕ್ಟ್’ ಮಾಡಿ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳ ಗುರುತು ಪತ್ತೆಯಾಗಿತ್ತು. ನ.30ರಂದು ಮತ್ತೆ ಮಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಎರಡು ಸ್ಕೂಟರ್‌ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಎರಡು ಮೊಬೈಲ್‌ ಫೋನ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 1 ಲಕ್ಷದ 23 ಸಾವಿರ ರೂ. ಎಂದು ಅಂದಾಜಿಸಲಾಗಿದೆ.