ಪುತ್ತೂರು ತಾಲೂಕಿನ ಕಬಕ, ಮುರ ಎಂಬಲ್ಲಿರುವ ರೈಲ್ವೇ ಬ್ರಿಡ್ಜ್ ಬಳಿ, ವ್ಯಕ್ತಿಯೋರ್ವ ಮಾದಕವಸ್ತುವನ್ನಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಅಂಜನೇಯ ರೆಡ್ಡಿಯವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಆರೋಪಿತನನ್ನು ಹಿಡಿದು ವಿಚಾರಣೆ ನಡೆಸಿದಾಗ, ಆತನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ ಎಂಬುದಾಗಿ ತಿಳಿದುಬಂದಿದ್ದು, ಆತನನ್ನು ವಿಚಾರಣೆ ನಡೆಸಿ, ತಪಾಸಣೆಗೊಳಪಡಿಸಿದಾಗ ಆರೋಪಿಯು ಮಾರಾಟ ಮಾಡಲು ಅಕ್ರಮವಾಗಿ ಇಟ್ಟುಕೊಂಡಿದ್ದ 10 ಗ್ರಾಂ MDMA ಎಂಬ ನಿಷೇಧಿತ ಮಾದಕವಸ್ತು ಪತ್ತೆಯಾಗಿರುತ್ತದೆ.
ಆರೋಪಿಯನ್ನು ಹಾಗೂ ಆತನ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂಖ್ಯೆ 119/2025, NDPS ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ. ಆರೋಪಿಯ ಪ್ರಾಥಮಿಕ ವಿಚಾರಣೆ ವೇಳೆ, ಈತನ ವಿರುದ್ಧ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಆರು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
