ಲೋಕಲ್ ಫೈಟಿಂಗ್ ನಲ್ಲಿ SDPI ಮಿಂಚಿಂಗ್.! ಈ ಪಲಿತಾಂಶ ಜಿಲ್ಲೆಯ ಕಾಂಗ್ರೆಸಿಗೊಂದು ಎಚ್ಚರಿಕೆ
ಬಹು ನಿರೀಕ್ಷಿತ ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ರಿಸಲ್ಟ್ ಕೊನೆಗೂ ಹೊರಬಿದ್ದಿದೆ. ಎರಡೂ ಪಟ್ಟಣ ಪಂಚಾಯತ್ ಬಿಜೆಪಿ ವಶವಾಗಿದೆ. ಕಾಂಗ್ರೆಸ್ ಗಟ್ಟಿ ಧ್ವನಿ, ನ್ಯಾಯದ ಪರ ಧ್ವನಿ ಎತ್ತುತ್ತಿದ್ದ ಸಿರಾಜ್ ಬಜಪೆ ಗೋಪಲ್ಕೆ ವಾರ್ಡ್ ನಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಕಾಂಗ್ರೆಸ್ ನಾಯಕರ ಬೆವರಿಳಿಸಿದ್ದಾರೆ. ಕಾಂಗ್ರೆಸ್ ಸ್ವಾರ್ಥ ನಾಯಕರ, ಬಕೆಟ್ ವೀರರಿಗೆ ಬಲಿಪಶುವಾಗಿದ್ದ ಸಿರಾಜ್ ಬಜಪೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. ಇದು ನಾಗರಿಕ ಸಮಾಜದ ಗೆಲುವು.
ಸಿರಾಜ್ ಸೋಲಿಸಲು ಕಾಂಗ್ರೆಸ್ ಘಟಾನುಘಟಿ ನಾಯಕರು ಕೊನೆಯವರೆಗೂ ಭರ್ಜರಿ ಕ್ಯಾಂಪೈನ್ ನಡೆಸಿದ್ದರು. ಮಾಜಿ ಸಚಿವ, ಡಿಕೆಶಿ ಬಂಟ ಸೇರಿದಂತೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರೆಲ್ಲ ಬಜಪೆಯಲ್ಲೆ ಬೀಡುಬಿಟ್ಟಿದ್ದರು. ಆದರೆ ಸ್ಥಳೀಯ ಮತದಾರರು ಸಿರಾಜ್ ಅವರ ಕೈ ಬಲಪಡಿಸಿದರು. ವಿಜಯಿಯಾದರು.
ಸಿರಾಜ್ ಬಂಡಾಯ ಸ್ಪರ್ಧೆಯಿಂದ ಬಜಪೆ ಪಟ್ಟಣ ಪಂಚಾಯತ್ ಜಿಲ್ಲೆಯಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಅಲ್ಪಸಂಖ್ಯಾತರ ಪರ ಧ್ವನಿಯಾಗುತ್ತಿದ್ದರು. ಅನ್ಯಾಯವಾದರೆ ಪಕ್ಷದ ನಾಯಕರ ವಿರುದ್ಧ ಕೈ ಕಟ್ಟಿ ನಿಲ್ಲದೆ ಸಮಸ್ಯೆಯ ಬಗ್ಗೆ ಮುಲಾಜಿಲ್ಲದೆ ಪ್ರಶ್ನಿಸುತ್ತಿದ್ದರು. ಇದೇ ಅವರಿಗೆ ಕಾಂಗ್ರೆಸ್ ನಲ್ಲಿ ಮುಳುವಾಗಿತ್ತು. ಆದರೆ ಕ್ಷೇತ್ರದ ಸರ್ವಧರ್ಮೀಯ ಮತದಾರರು ಸಿರಾಜ್ ಅವರ ಕೈ ಹಿಡಿದಿದ್ದಾರೆ.
ಬಜಪೆ ಪಟ್ಟಣ ಪಂಚಾಯತ್ ಕಾಂಗ್ರೆಸ್ ನೊಳಗಿನ ಮುಸುಕಿನ ಗುದ್ದಾಟದಿಂದ ದೊಡ್ಡ ಸುದ್ದಿಯಾಗಿತ್ತು. ನಾಯಕರು ಸ್ಥಳೀಯವಾಗಿ ಜನಪರ, ಗೆಲ್ಲುವ ಅಭ್ಯರ್ಥಿಗಳನ್ನು ಮೂಲೆಗೆ ಸರಿಸಿ ನಾಯಕರ ಹಿಂದೆ ಮುಂದೆ ಸುತ್ತಾಡುವವರ ಮಾತು ಕೇಳಿ ಯಾರ್ಯಾರಿಗೋ ಟಿಕೆಟ್ ಕೊಟ್ಟ ಪರಿಣಾಮ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಎಲ್ಲೆಲ್ಲಿಂದಲೋ ನಾಯಕರು ಬಂದು ರೌಂಡ್ಸ್ ಹೊಡೆದ ಮಾತ್ರಕ್ಕೆ ಜನ ಓಟು ಹಾಕುವುದಿಲ್ಲ. ಸ್ಥಳೀಯವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಮರೆತು ತಮ್ಮ ಸ್ವಾರ್ಥ ಸಾಧನೆಗಾಗಿ ಇಳಿದ ಪರಿಣಾಮ ಕಾಂಗ್ರೆಸ್ ಮಣ್ಣು ಮುಕ್ಕಿದೆ. ಒಂದು ವೇಳೆ ಬಜಪೆಯಲ್ಲಿ ಸಿರಾಜ್ ಗೆ ನೇತೃತ್ವ ಕೊಟ್ಟಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಐದಾರು ಸೀಟು ಹೆಚ್ಚು ಲಾಭವಾಗುತ್ತಿತ್ತು. ಅಧಿಕಾರಕ್ಕೆ ಏರುತ್ತಿತ್ತು. ಯಾರ್ಯಾರನ್ನೋ ರಾಜಕೀಯವಾಗಿ ಮುಗಿಸಲು ಸಂಚು ಹೂಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ.
ಇನ್ನು ಕಿನ್ನಿಗೋಳಿಯಲ್ಲಿ ಕೂಡ ಕಮಲ ಅರಳಿದೆ. ಹೊಸದಾಗಿ ರಚನೆಗೊಂಡ ಎರಡು ಪಟ್ಟಣ ಪಂಚಾಯತ್ ಬಿಜೆಪಿ ವಶವಾಗಿದೆ. ಕಾಂಗ್ರೆಸ್ ಯುವ ನಾಯಕನಿಗೆ ಮುಖಭಂಗವಾಗಿದೆ. ಮುಂದಿನ ಮೂಡಬಿದ್ರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಡುಕುವ ಕೆಲಸ ಮಾಡಬೇಕಿದೆ.
ಇನ್ನು ಬಜ್ಪೆ ಪಟ್ಟಣ ಪಂಚಾಯತ್ ನಲ್ಲಿ ಎಸ್ ಡಿ ಪಿ ಐ ಪಕ್ಷ ಮಿಂಚಿದೆ. ಕಾಂಗ್ರೆಸ್ ಪಕ್ಷಕ್ಕೆ ಸಮಾನ ಠಕ್ಕರ್ ನೀಡಿದೆ. ಶಾಂತಿಗುಡ್ಡೆಯಲ್ಲಿ ಒಂದು ಮತ, ಇನ್ನೆರಡು ಕಡೆ ಬೆರಳೆಣಿಕೆಯ ಮತಗಳಿಂದ ಸೋತಿದೆ. ಇಲ್ಲದಿದ್ದರೆ ಎಸ್ ಡಿ ಪಿ ಐ ಆರು ಸ್ಥಾನ ಪಡೆಯುತ್ತಿತ್ತು. ಮುಸ್ಲಿಂ ಸಮುದಾಯ ಪ್ರಬಲವಾಗಿರುವ ಕಡೆ ಎಸ್ ಡಿ ಪಿ ಐ ಬಲಿಷ್ಠವಾಗಿ ಬೆಳೆಯುತ್ತಿದೆ. ಇದಕ್ಕೆ ಬಜಪೆ ಪಟ್ಟಣ ಪಂಚಾಯತ್ ರಿಸಲ್ಟ್ ಪ್ರತ್ಯಕ್ಷ ಸಾಕ್ಷಿ. ಮುಂದಕ್ಕೆ ಉತ್ತರ ಕ್ಷೇತ್ರದ ನಾಯಕರು ಈ ರಿಸಲ್ಟನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಇದೇ ಪರಿಸ್ಥಿತಿ ಉತ್ತರಕ್ಕೂ ತಪ್ಪಿದ್ದಲ್ಲ.
