ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಾಯಕರು ಮಧ್ಯ ಪ್ರವೇಶಿಸುವಂತೆ ಮಾಡಲು ಡಿ.ಕೆ. ಶಿವಕುಮಾರ್ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ರಾಷ್ರೀಯ ಮಟ್ಟದ ನಾಯಕರು ಡಿ.ಕೆ. ಶಿವಕುಮಾರ್ ಅವರ ಭೇಟಿಗೆ ಸಮಯವನ್ನು ನೀಡದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಮತ್ತು ಹೈಕಮಾಂಡ್ ನಾಯಕರ ನಡೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಬೇಸರಗೊಂಡಂತೆ ಕಾಣುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ತಮಗೆ ಉಪ ಮುಖ್ಯಮಂತ್ರಿ ಹುದ್ದೆಗಿಂತಲೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುವುದರಲ್ಲೇ ಹೆಚ್ಚು ಖುಷಿ ಇದೆ ಎಂದು ಹೇಳುವ ಮೂಲಕ, ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ, ಸ್ಪಷ್ಟವಾಗಿ ಹೈಕಮಾಂಡ್ಗೆ ರವಾನಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಶಿವಕುಮಾರ್ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮೇಲ್ನೋಟಕ್ಕೆ ಹೈಕಮಾಂಡ್ ವಿರುದ್ಧ ಯಾವುದೇ ಬಹಿರಂಗ ಬಂಡಾಯ ಸಾರದೆ, ತಮ್ಮ ಎಂದಿನ ಶೈಲಿಯಲ್ಲಿಯೇ ಮಾರ್ಮಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ತಮಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಹೇಳುತ್ತಲೇ, ಒಳಗೆ ಕುದಿಯುತ್ತಿರುವ ಅಸಮಾಧಾನವನ್ನು ಹೊರಗೆಡಹಿದ್ದಾರೆ. ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಡಿಕೆಶಿ, ನನಗೆ ಐದು ವರ್ಷವೂ ಉಪಮುಖ್ಯಮಂತ್ರಿಯಾಗಿರಬೇಕು ಎಂಬ ಹಂಬಲವೇನೂ ಇಲ್ಲ. 1980ರಿಂದಲೂ ನಾನು ಈ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಅದುವೇ ನನ್ನ ಶಾಶ್ವತ ಹುದ್ದೆ. ಅಧಿಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಸಾಮಾನ್ಯ ಕಾರ್ಯಕರ್ತನಾಗಿ ಜನಸೇವೆ ಮಾಡುವುದು ನನಗೆ ಅಧಿಕಾರಕ್ಕಿಂತ ಹೆಚ್ಚು ತೃಪ್ತಿ ನೀಡುತ್ತದೆ ಎಂದು ಹೇಳುವ ಮೂಲಕ, ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಹೈಕಮಾಂಡ್ ಮೌನವಹಿಸಿರುವುದಕ್ಕೆ ಟಾಂಗ್ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ದೆಹಲಿಯಲ್ಲೇ ಲಭ್ಯವಿದ್ದರೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
