ಗ್ರಾಮ ಪಂಚಾಯತ್ ಗಳಿಗೆ ಲೋಕಾಯುಕ್ತರಿಂದ ಟ್ರಿಟ್ ಮೆಂಟ್; ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾರ್ಯಾಚರಣೆ. ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ

ರಾಜ್ಯ

ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸಮಗ್ರ ಆಡಳಿತ ವ್ಯವಸ್ಥೆಯ ವಿರುದ್ಧವೇ ಲೋಕಾಯುಕ್ತ ಇಲಾಖೆ ಸಮರ ಸಾರಿದ್ದು, ತಾಲೂಕಿನ ಎಲ್ಲಾ 25 ಗ್ರಾಮ ಪಂಚಾಯಿತಿಗಳ ವಿರುದ್ಧ ಮೊದಲ ಬಾರಿಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕಾರ್ಯಾಚರಣೆ ನಡೆಸಿದೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಳೆದ ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 2 ರಂದು ಶ್ರೀನಿವಾಸಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿದಾಗ ಕಂಡಿದ್ದು ಕೇವಲ ಅವ್ಯವಸ್ಥೆ ಮತ್ತು ಅರಾಜಕತೆ. ಜನರ ಮೂಲಭೂತ ಸೌಕರ್ಯಗಳಾದ ಚರಂಡಿ ನಿರ್ವಹಣೆ, ಶುದ್ಧ ಕುಡಿಯುವ ನೀರು, ಬೀದಿ ದೀಪಗಳು ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡುಬಂದಿದೆ. ಅಷ್ಟೇ ಅಲ್ಲದೆ, ಜಲಮೂಲಗಳ ಒತ್ತುವರಿ ಮತ್ತು ಅಕ್ರಮ ಗಣಿಗಾರಿಕೆಯಂತಹ ಗಂಭೀರ ವಿಷಯಗಳ ಬಗ್ಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಸಾಬೀತಾಗಿದೆ.

ಅಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ, ಪಂಚಾಯಿತಿಯಲ್ಲಿ ರಸ್ತೆ ನಿರ್ಮಾಣಕ್ಕೆಂದು ಬರೋಬ್ಬರಿ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಆದರೆ ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ ರಸ್ತೆಯೇ ಅಸ್ತಿತ್ವದಲ್ಲಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಚರಂಡಿ ಹೂಳು ತೆಗೆಯದಿದ್ದರೂ ಹಣ ಪಾವತಿ, ಮನ್ರೇಗಾ ಯೋಜನೆಯಡಿ ಕೆಲಸ ಮಾಡದೆಯೇ ಹಣ ಬಿಡುಗಡೆ, ಕೊಟೇಶನ್ ಇಲ್ಲದೆ ಮನಸೋ ಇಚ್ಛೆ ಬಿಲ್ ಕ್ಲಿಯರೆನ್ಸ್ ಮಾಡಿರುವುದು ಬಟಾಬಯಲಾಗಿದೆ.

ಬೋರ್‌ವೆಲ್ ದುರಸ್ತಿ ಹೆಸರಿನಲ್ಲಿ ಗುತ್ತಿಗೆದಾರರಿಗೆ 68 ಲಕ್ಷ ರೂ. ದುರ್ಬಳಕೆ ಆರೋಪದ ಮೇಲೆ ಪಿಡಿಒ ಎ.ಎನ್. ಶಂಕರಪ್ಪ ಮತ್ತು ಕರ್ತವ್ಯ ಲೋಪಕ್ಕಾಗಿ ಪಿಡಿಒ ಮಂಜುನಾಥ್ ಎನ್.ಕೆ ಎಂಬವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸರ್ವೇಶ್ ಕೆ. ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ ಉಲ್ಲಂಘಿಸಿರುವುದು ದೃಢಪಟ್ಟಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ.

ಅಧಿಕಾರಿಗಳ ಮೊಬೈಲ್ ಗಳಲ್ಲಿರುವ ಡಿಜಿಟಲ್ ಪೇಮೆಂಟ್ ಆಪ್ ಗಳನ್ನು ಪರಿಶೀಲಿಸಿದಾಗ, ಅಧಿಕೃತ ಸಂಬಳಕ್ಕಿಂತ ಎಷ್ಟೊ ಪಟ್ಟು ಹೆಚ್ಚಿನ ಹಣದ ವಹಿವಾಟು ನಡೆದಿರುವುದು ಕಂಡುಬಂದಿದೆ. ಇದು ಲಂಚದ ರೂಪದಲ್ಲಿ ಪಡೆದ ಹಣ ಇರಬಹುದೆಂಬ ಬಲವಾದ ಸಂಶಯ ವ್ಯಕ್ತವಾಗಿದ್ದು, ಪಿಡಿಓಗಳ, ಕಾರ್ಯದರ್ಶಿಗಳ, ಬಿಲ್ ಕಲೆಕ್ಟರ್‌ಗಳ, ಎಂಜಿನಿಯರ್‌ ಸೇರಿದಂತೆ ಇಡೀ ಜಾಲದ ವಿರುದ್ಧ ತನಿಖೆ ಚುರುಕುಗೊಂಡಿದೆ. ಇದು ಕೇವಲ ಕೋಲಾರಕ್ಕೆ ಸೀಮಿತವಾದ ಕ್ರಮವಲ್ಲ, ಇದೊಂದು ಆರಂಭವಷ್ಟೇ ಎಂದು ನ್ಯಾಯಮೂರ್ತಿ ವೀರಪ್ಪ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇದೇ ರೀತಿಯ ಕಾರ್ಯಾಚರಣೆ ನಡೆಸಲು ಲೋಕಾಯುಕ್ತ ಸಜ್ಜಾಗಿದೆ. ಒಟ್ಟಾರೆ ಲೋಕಾಯುಕ್ತರ ಈ ಕ್ರಮವು ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.