ಮಂಗಳೂರು: ಹಣಕಾಸು ವಹಿವಾಟು ಹೆಸರಿನಲ್ಲಿ ಅಮಾಯಕರನ್ನು ಪೀಡಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದಿದ್ದರೂ ಸಹಕಾರಿ ಸಂಘಗಳು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸಾಲ ವಸೂಲಾತಿ ಹೆಸರಲ್ಲಿ ಅಮಾಯಕ (ಸಾಲವನ್ನೇ ಪಡೆಯದ) ವೃದ್ಧೆಯನ್ನು ಪೀಡಿಸಿರುವ ಅಮಾನವೀಯ ಕೃತ್ಯವೊಂದು ಮಂಗಳೂರು ಬಳಿ ನಡೆದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಸಚಿವಾಲಯವನ್ನೇ ಮುಜುಗರಕ್ಕೀಡು ಮಾಡಿದೆ.
ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಫೆರ್ನಾಂಡೀಸ್ ಎಂಬವರು ನಕಲಿ ದಾಖಲೆಗಳನ್ನು ಹಿಡಿದುಕೊಂಡು ವೃದ್ಧೆಯನ್ನು ಪೀಡಿಸಿ ಇದೀಗ ಬಂಧನ ಭೀತಿಗೆ ಸಿಲುಕಿದ್ದಾರೆ. ಬುಧವಾರ (31.12.2025) ಬೆಳಿಗ್ಗೆ ಅಧಿಕಾರಿಗಳ ಸೋಗಿನಲ್ಲಿ ಮನೆ ಆವರಣಕ್ಕೆ ಅತಿಕ್ರಮಣ ಪ್ರವೇಶ, ಮನೆ ಜಪ್ತಿ ಹೆಸರಿನಲ್ಲಿ ಸಾಲ ವಸೂಲಿಗೆ ಯತ್ನಿಸಿರುವ ಹಾಗೂ ವಯೋವೃದ್ಧೆ ಎಂದೂ ಗಮನಿಸದೆ ಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪೊಲೀಸ್ ದೂರಿನಲ್ಲಿ ಏನಿದೆ?
ದಕ್ಸಿಣಕನ್ನಡ ಜಿಲ್ಲೆ ಕರಿಯಂಗಳ ಗ್ರಾಮದ ನಿವಾಸಿ, ಸುಮಾರು 72 ವರ್ಷ ವಯಸ್ಸಿನ ವಯೋವೃದ್ಧೆ ಪದ್ಮಾವತಿ ಎಂಬವರ ಮನೆಗೆ ಮೂವರು ಸಹಚರರೊಂದಿಗೆ ಆಟೋ ರಿಕ್ಷಾದಲ್ಲಿ ಸಹಕಾರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಆಗಮಿಸಿದ್ದ ನಾಲ್ವರು, ತಮ್ಮ ಮಗ ಸಾಲ ಪಡೆದಿದ್ದಾನೆ. ಆ ಹಣವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಡ ಹೇರಿದ್ದಾರೆ. ಇದರಿಂದ ಬೆಚ್ಚಿದ ವೃದ್ದೆ ಬೆಂಗಳೂರಿನಲ್ಲಿರುವ ತನ್ನ ಮಗನಿಗೆ ಕರೆ ಮಾಡಿ ಮೊಬೈಲನ್ನು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಆ ಅಧಿಕಾರಿಗಳು ‘ತಮ್ಮಲ್ಲಿ GPA ಇದೆ. ಆ ಮೂಲಕ ಸಾಲ ಪಡೆಯಲಾಗಿದೆ ಎಂದು ವೃದ್ಧೆಯ ಮಗನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ.
ಸ್ಪಷ್ಟನೆಗೂ ಅವಕಾಶ ನೀಡದ ಅಧಿಕಾರಿಗಳು ಎಕಾಏಕಿ ಮನೆ ಜಪ್ತಿ ಮಾಡುವುದಾಗಿ ಹೇಳಿ, ಅಳತೆ ಮಾಪನದೊಂದಿಗೆ ಸರ್ವೇ ಆರಂಭಿಸಿದ್ದಾರೆ. ಇದರಿಂದ ಬೆಚ್ಚಿದ ವೃದ್ದೆ ಬೊಬ್ಬಿಟ್ಟಿದ್ದು, ಸಾರ್ವಜನಿಕರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಅಧಿಕಾರಿಗಳ ಗುಂಪು ಪರಾರಿಯಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪದ್ಮಾವತಿ ಆರೋಪಿಸಿದ್ದಾರೆ.
ಯಾರದ್ದೋ ಸಾಲ, ಇನ್ಯಾರಿಗೋ ಕಿರುಕುಳ:
ಕೆಲವು ವರ್ಷಗಳ ಹಿಂದೆ ಪೊಳಲಿ ವ್ಯವಸಾಯ ಸೇವಾ ಸಹಕಾರ ಸಂಘ ಎಂಬ ಹೆಸರಿನ ಈ ಸೊಸೈಟಿಯು ಹಲವಾರು ನಿಯಮಬಾಹಿರ ಕ್ರಮಗಳಿಂದಾಗಿ ವಿವಾದಗಳ ಕೇಂದ್ರ ಬಿಂದುವಾಗಿತ್ತು. ಅನಂತರ ವರ್ಷದ ಹಿಂದಷ್ಟೇ ಈ ಸೊಸೈಟಿಯ ಹೆಸರನ್ನು ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಂದು ಬದಲಿಸಲಾಗಿದೆ.

ಈ ಸೊಸೈಟಿಯು 2017ರಲ್ಲಿ ಸುರೇಂದ್ರ ಎಂಬಾತನಿಗೆ ಸುಮಾರು 2.25 ಲಕ್ಷ ರೂಪಾಯಿ ವಯ್ಯಕ್ತಿಕ ಸಾಲ ನೀಡಿತ್ತು. ಆ ಸಾಲ ಮರುಸಂದಾಯ ಆಗಿಲ್ಲ ಎಂಬ ಕಾರಣಕ್ಕಾಗಿ ಸೊಸೈಟಿ ಅಧಿಕಾರಿಗಳು ಆತನ ಕುಟುಂಬ ಸದಸ್ಯರನ್ನು ಗುರಿಯಾಗಿಸಿದ್ದಾರೆ. ಸೊಸೈಟಿ ಅಧಿಕಾರಿಗಳು ನಕಲಿ GPA ಮುಂದಿಟ್ಟು ವಯ್ಯಕ್ತಿಕ ಸಾಲವನ್ನು ಅಡಮಾನ ಸಾಲ ಎಂದು ಬಿಂಬಿಸಿ, ಸಾಲಗಾರನ ಕುಟುಂಬ ಸದಸ್ಯರ ಜಮೀನನ್ನು ಹರಾಜಿಗೆ ಮುಂದಾಗಿದ್ದಾರೆ. ಅಸಲಿಗೆ ಸದರಿ ಜಾಮೀನು ಸಾಲ ಪಡೆದವರ ಹೆಸರಿನಲ್ಲಿಲ್ಲ. ಅಷ್ಟೇ ಅಲ್ಲ, ಸದರಿ ಜಾಮೀನಿನ ಎಲ್ಲಾ ಮೂಲ ದಾಖಲೆಗಳು ಮಾಲೀಕರ ಬಳಿಯೇ ಇದೆ. ಅದರಲ್ಲಿ ಜಾಮೀನಿನ ಮೂಲ ಮಾಲೀಕರ ಸಹಿ ಇದೆ. ಆದರೆ, ಸದ್ಯ ಸೊಸೈಟಿಯವರು ತೋರಿಸುವ GPA ಯಲ್ಲಿ ಜಮೀನು ಮಾಲೀಕರ ಸಹಿ ಇರಬೇಕಾದ ಸ್ಥಳದಲ್ಲಿ ಕೇವಲ ಹೆಬ್ಬೆಟ್ಟು ಇದೆ. ಅದೂ ಕೂಡಾ ನೋಂದಣಿಯಾಗಿಲ್ಲ. ಅಡಮಾನ ಸಾಲವಾಗಿದ್ದರೆ, ಸದರಿ ಜಮೀನು ಬ್ಯಾಂಕ್ ವಶದಲ್ಲಿರಬೇಕಿತ್ತು, ಸದರಿ ಸಾಲದ ದಾಖಲೆಗಳಲ್ಲೂ ಜಮೀನು ಅಡಮಾನದ ಉಲ್ಲೇಖ ಇರಬೇಕಿತ್ತು. ಆದರೆ ಸೊಸೈಟಿ ದಾಖಲೆಯಲ್ಲಿ ಅದ್ಯಾವ ಉಲ್ಲೇಖವೂ ಇಲ್ಲ
ಈ ವಿವಾದ ಬಗ್ಗೆ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಇತ್ತೀಚೆಗಷ್ಟೇ ತೀರ್ಪು ಪ್ರಕಟವಾಗಿ, ಸೊಸೈಟಿಗೆ ಹಿನ್ನಡೆಯಾಗಿದೆ. ಹೀಗಿದ್ದರೂ ಹಣ ವಸೂಲಿಗೆ ಅಕ್ರಮ ಹಾದಿ ಹಿಡಿದಿರುವ ಸೊಸೈಟಿ ಅಧಿಕಾರಿಗಳು ವಯೋ ವೃದ್ದೆ ಮುಂದೆ ದರ್ಪ ತೋರಿ ಇದೀಗ ಬಂಧನ ಭೀತಿ ಎದುರಿಸುತ್ತಿದ್ದಾರೆ.
ಪೊಲೀಸರ ಸಾಫ್ಟ್ ಕಾರ್ನೆರ್?
ಇನ್ನೊಂದೆಡೆ, ಈ ಪ್ರಕರಣದಲ್ಲಿ ಸೊಸೈಟಿ ಮೇಲೆ ಪೊಲೀಸರು ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಸೋಗಿನಲ್ಲಿ ಮನೆ ಆವರಣಕ್ಕೆ ಅತಿಕ್ರಮಣ ಪ್ರವೇಶಿಸಿ, ಮನೆ ಹರಾಜಿಗೆ ಪ್ರಯತ್ನಿಸಿರುವ ಬಗ್ಗೆ ದೂರಿನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ, ಪೊಲೀಸರು ಆ ಕುರಿತ ಸೆಕ್ಷನ್ ಹಾಕಿಲ್ಲ. ಬದಲಾಗಿ ಅತಿಕ್ರಮಣ ಪ್ರವೇಶ, ಬೆದರಿಕೆ, ಸಾಮಾನ್ಯ ಉದ್ದೇಶ ಎಂದಷ್ಟೇ ಸೆಕ್ಷನ್ ಹಾಕಿದ್ದಾರೆ. ಈ ಅತಿಕ್ರಮಣ ಉದ್ದೇಶವನ್ನು ಮರೆ ಮಾಚಿದ್ದಾದರೂ ಪೊಲೀಸರು ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಸಿಐಡಿ ತನಿಖೆಗೆ ಮನವಿ:
ಪೊಳಲಿ ಸೊಸೈಟಿ ಅಧಿಕಾರಿಗಳ ಕೃತ್ಯವನ್ನು ಸಿಟಿಜನ್ ರೈಟ್ಸ್ ಫೌಂಡೇಷನ್ ಖಂಡಿಸಿದೆ. ಸಚಿವ ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿರುವ ಸಹಕಾರ ಇಲಾಖೆಯ ಉಸ್ತುವಾರಿಯು ಈಗ ಸಿಎಂ ಸಿದ್ದರಾಮಯ್ಯ ಅವರ ವ್ಯಾಪ್ತಿಯಲ್ಲಿದೆ. ಹಾಗಾಗಿ, ಈ ಕೃತ್ಯಗಳಿಗೆ ಮುಖ್ಯಮಂತ್ರಿಯೇ ಹೊಣೆ ಎಂದು ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಪ್ರತಿಕ್ರಿಯಿಸಿದ್ದಾರೆ. ಅನೇಕ ಅಕ್ರಮಗಳ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಸೊಸೈಟಿಯ ಕಳೆದ ಹತ್ತು ವರ್ಷಗಳ ವಹಿವಾಟುಗಳ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಸಿಎಂಗೆ ಅವರು ಮನವಿ ಮಾಡಿದ್ದಾರೆ.
