ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು “ಬಾಂಗ್ಲಾ ನುಸುಳುಕೋರ” ಎಂದು ಆಪಾದಿಸಿ ಹಲ್ಲೆ ನಡೆಸಿರುವುದು, ಈ ಸಂದರ್ಭ ಆತನಿಂದ ಹಲವು ಬಾರಿ “ಜೈ ಶ್ರೀರಾಮ್” ಘೋಷಣೆ ಹಾಕಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಕಟುವಾಗಿ ಖಂಡಿಸುತ್ತದೆ. ಈ ಹಲ್ಲೆಕೋರರು ಸಂಘಪರಿವಾರದ “ಹಿಂದು ಜಾಗರಣ ವೇದಿಕೆ” ಗುಂಪಿಗೆ ಸೇರಿದವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಈ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ ಗಳಡಿ ಪ್ರಕರಣ ದಾಖಲಿದ್ದಾರೆ. ತಕ್ಷಣ ಈ ದುಷ್ಕರ್ಮಿಗಳನ್ನು ಬಂಧಿಸಬೇಕು, ಮತ್ತಷ್ಟು ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಜಿಲ್ಲಾಡಳಿತ ಸಂತ್ರಸ್ತ ವಲಸೆ ಕಾರ್ಮಿಕನಿಗೆ ಸೂಕ್ತ ರಕ್ಷಣೆ ಹಾಗು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸುತ್ತದೆ.
ಈ ರೀತಿಯ ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತಿ ಅಪಾಯಕಾರಿ ಆಗಿದ್ದು ಮುಂದಿನ ದಿನಗಳಲ್ಲಿ ಮಂಗಳೂರಿನ ಅಭಿವೃದ್ದಿ, ಶಾಂತಿ, ಸೌಹಾರ್ದತೆಗೆ ಮತ್ತಷ್ಟು ಧಕ್ಕೆ ಉಂಟಾಗಲಿದೆ. ವಲಸೆ ಕಾರ್ಮಿಕರು, ಮತೀಯ ಪುಂಡರ ಅನುಮಾನಕ್ಕೆ ಒಳಗಾದ ಅಪರಿಚಿತರು ಮುಸ್ಲಿಮರು ಎಂದು ಗೊತ್ತಾದ ತಕ್ಷಣ ಜೈ ಶ್ರೀರಾಮ್ ಘೋಷಣೆ ಹಾಕಲು ಬಲವಂತ ಪಡಿಸುವುದು ಜಾತ್ಯಾತೀತತೆ, ಧಾರ್ಮಿಕ ಸ್ವಾತಂತ್ರ್ಯದ ಅಡಿಗಲ್ಲನ್ನೆ ಅಲುಗಾಡಿಸುವ ಅತಿ ಅಪಾಯಕಾರಿ ಬೆಳವಣಿಗೆ ಆಗಿದೆ. ಈ ಹಿಂದೆ ಕುಡುಪು ಬಳಿ ನಡೆದ ಅಶ್ರಫ್ ವಯನಾಡು ಗುಂಪು ಹತ್ಯೆಯ ಸಂದರ್ಭದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿತ್ತು. ಸರಕಾರ ಈ ಬೆಳವಣಿಗೆಗಳ ನಿರ್ವಹಣೆಯನ್ನು ಪೊಲೀಸರಿಗಷ್ಟೆ ಬಿಟ್ಟು ಬಿಡಬಾರದು. ಸೂಕ್ತ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ.
ಒಂದೆಡೆ ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ನಿಂತು ಕರಾವಳಿ ಪ್ರವಾಸೋದ್ಯಮ ಸಮಾವೇಶ ಆಯೋಜಿಸುತ್ತಿದ್ದಾರೆ, ಬಿಜೆಪಿಯ ಶಾಸಕರು, ಸಂಸದರುಗಳು ಬಹಳ ಸಂಭ್ರಮದಲ್ಲಿ ಪ್ರವಾಸೋದ್ಯಮ ಸಮಾವೇಶದಲ್ಲಿ ಸರಕಾರದೊಂದಿಗೆ ಕೈ ಜೋಡಿಸಿದ್ದಾರೆ. ಅದೇ ಸಂದರ್ಭದಲ್ಲಿ ತಮ್ಮ ಉನ್ಮಾದಿತ ಕಾರ್ಯಕರ್ತರನ್ನು ವಲಸೆ ಕಾರ್ಮಿಕರು, ಮುಸ್ಲಿಮರ ವಿರುದ್ಧ ಹಿಂಸೆಗೆ ಇಳಿಸಿ ಮಂಗಳೂರಿನ ಕುರಿತು ಭಯ ಹಾಗು ನಕಾರಾತ್ಮಕ ಭಾವನೆ ಮೂಡಿಸಲು ಯತ್ನಿಸುತ್ತಾರೆ, ಅದೇ ಸಂದರ್ಭ ತಮ್ಮ ಹಾಗು ಆಪ್ತರ ಉದ್ಯಮಗಳಲ್ಲಿ ಸ್ಥಳೀಯರ ಬದಲಿಗೆ ಅಗ್ಗದಲ್ಲಿ ದೊರಕುವ ವಲಸೆ ಕಾರ್ಮಿಕರನ್ನು ತಂದು ದುಡಿಸಿಕೊಳ್ಳುತ್ತಾರೆ. ಇಂತಹ ಎರಡು ಮುಖಗಳ ರಾಜಕಾರಣವನ್ನು ತಿರಸ್ಕರಿಸಬೇಕು, ಧರ್ಮ, ದೇಶ ಭಕ್ತಿಯ ಮುಖವಾಡ ತೊಡಿಸಿ ನಡೆಸುವ ಗೂಂಡಾಗಿರಿಯನ್ನು ಖಂಡಿಸಬೇಕು ಎಂದು ಜಿಲ್ಲೆಯ ಪ್ರಜ್ಞಾವಂತ ಜನತೆಯಲ್ಲಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಮಾಡುತ್ತದೆ.
