ಸಿಎಂ-ಡಿಸಿಎಂ ಮಧ್ಯೆ ಮೂಡದ ಒಮ್ಮತ.. ಅಂತಿಮ ಪಟ್ಟಿ ಬಿಡುಗಡೆಗೆ ಬೇಕಿದೆ ಇನ್ನಷ್ಟು ಸಮಯ.!
ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸತತ ನಾಲ್ಕು ಸಮೀಕ್ಷೆಗಳನ್ನು ನಡೆಸಿದ ಅನಂತರವೂ ತೃಪ್ತಿ ಇಲ್ಲ; ಸಹಮತವೂ ಇಲ್ಲ. ಪರಿಣಾಮ ಇದೇ ವಿಚಾರಕ್ಕೆ ಮತ್ತೂಂದು ಸಮೀಕ್ಷೆ ನಡೆಸಲು ಪಕ್ಷದ ನಾಯಕರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐದನೇ ಬಾರಿಗೆ ಸೂಕ್ತ ಅಭ್ಯರ್ಥಿಯ ಹುಡುಕಾಟಕ್ಕೆ ಕೈ’ ತಂಡ ಸಜ್ಜಾಗುತ್ತಿದೆ.ಈಗಾಗಲೇ ಸುನೀಲ ಕನಗೋಳು ನೇತೃತ್ವದ ತಂಡವು ಸುಮಾರು ಎರಡು ತಿಂಗಳ ಹಿಂದೆಯೇ ಕ್ಷೇತ್ರಗಳಿಗೆ ಖುದ್ದು ತೆರಳಿ ಹಲವು ಮಾದರಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಿ, ಗ್ರೌಂಡ್ ರಿಪೋರ್ಟ್ ನೀಡಿತ್ತು. ಇದರ ಬೆನ್ನಲ್ಲೇ ಸ್ವತಃ ಎಐಸಿಸಿ ಪ್ರತ್ಯೇಕ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ತುಲನೆ ಮಾಡಿದೆ. ಈ ನಡುವೆ ಜಿಲ್ಲಾ ಉಸ್ತುವಾರಿಗಳು ಪಕ್ಷದ ಸೂಚನೆ ಮೇರೆಗೆ ವರದಿ ನೀಡಿದ್ದರು. ಅದರಲ್ಲಿ ಮೂರು-ನಾಲ್ಕು ಸಂಭವನೀಯ ಅಭ್ಯರ್ಥಿಗಳನ್ನು ಉಲ್ಲೇಖೀಸಲಾಗಿತ್ತು. ಮತ್ತೂಂದೆಡೆ ಸರಕಾರವೇ ಗುಪ್ತದಳದಿಂದಲೂ ಗೌಪ್ಯ ವರದಿ ತರಿಸಿಕೊಂಡಿದೆ ಎನ್ನಲಾಗಿದೆ.
ಈ ಎಲ್ಲ ಸಮೀಕ್ಷೆಗಳು ಕೇವಲ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ್ದಾಗಿರಲಿಲ್ಲ; ಬದಲಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಹೇಗಿದೆ? ಮುಂದಿನ ಕಾರ್ಯತಂತ್ರಗಳಲ್ಲಿ ಅಗತ್ಯ ಮಾರ್ಪಾಡು ಮತ್ತಿತರ ಅಂಶಗಳನ್ನೂ ಆಧರಿಸಿದ್ದವು. ಆರೇಳು ಕಡೆ ಕಗ್ಗಂಟು
ಈ ಮಧ್ಯೆ 28 ಲೋಕಸಭಾ ಕ್ಷೇತ್ರಗಳ ಪೈಕಿ 10 ರಿಂದ 12 ಕ್ಷೇತ್ರಗಳಲ್ಲಿ ತಲಾ ಬಹುತೇಕ ಓರ್ವ ಅಭ್ಯರ್ಥಿ ಹೆಸರು ಶಿಫಾರಸು ಮಾಡಲು ಸಿಎಂ-ಡಿಸಿಎಂ ಹಾಗೂ ರಣದೀಪ್ಸಿಂಗ್ ಸುರ್ಜೆವಾಲ ನಡುವೆ ಒಮ್ಮತ ಮೂಡಿದೆ. ಆದರೆ, ತುಮಕೂರು, ಚಾಮರಾಜನಗರ, ಮೈಸೂರು-ಕೊಡಗು ಸೇರಿ ಆರೇಳು ಕ್ಷೇತ್ರಗಳ ವಿಚಾರದಲ್ಲಿ ಇಬ್ಬರೂ ನಾಯಕರ ನಡುವೆ (ಸಿಎಂ-ಡಿಸಿಎಂ) ಒಮ್ಮತ ಮೂಡದ್ದರಿಂದ ಕಗ್ಗಂಟಾಗಿ ಕೂತಿದೆ ಎಂದು ಮೂಲಗಳು ತಿಳಿಸಿವೆ. ಉಳಿದಂತೆ 10 ರಿಂದ 14 ಕ್ಷೇತ್ರಗಳಲ್ಲಿ ಇಬ್ಬರು ಸಂಭವನೀಯ ಅಭ್ಯರ್ಥಿಗಳನ್ನು ಹೈಕಮಾಂಡ್ಗೆ ಶಿಫಾರಸು ಮಾಡಲು ಉದ್ದೇಶಿಸಲಾಗಿದೆ. ಈ ಪಟ್ಟಿಯಲ್ಲಿ ಸಚಿವರ ಹೆಸರುಗಳೂ ಸೇರಿವೆ. ಆದರೆ, ಇನ್ಮುಂದೆ ನಡೆಸಲಾಗುವ ಸಮೀಕ್ಷೆ ವರದಿಯನ್ನೂ ಆಧರಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ. ಹೆಚ್ಚು-ಕಡಿಮೆ ಮಾಸಾಂತ್ಯಕ್ಕೆ ಮೊದಲ ಹಂತದಲ್ಲಿ ಕನಿಷ್ಠ ಅರ್ಧದಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.
