ಕುಖ್ಯಾತ ಅಂತಾರಾಜ್ಯ ಇರಾನಿ ಗ್ಯಾಂಗ್‌ನ ಏಳು ಮಂದಿಯನ್ನು ಬಂಧಿಸುವಲ್ಲಿ ಸಬರ್ಬನ್‌ ಠಾಣೆ ಪೊಲೀಸರು ಯಶಸ್ವಿ

ರಾಷ್ಟ್ರೀಯ

ತೆಲಂಗಾಣದ ವಿವಿಧೆಡೆ ಒಂದೇ ದಿನ ಮೂರು ಅಪರಾಧ ಕೃತ್ಯಗಳನ್ನು ಎಸಗಿ ನಗರದಲ್ಲಿ ಆಶ್ರಯ ಪಡೆದಿದ್ದ ಕುಖ್ಯಾತ ಅಂತಾರಾಜ್ಯ ಇರಾನಿ ಗ್ಯಾಂಗ್‌ನ ಏಳು ಮಂದಿಯನ್ನು ಸಬರ್ಬನ್‌ ಠಾಣೆ ಪೊಲೀಸರು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಬೀಡ್‌ ಜಿಲ್ಲೆಯವರಾದ ಜಹೀರ್‌ ಅಬ್ಬಾಸ್ ಅಲಿ, ರಜಾಕ್‌ ಶೇಖುಬ್‌ ಬೇಗ್‌, ಅಲಿಮಿರ್ಜಾ ದರಬೇಶ, ಜಾಫರ್‌ ಅಜಮ್‌ ಸೈಯದ್‌, ಲಾಲ್‌ ಸಮೀರ್‌ ಅಲಿಯಾಸ್‌ ಲಾಲ್‌ಗಾಂಧಿ, ಜಾಫರ್‌ ಅಲಿ ಸೈಯದ್‌ ಹಾಗೂ ಮಧ್ಯಪ್ರದೇಶದ ಭೂಪಾಲ್‌ನ ಖಾಸಿಂ ಜೋಜೋ ಜಾಫ್ರಿ ಬಂಧಿತರು.

ಅಪರಾಧಿಗಳ ಪೈಕಿ ಒಬ್ಬ ಮುಂಬೈ ಪೊಲೀಸರ ಮಾಹಿತಿದಾರನಾಗಿಯೂ ಕೆಲಸ ಮಾಡಿದ್ದಾನೆ ಎನ್ನಲಾಗಿದೆ. ಜನವರಿ 23ರಂದು ತಾವರಗೇರಾ ಕ್ರಾಸ್‌ ಹತ್ತಿರ ಆರೇಳು ಮಂದಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ದರೋಡೆಗೆ ಯತ್ನಿಸುತ್ತಿರುವ ಮಾಹಿತಿ ಬಂತು. ಈ ಮಾಹಿತಿ ಆಧರಿಸಿ ಆರೋಪಿಗಳ ಮೇಲೆ ನಿಗಾ ಇರಿಸಲಾಗಿತ್ತು. ದರೋಡೆಗೆ ಸಂಚು ಹಾಗೂ ಮಾರಾಕಾಸ್ತ್ರಗಳನ್ನು ಹೊಂದಿದ ಆರೋಪದಡಿ ಏಳು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದರು. ಆಗ ತೆಲಂಗಾಣದ ಮಹಬೂಬ್‌ ನಗರ ಹಾಗೂ ಏವಲಾ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಒಂದೇ ದಿನ ಮೂರು ಅಪರಾಧ ಕೃತ್ಯಗಳನ್ನು ಎಸೆಗಿರುವುದಾಗಿ ತಪ್ಪೊಪ್ಪಿಕೊಂಡರು. ಬಂಧಿತರು ಕದ್ದ ಚಿನ್ನಾಭರಣಗಳನ್ನು ಕಾರಿನ ಮಧ್ಯದ ಸೀಟ್‌ನ ಹ್ಯಾಂಡಲ್‌ನಲ್ಲಿ ಅಡಗಿಸಿಟ್ಟಿದ್ದರು.

ಬಂಧಿತರಿಂದ ಒಟ್ಟು ರೂ. 15.30 ಲಕ್ಷ ಮೌಲ್ಯದ್ಯ 90 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಹೆಕ್ಸಾನ್‌ ಕಾರು, ಟಿವಿಎಸ್ ಅಪಾಚಿ ಬೈಕ್‌, ಹೋಂಡಾ ಹಾರ್ನೆಟ್‌ ಬೈಕ್‌, ಕಬ್ಬಿಣ ರಾಡ್‌, ತಲವಾರು, ಕಾರದ ಪುಡಿ, ಕಪ್ಪು ಬಟ್ಟೆಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ.

ಎಲ್ಲಾ ಆರೋಪಿಗಳು ರೂಢಿಗತ ಅಪರಾಧಿಗಳೇ ಆಗಿದ್ದಾರೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ನಕಲಿ ಪೊಲೀಸ್‌ ಅಂತಾ ವಂಚನೆ, ಸುಲಿಗೆ ಹಾಗೂ ದರೋಡೆ ಮಾಡಿದ ಪ್ರಕರಣಗಳು ದಾಖಲಾಗಿವೆ. ಕಳೆದ 10 ರಿಂದ 15 ವರ್ಷಗಳಿಂದ ಬರೀ ಅಪರಾಧ ಕೃತ್ಯಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ.

‘ಪ್ರಕರಣದ 1ನೇ ಆರೋಪಿ ಜಹೀರ್‌ ಅಬ್ಬಾಸ್‌ಅಲಿ ವಿರುದ್ಧ ಮಹಾರಾಷ್ಟ್ರದ ಪರ್ಲಿಯಲ್ಲಿ ಐದು ಪ್ರಕರಣಗಳಿವೆ. ಇತ್ತೀಚೆಗೆ ಅಮರಾವತಿಯಲ್ಲಿ 15 ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಜಾಮೀನಿನ ಮೇಲೆ ಹೊರಬಂದು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. 3ನೇ ಆರೋಪಿ ಲಾಲ್‌ಸಮೀರ್‌ ವಿರುದ್ಧ ಬೆಂಗಳೂರು, ಮುಂಬೈನಲ್ಲಿ ಪ್ರಕರಣಗಳಿವೆ. ಅಮರಾವತಿಯಲ್ಲಿ 15 ಪ್ರಕರಣಗಳಲ್ಲಿ ಈತನೂ ಬಂಧನಕ್ಕೆ ಒಳಗಾಗಿದ್ದ. 7ನೇ ಆರೋಪಿ ಜಾಫರ್‌ ಅಜಮ್‌ ಸೈಯದ್‌ ವಿರುದ್ಧ ಐದು ಪ್ರಕರಣಗಳಿವೆ. 4ನೇ ಆರೋಪಿ ಖಾಸಿಂ ವಿರುದ್ಧ ಐದು ಪ್ರಕರಣಗಳಿವೆ. ಲಾಲ್‌ಸಮೀರ್‌ ಮಗಳನ್ನು ಕಲಬುರಗಿಯ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ ಇಲ್ಲಿ ಆಶ್ರಯ ಪಡೆಯಲು ಬಂದಿದ್ದರು’ ಎಂದು ಪೊಲೀಸ್ ಕಮೀಶನರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.