ಕೊಲ್ಲಂ: ಮೂಢನಂಬಿಕೆಯ ಹೆಸರಿನಲ್ಲಿ ನಡೆದ ಘಟನೆಯೊಂದು ಬೆಚ್ಚಿಬೀಳಿಸಿದೆ. ಭೂತ ಬಿಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜನ್ ಬಾಬು ಅಲಿಯಾಸ್ ಮುರಾರಿ ಎಂಬ ಮಂತ್ರವಾದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆಯು ಪುತೂರು ಪೊಲೀಸ್ ಠಾಣಾ ವ್ಯಾಪ್ತಿಯ ವೆಂಡರ್ ಎಂಬಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಮೊದಲು ಜ್ಯೋತಿಷ್ಯದ ಸಲಹೆಗಾಗಿ ಆರೋಪಿಯನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆರೋಪಿಯು, ನಿಮ್ಮೆಲ್ಲಾ ಕಷ್ಟಗಳಿಗೆ ಬಾಲಕಿಯ ದೇಹದಲ್ಲಿರುವ ‘ಕೆಟ್ಟ ಆತ್ಮ’ ಅಥವಾ ‘ಭೂತ’ವೇ ಕಾರಣ ಎಂದು ನಂಬಿಸಿದ್ದನು.
ಆತ್ಮವನ್ನು ಹೊರಹಾಕುವ ವಿಶೇಷ ಪೂಜೆ ಅಥವಾ ವಿಧಿವಿಧಾನಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಆರೋಪಿ ಹೇಳಿದ್ದನು. ಆತನ ಮಾತನ್ನು ನಂಬಿದ ತಾಯಿ-ಮಗಳು ಭಾನುವಾರ ಮತ್ತೊಮ್ಮೆ ಆತನ ಮನೆಗೆ ಹೋಗಿದ್ದರು. ಅಲ್ಲಿ ಆರೋಪಿಯು ಬಾಲಕಿಯ ತಾಯಿಯನ್ನು ಕೋಣೆಯ ಹೊರಗೆ ನಿಲ್ಲಿಸಿ, ಅಪ್ರಾಪ್ತ ಬಾಲಕಿಯನ್ನು ಮಾತ್ರ ಒಳಗೆ ಕರೆದೊಯ್ದು ಒಬ್ಬಂಟಿಯಾಗಿ ಬಿಟ್ಟಿದ್ದನು. ಕೋಣೆಯಿಂದ ಹೊರಬಂದ ಬಾಲಕಿ, ತನ್ನ ಮೇಲೆ ನಡೆದ ದೈಹಿಕ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಆಕ್ರೋಶಗೊಂಡು ಆರೋಪಿಯ ಮನೆಯ ಮುಂದೆ ಜಮಾಯಿಸಿದ್ದರು. ಈ ಗೊಂದಲದ ನಡುವೆಯೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಸೋಮವಾರ ಸಸ್ತಂಕೊಟ್ಟಾ ಎಂಬಲ್ಲಿರುವ ಲಾಡ್ಜ್ ನಲ್ಲಿ ಅಡಗಿಕೊಂಡಿದ್ದ ಆರೋಪಿ ನಕಲಿ ಮಂತ್ರವಾದಿ ರಾಜನ್ ಬಾಬು ಅಲಿಯಾಸ್ ಮುರಾರಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು POCSO (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದು, ತನ್ನನ್ನು ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
