ಅನಾಗರಿಕರಿಗೆ ಗುಂಡಿ ತೋಡಿದ ಪಟ್ಟಣ ಪಂಚಾಯತ್; ಸೋಮಾವತಿ ನದಿ ಉಳಿಸಲು ಪಣ.

ಕರಾವಳಿ

ನಾಗರಿಕ ಸಮಾಜ ವಿಕಸನಗೊಳ್ಳುತ್ತಿದ್ದಂತೆಯೇ ಅನಾಗರಿಕತನವೂ ಹೆಚ್ಚುತ್ತಿದೆ

ಬೆಳ್ತಂಗಡಿ ತಾಲೂಕಿನ ಪ್ರಮುಖ ನದಿಗಳಲ್ಲಿ ಒಂದಾಗಿ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಜೀವನದಿಯಾಗಿ ಹರಿಯುತ್ತಿರುವ ಸೋಮಾವತಿಯ ಒಡಲನ್ನು ಡಂಪಿಂಗ್ ಯಾರ್ಡ್ ಮಾಡಲು ಹೊರಟ ಖದೀಮರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಗುಂಡಿ ತೋಡಿದ ಅಪರೂಪದ ಸಂಗತಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜೀವನಾಡಿಯಾಗಿ ಜನರಿಗೆ ಕುಡಿಯುವ ನೀರು ಒದಗಿಸುವ ಏಕೈಕ ನದಿ ಸೋಮಾವತಿ. ಸಾವಿರಾರು ಜನರ ಜೀವ ಉಳಿಸಿದ ಈಕೆಯ ಮೇಲೆ ಮನುಷ್ಯ ಪ್ರಾಣಿ ದಿನನಿತ್ಯ ಅತ್ಯಾಚಾರ ನಡೆಸುತ್ತಿದ್ದಾನೆ. ಇದು ಇಂದು ನಿನ್ನೆಯ ಕಥೆಯಲ್ಲ. ಮಳೆಗಾಲ ಮುಗಿದ ತಕ್ಷಣ ಕೆಲವು ಅನಾಗರಿಕರು ವನ್ಯಜೀವಿ ಅರಣ್ಯ ಇಲಾಖೆ ಸಮೀಪದಲ್ಲೇ ನದಿಯ ಒಡಲಿಗೆ ಹಳೆಯ ಕಟ್ಟಡದ ಅವಶೇಷಗಳು, ಹಳೆಯ ಬಟ್ಟೆಬರೆಗಳು, ಪ್ಲಾಸ್ಟಿಕ್, ಬಾಟಲಿಗಳು ಒಟ್ಟಾರೆಯಾಗಿ ತ್ಯಾಜ್ಯಗಳನ್ನು ತಂದು ಇಲ್ಲಿ ಬೇಕಾಬಿಟ್ಟಿ ಹಾಕುತ್ತಿದ್ದರು. ಇದರಿಂದಾಗಿ ಜಲಚರಗಳು ಸೇರಿದಂತೆ ಜನರು ಸಾಕಷ್ಟು ತೊಂದರೆಗೀಡಾಗುತ್ತಿದ್ದವು.

ನಾಗರಿಕ ಸಮಾಜ ವಿಕಸನಗೊಳ್ಳುತ್ತಿದ್ದಂತೆಯೇ ಅನಾಗರಿಕತನವೂ ಹೆಚ್ಚುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಹತ್ತಾರು ವರ್ಷಗಳಿಂದ ಸೋಮಾವತಿ ಒಡಲಿಗೆ ತ್ಯಾಜ್ಯವನ್ನು ತಂದು ಸುರಿದು ಡಂಪಿಂಗ್ ಯಾರ್ಡ್ ಮಾಡುತ್ತಿರುವ ಬಗ್ಗೆ ಹತ್ತಾರು ವರ್ಷಗಳಿಂದ ವರದಿ ಮೇಲೆ ವರದಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಕಳೆದ ವರ್ಷ ಕೂಡ ಮಳೆಗಾಲ ಮುಗಿದ ತಕ್ಷಣ ಮತ್ತೆ ತ್ಯಾಜ್ಯಗಳನ್ನು ತಂದು ಸುರಿಯಲು ಆರಂಭಿಸಿದ್ದಾರೆ. ನದಿಯ ಒಂದು ಬದಿಯ ಹತ್ತಾರು ಕಡೆಗಳಲ್ಲಿ ಲೋಡುಗಟ್ಟಲೆ ತ್ಯಾಜ್ಯಗಳನ್ನು ಸುರಿಯಲಾಗಿದೆ.

ಇದೀಗ ಇಂತಹ ಅನಾಗರಿಕರಿಂದ ಸೋಮಾವತಿ ನದಿಯನ್ನು ಉಳಿಸಿ, ಕಾಪಾಡಲು ಬೆಳ್ತಂಗಡಿ ಪಟ್ಟಣ ಪಂಚಾಯತ್ ಕೊನೆಗೂ ಮುಂದಾಗಿದೆ. ನದಿಯ ಸಂಪರ್ಕ ರಸ್ತೆಯಲ್ಲಿ ಉಲ್ಟಾ U ಆಕಾರದಲ್ಲಿ 3 ಸುತ್ತಲೂ ಗುಂಡಿಯನ್ನು ತೋಡಲಾಗಿದೆ. ಇದರಿಂದಾಗಿ ತ್ಯಾಜ್ಯ ಸುರಿಯುವ ಮತ್ತು ಅಕ್ರಮವಾಗಿ ಮರಳು ದಂಧೆ ನಡೆಸುವವರಿಗೆ ದೊಡ್ಡ ಆಘಾತ ನೀಡಿದೆ. ಕೊನೆಗೂ ಸೋಮಾವತಿಯನ್ನು ಉಳಿಸಲು ಮಾಡಿದ ಉಪಕಾರಕ್ಕೆ ಸಾರ್ವಜನಿಕರು ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.