ದೇವರನಾಡು ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ವೋಟುಗಳ ಮೇಲೆ ಬಿಜೆಪಿ ಪ್ರಭಾವ ಬೀರಲಿದ್ದು, ಈ ಮೂಲಕ ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯ ಭವಿಷ್ಯ. ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಪಕ್ಷಗಳು ಗೆಲುವಿಗೆ ತಯಾರಿ ನಡೆಸುತ್ತಿವೆ. ತಮಿಳುನಾಡು, ಕೇರಳದಲ್ಲಿ ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷಗಳು ಮತ್ತೆ ಚುಕ್ಕಾಣಿ ಹಿಡಿಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇತ್ತ ವಿರೋಧ ಪಕ್ಷಗಳು ತೀವ್ರ ಪೈಪೋಟಿ ನೀಡುತ್ತಿದ್ದು, ಕೇರಳದಲ್ಲಿ ನೇರ ನೇರ ಹಣಾಹಣಿ ಇರಲಿದೆ ಎಂದು ಚುನಾವಣಾ ಪೂರ್ಣ ಸಮೀಕ್ಷೆಗಳು ಹೇಳುತ್ತಿವೆ. ಕೇರಳದ ವಿಧಾನಸಭಾ ಸ್ಥಾನಗಳ ಸಂಖ್ಯೆ 140. ಮ್ಯಾಜಿಕ್ ಸಂಖ್ಯೆ 71 ಆಗಿದೆ. ಸಿ ವೋಟರ್ ಸಮೀಕ್ಷೆಯಲ್ಲಿ ಯುಡಿಎಫ್ 69 ರಿಂದ 81 ಸ್ಥಾನಗಳು, ಎಲ್‌ಡಿಎಫ್ 57 ರಿಂದ 69 ಸ್ಥಾನಗಳು, ಎನ್‌ಡಿಎ 1 ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ.
ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ತನ್ನ ಹಿಡಿತವನ್ನು ಕಾಯ್ದುಕೊಂಡಿದ್ದರೂ, ಅಲ್ಲಿನ ಮತ ಹಂಚಿಕೆಯಲ್ಲಿ ಭಾರಿ ಕುಸಿತ ಕಾಣಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಎಲ್‌ಡಿಎಫ್ ಮತಬ್ಯಾಂಕ್‌ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಲಗ್ಗೆ ಇಡಲಿದೆ. ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಸಿಪಿಎಂನ ಹಾಗೂ ಕಾಂಗ್ರೆಸಿನ ಪ್ರಬಲ ನಾಯಕರನ್ನು ಸೋಲಿಸಿ ಜಯಭೇರಿ ಬಾರಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
