ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ.?; ಸಂಪುಟಕ್ಜೆ ಖಾದರ್, ಸ್ಪೀಕರ್ ಸ್ಥಾನಕ್ಕೆ ದಿನೇಶ್.?

ರಾಜ್ಯ

ಕಡಲ ತೀರಕ್ಕೆ ಅರೆಸ್ಸೆಸ್ ಲಗ್ಗೆ; ಆಪರೇಷನ್ 2028 ಗೆ ಸಿದ್ದತೆ

✍️. ಅರ್.ಟಿ. ವಿಠ್ಠಲಮೂರ್ತಿ

ಮೊನ್ನೆ ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆಗೆ ಅಂತ ಹೋಗಿದ್ದ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೊಸ ಹೋರಾಟವೊಂದಕ್ಕೆ ಸ್ಕೆಚ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಎತ್ತಂಗಡಿ ಮಾಡಿಸುವುದು ಈ ಹೋರಾಟದ ಮೂಲ ಉದ್ದೇಶ.
ಅಂದ ಹಾಗೆ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯದಲ್ಲಿ ಕೈ ಪಾಳಯ ಗುಂಪುಗಾರಿಕೆಯಿಂದ ತತ್ತರಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಪಕ್ಷದ ಪರಿಸ್ಥಿತಿಯ ಬಗ್ಗೆ ವರಿಷ್ಟರಿಗೆ ನೈಜ ವರದಿ ಸಲ್ಲಿಸಬೇಕಾದವರು ಆ ಕೆಲಸ ಮಾಡುತ್ತಿಲ್ಲ. ಹೀಗಾಗಿ ಕಳೆದ ಎರಡು ವರ್ಷದಿಂದ ದಿನ ಬೆಳಗಾದರೆ ನಾಯಕತ್ವ ಬದಲಾವಣೆಯ ಚರ್ಚೆ ಜಾರಿಯಲ್ಲಿದೆಯಲ್ಲದೆ ಅದಕ್ಕೆ ಬ್ರೇಕ್ ಬೀಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಇದರ ಪರಿಣಾಮ ಏನಾಗಿದೆ ಎಂದರೆ ಆಡಳಿತ ಯಂತ್ರ ದಿಕ್ಕೆಟ್ಟಿದೆ. ನಾಯಕತ್ವ ಇಂದು ಬದಲಾಗಬಹುದು, ನಾಳೆ ಬದಲಾಗಬಹುದು ಎಂಬ ಲೆಕ್ಕಾಚಾರದಿಂದ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಅಧಿಕಾರಿಗಳು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಲ್ಲ. ಪರಿಣಾಮವಾಗಿ
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಮಂತ್ರಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಹೀಗೆ ಆಡಳಿತ ಯಂತ್ರದ ಮೇಲೆ ಇಂತಹ ವ್ಯತಿರಿಕ್ತ ವಾತಾವರಣ ಅವರಿಸಿರುವುದಕ್ಕೆ ಸುರ್ಜೇವಾಲ ಅವರು ಕಾರಣ.

ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಪವರ್ ಪುಲ್ ನಾಯಕ. ಅವರನ್ನು ಬದಲಿಸುವುದು ಎಂದರೆ ಪಕ್ಷವನ್ನು ಅಸ್ಥಿರಗೊಳಿಸುವುದು ಎಂದರ್ಥ ಅಂತ ಸುರ್ಜೇವಾಲಾ ವರಿಷ್ಟರಿಗೆ ವಸ್ತುಸ್ಥಿತಿಯ ವರದಿ ಕೊಟ್ಟರೂ ಸಾಕಿತ್ತು. ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯ ಅಂತನ್ನಿಸಿದ್ದರೆ ವರಿಷ್ಟರು ಏನೇ ತೀರ್ಮಾನ ತೆಗೆದುಕೊಳ್ಳಲಿ. ಆದರೆ ಸುರ್ಜೇವಾಲಾ ಅವರು ನಿರಂತರವಾಗಿ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಕುಮ್ಮಕ್ಕು ಕೊಡುತ್ತಾ ಬಂದರು.
ಸುರ್ಜೇವಾಲಾ ಅವರ ಈ ಕೆಲಸದ ಬಗ್ಗೆ ಒಂದು ಸಂದರ್ಭದಲ್ಲಿ ಕೆರಳಿದ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ: ಸುರ್ಜೇವಾಲ ಅವರನ್ನು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯಿಂದ ಬದಲಿಸಿ ಅಂತ ಹೇಳಿದ್ದರು. ಹೀಗೆ ಹೇಳಿದವರು ಇದಕ್ಕಾಗಿ ಪಟ್ಟು ಹಿಡಿದಿದ್ದರೆ ಸುರ್ಜೇವಾಲ ಯಾವತ್ತೋ ಕರ್ನಾಟಕದ ಉಸ್ತುವಾರಿಯಿಂದ ಎತ್ತಂಗಡಿಯಾಗುತ್ತಿದ್ದರು. ಆದರೆ ಒಂದು ವಿಷಯಕ್ಕೆ ಜಿದ್ದು ಬೀಳದ ಸಿದ್ದರಾಮಯ್ಯ ಅವರ ಧೋರಣೆಯಿಂದ ಸುರ್ಜೇವಾಲ ಉಸ್ತುವಾರಿಯಾಗಿ ಮುಂದುವರಿದರು.
ಹಾಗಂತ ಅವರೇನೂ ಈಗ ರಾಹುಲ್ ಗಾಂಧಿಯವರ ಆಪ್ತರಾಗಿ ಉಳಿದಿಲ್ಲ. ವಸ್ತುಸ್ತಿತಿ ಎಂದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕಡೆ ಹೋಗದಂತೆ ರಾಹುಲ್ ಗಾಂಧಿ ಅವರು ಸುರ್ಜೇವಾಲ ಅವರಿಗೆ ಸೂಚಿಸಿದ್ದರು. ಹೀಗಾಗಿ ಸುರ್ಜೇವಾಲಾ ಕೂಡಾ ಕರ್ನಾಟಕದ ಕಡೆ ಬರುತ್ತಿರಲಿಲ್ಲ. ಆದರೆ ಈಗ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸುರ್ಜೇವಾಲ ಅವರನ್ನು ಬಳಸಿಕೊಳ್ಳಲು ಇಷ್ಟಪಡದ ರಾಹುಲ್ ಗಾಂಧಿ ಅವರು: ಈ ಸಲ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳಿಗೆ ಹೋಗಿ ಅಂತ ಕಳಿಸಿದ್ದಾರೆ. ಹೀಗಾಗಿ ಸುರ್ಜೇವಾಲ ಇಲ್ಲಿ ಬಂದು ಕುಳಿತಿದ್ದಾರೆ.

ಅಂದ ಹಾಗೆ ಇದೇನೇ ಇದ್ದರೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ನಂತರ ಸುರ್ಜೇವಾಲ ಪುನ: ಫೀಲ್ಡಿಗಿಳಿಯುತ್ತಾರೆ. ಇದರರ್ಥ, ಕರ್ನಾಟಕದಲ್ಲಿ ಪುನ: ಅಧಿಕಾರ ಹಂಚಿಕೆಯ ಸಂಘರ್ಷ ಶುರುವಾಗುತ್ತದೆ. ಹಾಗಾಗಬಾರದು ಎಂದರೆ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಕರ್ನಾಟಕದ ಉಸ್ತುವಾರಿಯಿಂದ ಎತ್ತಂಗಡಿ ಮಾಡಬೇಕು ಎಂಬುದು ಈ ನಾಯಕರ ಮತ್ತು ಹಲವು ಶಾಸಕರ ಪಟ್ಟು. ಪರಿಣಾಮ.? ಉಪಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ನಲ್ಲಿ ಸುರ್ಜೇವಾಲ ಹಟಾವೋ ಚಳವಳಿ ಸುರುವಾಗಲಿದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕು.

ಸಂಪುಟಕ್ಜೆ ಸೇರ್ತಾರಾ ಖಾದರ್.?

ಈ ಮಧ್ಯೆ ವಿಧಾನಸಭಾದ್ಯಕ್ಷ ಯು.ಟಿ. ಖಾದರ್ ಮಂತ್ರಿ ಮಂಡಲಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಇಂತಹ ಸುದ್ದಿಗೆ ಫೋರ್ಸು ನೀಡುತ್ತಿರುವ ಖಾದರ್ ಅವರ ಆಪ್ತ ವಲಯ, ಮೇ‌ ಇಪ್ಪತ್ತರ ನಂತರ ಖಾದರ್ ಅವರು ಸಿದ್ದರಾಮಯ್ಯ ಸಂಪುಟಕ್ಕೆ ಸೇರುವುದು ಗ್ಯಾರಂಟಿ ಎನ್ನುತ್ತಿದೆ
ಅದರ ಪ್ರಕಾರ, ಖಾದರ್ ಮಂತ್ರಿ ಮಂಡಲಕ್ಕೆ ಸೇರಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಒತ್ತಾಸೆ ನೀಡಿದ್ದಾರೆ. ಹಾಗೆ ನೋಡಿದರೆ ವೇಣುಗೋಪಾಲ್ ಅವರು ಖಾದರ್ ಅವರಿಗೆ ಮತ್ತು ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರಿಗೆ ಕ್ಲೋಜು. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾಗುತ್ತಿದ್ದಂತೆಯೇ ಸಂಪುಟ ಪುನರ್ರಚನೆ ಗ್ಯಾರಂಟಿ. ನೀವು ಮಂತ್ರಿಯಾಗುವುದು ಗ್ಯಾರಂಟಿ ಅಂತ ಕೆ.ಸಿ. ವೇಣುಗೋಪಾಲ್ ಅವರು ಖಾದರ್ ಅವರಿಗೆ ಭರವಸೆ ನೀಡಿದ್ದಾರೆ.

ಇದೇ ಮೂಲಗಳ ಪ್ರಕಾರ: ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವಾಗಿರುವುದರಿಂದ ಖಾದರ್ ಅವರು ಎರಡು ಪವರ್ ಫುಲ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗೆ ಅವರು ಕಣ್ಣಿಟ್ಟಿರುವ ಎರಡು ಖಾತೆಗಳ ಪೈಕಿ ಒಂದು ಇಂಧನ ಖಾತೆ. ಮತ್ತೊಂದು ಭಾರೀ ಕೈಗಾರಿಕಾ ಖಾತೆ.
ಹೀಗೆ ತಾವು ಕಣ್ಣಿಟ್ಟಿರುವ ಖಾತೆಗಳಲ್ಲಿ ಎಫೆಕ್ಟಿವ್ ಅಗಿ ಕೆಲಸ ಮಾಡಲು ತಮಗೆ ಸಾಧ್ಯ ಎಂಬುದು ಖಾದರ್ ಅವರ ಲೆಕ್ಕಾಚಾರ. ಅದರೆ ತಮಗೆ ಅಪ್ತರಾಗಿರುವ ಕೆ.ಜೆ.ಜಾರ್ಜ್ ಅವರ ಕೈಯ್ಯಿಂದ ಇಂಧನ ಖಾತೆಯನ್ನು ಕಿತ್ತುಕೊಳ್ಳಲು ಸಿದ್ದರಾಮಯ್ಯ ಇಷ್ಟಪಡುವುದಿಲ್ಲ. ಇನ್ನು ಎಂ.ಬಿ. ಪಾಟೀಲ್ ಅವರು ಬೇರೆ ಖಾತೆ ಪಡೆಯಲು ಒಪ್ಪಿದರೆ ಕೈಗಾರಿಕಾ ಖಾತೆ ಪಡೆಯುವ ಖಾದರ್ ಅವರ ಕನಸು ಈಡೇರಬಹುದು.

ಅದೇನೇ ಇರಲಿ. ಒಟ್ಟಿನಲ್ಲಿ ಖಾದರ್ ಮಂತ್ರಿಯಾಗುವುದು, ಪವರ್ ಪುಲ್ ಖಾತೆಯೊಂದನ್ನು ಪಡೆಯುವುದು ಗ್ಯಾರಂಟಿ ಎಂಬುದು ಅವರ ಆಪ್ತರ ಮಾತು.

ದಿನೇಶ್ ಗುಂಡೂರಾವ್ ಹೊಸ ಸ್ಪೀಕರ್.?

ಹೀಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಂತ್ರಿಯಾಗುತ್ತಾರೆ ಎಂಬ ಸುದ್ದಿಯ ನಡುವೆ ಅವರು ತೆರವು ಮಾಡುವ ಸ್ಪೀಕರ್ ಸ್ಠಾನಕ್ಕೆ ಯಾರು ಬರುತ್ತಾರೆ ಎಂಬ ಚರ್ಚೆಗಳು ಶುರುವಾಗಿವೆ. ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾಗುವ ಸಂದರ್ಭದಲ್ಲಿ ಸಂಪುಟ ಪುನರ್ರಚನೆಗೆ ಅನುಮತಿ ಕೊಡಿ ಅಂತ ಸಿಎಂ ಸಿದ್ದರಾಮಯ್ಯ ವರಿಷ್ಟರನ್ನು ಕೋರುವುದು ಗ್ಯಾರಂಟಿ.
ಇದೇ ರೀತಿ ಸಂಪುಟ ಪುನರ್ರಚಿಸಲು ಒಪ್ಪಿಗೆ ನೀಡುವ ಲೆಕ್ಕಾಚಾರ ರಾಹುಲ್ ಗಾಂಧಿ ಅವರಿಗೂ ಇದೆ. ಆದರೆ ಸಿಎಂ ಪಟ್ಟ ತಮಗೆ ಬೇಕೇ ಬೇಕು ಅಂತ ಪಟ್ಟು ಹಿಡಿದು ಕುಳಿತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇನಾದರೂ ವರಾತ ತೆಗೆದರೋ.? ಆಗ ಸಂಪುಟ ಪುನರ್ರಚನೆಯಾಗುವುದು ಕಷ್ಟ.
ಹಾಗೇನಾದರೂ ಆದರೆ ಮಂತ್ರಿಯಾಗುವ ಯು.ಟಿ.ಖಾದರ್ ಅವರ ಬಯಕೆ ಸಧ್ಯಕ್ಕೆ ಈಡೇರುವುದಿಲ್ಲ.

ಒಂದು ವೇಳೆ ಯಾವ ವಿರೋಧಗಳಿಗೂ ಬಗ್ಗದೆ ರಾಹುಲ್ ಗಾಂಧಿ ಸಂಪುಟ ಪುನರ್ರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟರೆ ಯು.ಟಿ. ಖಾದರ್ ಸಂಪುಟ ಸೇರುತ್ತಾರೆ. ಹೀಗೆ ಅವರು ಸಂಪುಟ ಸೇರಿದರೆ ಅವರು ತೆರವು ಮಾಡುವ ಸ್ಪೀಕರ್ ಹುದ್ದೆಗೆ ಹಾಲಿ ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬರುವ ಸಾಧ್ಯತೆ ಜಾಸ್ತಿ. ಹಲವು ಖಾತೆಗಳನ್ನು ನಿಭಾಯಿಸಿ ಸೈ ಎನ್ನಿಸಿಕೊಂಡಿರುವ ದಿನೇಶ್ ಗುಂಡೂರಾವ್ ಸ್ಪೀಕರ್ ಹುದ್ದೆಗೆ ಸೂಟಬಲ್ಲು ಎಂಬ ಮಾತಿಗೆ ಉಳಿದವರು ತಕರಾರು ಮಾಡುವ ಸಾಧ್ಯತೆ ಕಡಿಮೆ.

ಕಡಲ ತೀರಕ್ಕೆ ಅರೆಸ್ಸೆಸ್ ಲಗ್ಗೆ

ಈ ಮಧ್ಯೆ ಏಪ್ರಿಲ್ ಹತ್ತರಂದು ಆರೆಸ್ಸೆಸ್ ನ‌ ಮಹತ್ವದ ಸಭೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ನಡೆಯಲಿದೆ. ಈ ಸಭೆಯ ಮುಖ್ಯ ಅಜೆಂಡಾ ಎಂದರೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಕುಸಿದಿರುವ ಸಂಘಟನೆಯ ಶಕ್ತಿಯನ್ನು ಮರಳಿ ಮೇಲೆತ್ತುವುದು.

ಆರೆಸ್ಸೆಸ್ ಮೂಲಗಳ ಪ್ರಕಾರ, ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಅರೆಸ್ಸೆಸ್ ಚಟುವಟಿಕೆಗಳು ಕಡಿಮೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆ ಗೆ ಹೆಚ್.ವಿ.ದರ್ಶನ್ ಅವರು ಜಿಲ್ಲಾದಿಕಾರಿಯಾಗಿ, ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳೂರಿನ‌ ಪೊಲೀಸ್ ಕಮೀಷ್ನರ್ ಅಗಿ ಬಂದ ನಂತರ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಟಫ್ ರೂಲ್ಸುಗಳು ಜಾರಿಯಾಗಿದ್ದು ಯಾರೂ ಕಮಕ್ಕಿಮಕ್ ಎನ್ನಲು ಸಾಧ್ಯವಿಲ್ಲದಂತಾಗಿದೆ. ಸೋಷಿಯಲ್ ಮೀಡಿಯಾ ವಾರುಗಳಿಗಂತೂ ಈ ಜೋಡಿ ಯಾವ ಪರಿ ಬಾರು ಹಾಕಿದೆ ಎಂದರೆ ಕರಾವಳಿ ಕಂಪ್ಲೀಟು ತಣ್ಣಗಾಗಿದೆ.

ಹೀಗೆ ಕರಾವಳಿ ಕಂಪ್ಲೀಟು ತಣ್ಣಗಾಗಿರುವುದರಿಂದ ರಾಜಕೀಯ ಪಕ್ಷಗಳಿಗೇ ಆಗಲಿ, ಸಂಘಟನೆಗಳಿಗೇ ಆಗಲಿ ಹೇಳಿಕೊಳ್ಳುವಂತಹ ಕೆಲಸವಿಲ್ಲ. ಅದರೆ ಪರಿಸ್ಥಿತಿ ಹೀಗೇ ಮುಂದುವರಿದರೆ ಗತಿ ಎನು.? ಹೀಗಾಗಿ ಕರಾವಳಿ ಭಾಗದಲ್ಲಿ ಸಂಘಟನೆಯ ಚಟುವಟಿಕೆಗಳಿಗೆ ಬಲ ತುಂಬುವ ಕಾರ್ಯತಂತ್ರಗಳನ್ನು ರೂಪಿಸಲು ಆರೆಸ್ಸೆಸ್ ಪ್ರಮುಖರು ಏಪ್ರಿಲ್ ಹತ್ತರಂದು ಮಹತ್ವದ ಸಭೆ ನಡೆಸಲಿದ್ದಾರೆ.

ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಅರೆಸ್ಸೆಸ್ ಚಟುವಟಿಕೆಗಳನ್ನು ಬಲಪಡಿಸಲು ಉತ್ತರ ಕರ್ನಾಟಕ ಪ್ರಾಂತೀಯ ಸಂಘಟನೆ ಮತ್ತು ದಕ್ಷಿಣ ಕರ್ನಾಟಕ ಪ್ರಾಂತೀಯ ಸಂಘಟನೆಗಳು ಅಸ್ತಿತ್ವದಲ್ಲಿವೆ.
ಆದರೆ ಬದಲಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೊಸತಾಗಿ ಕರಾವಳಿ ಪ್ರಾಂತೀಯ ಸಂಘಟನೆ ತಲೆ ಎತ್ತಲಿದೆ.
ಕರಾವಳಿ ಭಾಗದ ಜಿಲ್ಲೆಗಳು, ಮಲೆನಾಡು ಮತ್ತು ಕೊಡಗಿನ ಭಾಗಗಳನ್ನು ಒಳಗೊಳ್ಳಲಿರುವ ಈ ಪ್ರಾಂತೀಯ ಸಂಘಟನೆ ಆಪರೇಷನ್ 2028 ಗೆ ಸಿದ್ದತೆ ನಡೆಸಲಿದೆ.

ಅರ್ಥಾತ್, ಕರಾವಳಿ, ಮಲೆನಾಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಬಿಜೆಪಿ ಬಂಪರ್ ಗೆಲುವು ಸಾಧಿಸುವಂತಾಗಬೇಕು ಎಂದು ಆರೆಸ್ಸೆಸ್ ಬಯಸಿದೆ.

ಲಾಸ್ಟ್ ಸಿಪ್

ಅಂದ ಹಾಗೆ ದಾವಣಗೆರೆ ದಕ್ಷಿಣ ವಿದಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಸಮರ್ಥ್ ಶಾಮನೂರು ಮುಂದಿರುವಂತೆ ಬಾಸವಾಗುತ್ತಿದೆಯಾದರೂ, ಎಸ್‌ಡಿ.ಪಿ.ಐ ಅಭ್ಯರ್ಥಿ ಅಪ್ಸರ್, ಪಕ್ಷೇತರ ಅಭ್ಯರ್ಥಿ ಖಾದರ್ ಅದಿಲ್ ಪಾಷಾ ಸೇರಿದಂತೆ ಹಲ ಮುಸ್ಲಿಂ ಅಭ್ಯರ್ಥಿಗಳು ದೊಡ್ಡ ಮಟ್ಟದಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯುವಂತೆ ಕಾಣುತ್ತಿದೆ. ಹಾಗೇನಾದರೂ ಆದರೆ ಕಾಂಗ್ರೆಸ್ ಸೋತು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಗೆದ್ದರೂ ಅಚ್ಚರಿಯಿಲ್ಲ. ಹಾಗೇನಾದರೂ ಆದರೆ ಕರ್ನಾಟಕ, ಬಿಹಾರ ಮಾದರಿಯತ್ತ ಹೊರಳುತ್ತಿದೆ ಅಂತಲೇ ಅರ್ಥ. ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಾಗಿ‌ ಕಣಕ್ಕಿಳಿದಿದ್ದರಲ್ಲದೆ, ಕಾಂಗ್ರೆಸ್ಸಿಗೆ ಅಡ್ಡೇಟು ಹೊಡೆದು ಬಿಜೆಪಿಗೆ ಅನುಕೂಲವಾಗುವಂತೆ ಮಾಡಿದ್ದರು. ಆ ಪರಂಪರೆ ಕರ್ನಾಟಕದಲ್ಲಿ ಮುಂದುವರೆಯುತ್ತದಾ ಎಂಬುದೇ ಸಧ್ಯದ ಕುತೂಹಲ.