ತೂತುಕುಡಿ ಲಾಕಪ್ ಡೆತ್ ಪ್ರಕರಣ: ಐತಿಹಾಸಿಕ ತೀರ್ಪು; 9 ಮಂದಿ ಪೊಲೀಸರಿಗೆ ಮರಣದಂಡನೆ

ರಾಷ್ಟ್ರೀಯ

ಅಧಿಕಾರ ದುರುಪಯೋಗದ ಪರಮಾವಧಿ: ನ್ಯಾಯಾಲಯ; “ಅಪರೂಪದಲ್ಲಿ ಅತ್ಯಪರೂಪದ” ಪ್ರಕರಣ ಎಂದು ಪರಿಗಣಿಸಿದ್ದ ಸಿಬಿಐ

ಆರು ವರ್ಷಗಳ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ವ್ಯಾಪಾರಸ್ಥ ಜಯರಾಜ್ ಮತ್ತು ಆತನ ಪುತ್ರ ಬೆನಿಕ್ಸ್ ಈ ಇಬ್ಬರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯವು ಸೋಮವಾರ ಐತಿಹಾಸಿಕ ತೀರ್ಪನ್ನು ನೀಡಿದೆ. ಪೊಲೀಸರಿಗೆ ಮರಣದಂಡನೆ ವಿಧಿಸಿರುವ ಕೋರ್ಟ್ ಈ ಭೀಕರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್ ಸೇರಿದಂತೆ ಒಟ್ಟು ಒಂಬತ್ತು ಮಂದಿ ಪೊಲೀಸರಿಗೆ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಇದೊಂದು “ಅಧಿಕಾರ ದುರುಪಯೋಗದ ಪರಮಾವಧಿ” ಎಂದು ಬಣ್ಣಿಸಿರುವ ನ್ಯಾಯಾಲಯವು, ತಂದೆ-ಮಗನನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ಮಾಡಿದ ರೀತಿ ಓದಿದರೇ ಎಂತಹಾ ಹೃದಯ ಕೂಡಾ ನಡುಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಅಮಾನುಷ ಕೃತ್ಯವನ್ನು “ಅಪರೂಪದಲ್ಲಿ ಅತ್ಯಪರೂಪದ” ಪ್ರಕರಣ ಎಂದು ಪರಿಗಣಿಸಿದ್ದ ಸಿಬಿಐ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾದ ಮರಣದಂಡನೆ ನೀಡುವಂತೆ ವಾದ ಮಂಡಿಸಿತ್ತು. ಮೂವರು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ಮೃತದೇಹಗಳ ಮೇಲಿದ್ದ ಭೀಕರ ಗಾಯದ ಗುರುತುಗಳು ಈ ಘಟನೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದವು.

ಜೂನ್ 19, 2020 ರಂದು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದರು. ಸಾಥಾನ್‌ಕುಲಂ ಪೊಲೀಸ್ ಠಾಣೆಯಲ್ಲಿ ರಾತ್ರಿಯಿಡೀ ನಡೆದ ಅಮಾನವೀಯ ಚಿತ್ರಹಿಂಸೆಯಿಂದಾಗಿ ಕೆಲವೇ ದಿನಗಳಲ್ಲಿ ಇಬ್ಬರೂ ಮೃತಪಟ್ಟಿದ್ದರು. ಮೃತರ ಗುದನಾಳದಿಂದ ರಕ್ತಸ್ರಾವವಾಗುವಷ್ಟು ಭೀಕರವಾಗಿ ಪೊಲೀಸರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.‌

ಈ ಪ್ರಕರಣದ ತನಿಖೆ ನಡೆಸಿದ ಸಿಬಿಐಗೆ ಠಾಣೆಯಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ನೀಡಿದ ಸಾಕ್ಷ್ಯವು ಪ್ರಮುಖ ತಿರುವಿನಂತೆ ಕೆಲಸ ಮಾಡಿತ್ತು. ಠಾಣೆಯ ಮೇಜು ಮತ್ತು ಲಾಠಿಗಳ ಮೇಲೆ ರಕ್ತದ ಕಲೆಗಳಿದ್ದವು ಎಂಬ ಅವರ ಹೇಳಿಕೆಯು ಪೊಲೀಸರ ಪಾಪದ ಕೃತ್ಯವನ್ನು ಬಯಲಿಗೆಳೆದಿತ್ತು. ಸಾಕ್ಷ್ಯ ನಾಶಪಡಿಸಲು ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕುವ ಪ್ರಯತ್ನ ನಡೆದಿದ್ದರೂ, ಸಿಬಿಐ ವ್ಯವಸ್ಥಿತವಾಗಿ ತನಿಖೆ ನಡೆಸಿ ಹತ್ತು ಪೊಲೀಸರ ವಿರುದ್ಧ ಕೊಲೆ ಕೇಸ್ ದಾಖಲಿಸಿತ್ತು. ಐದು ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರಿಶೀಲಿಸಲಾಗಿತ್ತು.

ನ್ಯಾಯಮೂರ್ತಿ ಜಿ. ಮುತ್ತುಕುಮಾರನ್‌ ಈ ತೀರ್ಪು ದೇಶದ ಇತಿಹಾಸದಲ್ಲೇ ಅಪರೂಪ ಎಂದು ಬಣ್ಣಿಸಿದರು. ʼʼಕಾನೂನು ಕಾಪಾಡಬೇಕಾದ ಪೊಲೀಸರೇ ಅದನ್ನು ಉಲ್ಲಂಘಿಸಿದ್ದಾರೆ. ತಂದೆ-ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಜಯರಾಜ್‌ ಮತ್ತು ಬೆನ್ನಿಕ್ಸ್‌ ವಿರುದ್ಧ ಯಾವುದೇ ಕ್ರಿಮಿನಲ್‌ ಕೇಸ್‌ ಇಲ್ಲದಿದ್ದರೂ ಪೊಲೀಸರು ಹಿಂಸೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ 1.40 ಕೋಟಿ ರೂಪಾಯಿ ಪರಿಹಾರ ನೀಡುವಂತೆಯೂ ಅಪರಾಧಿಗಳಿಗೆ ಸೂಚಿಸಲಾಗಿದೆ. ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತು. ಜನಾಕ್ರೋಶ ತೀವ್ರಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತು.

ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿದ್ದಾರೆ, ಆದರೆ ಈ ತೀರ್ಪು ಅಧಿಕಾರವನ್ನೇ ಆಯುಧವನ್ನಾಗಿ ಬಳಸುವವರಿಗೆ ಪಾಠವಾಗಲಿದೆ ಎಂದು ನ್ಯಾಯಾಲಯ ಹೇಳಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾದವರಲ್ಲಿ ಪೊಲೀಸರೇ ಇರುವುದು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಕನ್ನಡಿ ಹಿಡಿದಿದೆ. ಈ ತೀರ್ಪು ಜಯರಾಜ್ ಮತ್ತು ಬೆನಿಕ್ಸ್ ಕುಟುಂಬಕ್ಕೆ ಕೊನೆಗೂ ನ್ಯಾಯ ದೊರಕಿಸಿಕೊಟ್ಟಂತಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ತೀರ್ಪನ್ನು ಸ್ವಾಗತಿಸಿದ್ದು, ಇದು ಪೊಲೀಸ್ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.